ಸರ್ಕಾರದ ಕ್ರಮ ಖಂಡನೀಯ

7

ಸರ್ಕಾರದ ಕ್ರಮ ಖಂಡನೀಯ

Published:
Updated:

ಹುಬ್ಬಳ್ಳಿ: `ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ನಡೆಸಿದ ಕಂಪೆನಿಗಳ ವಿವರಗಳನ್ನು ಹಾಗೂ ಅದಕ್ಕೆ ಅನುಕೂಲ ಕಲ್ಪಿಸಿದ ರಾಜಕಾರಣಿಗಳು ಹಾಗೂ ಅಧಿಕಾರಶಾಹಿಗಳ ದುಷ್ಟ ಮೈತ್ರಿಕೂಟದ ಬಗ್ಗೆ ವರದಿ ನೀಡಿದ್ದರೂ ಅಂಥವರ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಬದಲು ಲೋಕಾಯುಕ್ತದಲ್ಲಿದ್ದ ದಕ್ಷ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಕ್ರಮ ಖಂಡನೀಯ~ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಟೀಕಿಸಿದರು.`ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯನ್ನು ತ್ವರಿತಗೊಳಿಸಬೇಕು~ ಎಂದು ತಾವು ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ (ಇಂಟರ್‌ಲೊಕ್ಯೂಟರಿ ಅಪ್ಲಿಕೇಷನ್-ಐಎ) ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಅರಣ್ಯ ಪೀಠ ನೀಡಿದ ತೀರ್ಪಿನ ಸಾರಾಂಶವನ್ನು ತಿಳಿಸಲು ಸೋಮವಾರ ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಪ್ರಕರಣದ ಆಳವನ್ನು ಭೇದಿಸಲು ಸಿಬಿಐ ತನಿಖೆ ನಡೆಸಬೇಕೇ ಎಂಬುದರ ಬಗ್ಗೆ ವರದಿ ನೀಡುವಂತೆ ಕೋರ್ಟ್ ಆದೇಶ ನೀಡಿರುವುದು ಅತ್ಯಂತ ಮಹತ್ವದ್ದಾಗಿದೆ.ರಾಜಕಾರಣಿಗಳು ಹಾಗೂ ನೌಕರಶಾಹಿ ಕೂಟದ ಪರಸ್ಪರ ಸಹಕಾರದಿಂದಲೇ ಇಂಥ ಅಕ್ರಮ ನಡೆದಿದೆ. ಇದು ಸೂಕ್ತ ರೀತಿಯಲ್ಲಿ ತನಿಖೆ ಮಾಡಲು ಸಿಬಿಐಗೆ ವಹಿಸುವುದೇ ಸರಿಯಾದ ನಿರ್ಧಾರ~ ಎಂದು ಅಭಿಪ್ರಾಯಪಟ್ಟರು.`ಕೇಂದ್ರ ಉನ್ನತಾಧಿಕಾರ ಸಮಿತಿಯು ಅಕ್ರಮ ಗಣಿಗಾರಿಕೆ ನಡೆದ ಬಗ್ಗೆ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ನಾವೂ ಅದರಲ್ಲಿ ಭಾಗವಹಿಸಬೇಕಿತ್ತು. ಸಿಇಸಿ ವರದಿಯಲ್ಲಿ ಕೆಲವು ಲೋಪ-ದೋಷಗಳೂ ಇವೆ. ಉತ್ತಮ ಅದಿರು, ಉತ್ತಮವಲ್ಲದ ಅದಿರನ್ನು ಪರಿಶೀಲಿಸಲು ಸಿಇಸಿಗೆ ಗುರುತಿಸಲಾಗಿಲ್ಲ. ಏಕೆಂದರೆ ಆ ಸಮಿತಿಯಲ್ಲಿ ಗಣಿ ಎಂಜಿನಿಯರ್‌ಗಳೇ ಇರಲಿಲ್ಲ~ ಎಂದರು.ಯಡಿಯೂರಪ್ಪ ನೇರಾನೇರ! ಯಾರೂ ಸಹ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಷ್ಟು ನೇರವಾಗಿ ಭ್ರಷ್ಟಾಚಾರಕ್ಕೆ ಇಳಿದಿಲ್ಲ.

 

ತಮ್ಮ ಪುತ್ರರು ಹಾಗೂ ಅಳಿಯ ಸದಸ್ಯರಾಗಿರುವ ಪ್ರೇರಣಾ ಟ್ರಸ್ಟ್‌ಗೆ ಜಿಂದಾಲ್ ಕಂಪೆನಿಯ ಅಂಗಸಂಸ್ಥೆ ಸೌತ್ ವೆಸ್ಟ್ ಮೈನಿಂಗ್ ಕಂಪೆನಿಯಿಂದ ಚೆಕ್ ಮೂಲಕವೇ ದೇಣಿಗೆ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಅದೇ ಯಡಿಯೂರಪ್ಪ ಜೈಲಿನಿಂದ ಹೊರಗೆ ಬಂದ ಕೂಡಲೇ ಲೋಕಾಯುಕ್ತ ಡಿಐಜಿ ಪ್ರಣವ್ ಮೊಹಾಂತಿ ಅವರನ್ನು ವರ್ಗಾವಣೆ ಮಾಡಿಸಿದರು ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry