ಸರ್ಕಾರದ ಬಣ್ಣ ಶೀಘ್ರ ಬಯಲು: ಎಚ್ಕೆ

7

ಸರ್ಕಾರದ ಬಣ್ಣ ಶೀಘ್ರ ಬಯಲು: ಎಚ್ಕೆ

Published:
Updated:

ಹೊಸಪೇಟೆ : `ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಕಡೆಗಣಿಸಿ, ರಾಜ್ಯದ ನೀರಾವರಿ ಹಿತವನ್ನು ಬಲಿ ನೀಡಿರುವ ಬಿಜೆಪಿ ಸರ್ಕಾರದ ಬಣ್ಣವನ್ನು ಬಯಲುಮಾಡುವ ಹಾಗೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬದ್ಧತೆಯನ್ನು ಸಾರ್ವತ್ರೀಕರಣಗೊಳಿಸಲು ಪಾದಯಾತ್ರೆ ಆರಂಭಿಸಿದ್ದು ಜನ ಜಾಗೃತಿ ಮಾಡುವ ಕೆಲಸವನ್ನು ಕಾರ್ಯಕರ್ತರು ನಿರ್ವಹಿಸಬೇಕು' ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.ಹೊಸಪೇಟೆಯಲ್ಲಿ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಮೂರು ಹಂತದ ಪಾದಯಾತ್ರೆ ನಿಮಿತ್ತ ಹೊಸಪೇಟೆಯಲ್ಲಿ ಉತ್ತರ ಕರ್ನಾಟಕದ 6 ಜಿಲ್ಲೆಗಳ ಜಿಲ್ಲಾ ಘಟಕದ ಅಧ್ಯಕ್ಷರು, ವಿವಿಧ ಬ್ಲಾಕ್ ಕಮಿಟಿಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.“ಕೃಷ್ಣ ಬಿ. ಸ್ಕೀಮ್‌”ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಗಮನಿಸದೇ, ರೈತರಿಗೆ ನೀಡ ಬೇಕಾಗಿರುವ 20 ಟಿಎಂಸಿ ನೀರನ್ನು ಈಗಾಗಲೇ ಕೈಗಾರಿಕೆಗಳಿಗೆ ನೀಡಿ ಇನ್ನು 20 ಟಿಎಂಸಿ ನೀರನ್ನು ನೀಡಲು ತುದಿಗಾಲಮೇಲೆ ನಿಂತಿರುವ ಸರ್ಕಾರ, ತನ್ನ ರೈತವಿರೋಧಿ ನಿಲುವನ್ನು ಪ್ರಕಟಿಸಿದೆ. ಇಂತಹ ಅಂಶಗಳನ್ನು ಕಾರ್ಯಕರ್ತರು ಜನತೆಗೆ ಮನವರಿಕೆ ಮಾಡಬೇಕು' ಎಂದರು.ನೀರಾವರಿ, ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯ ಸಮತೋಲನ ಕಾಪಾಡುವುದು ಮತ್ತು ಉತ್ತಮ ಆಡಳಿತ ನೀಡುವ ಕಾಂಗ್ರೆಸ್ ಭವಿಷ್ಯದ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವುದು ಪಾದಯಾತ್ರೆಯ ಉದ್ಧೇಶವಾಗಿದೆ ಎಂದರು.ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಾತನಾಡಿ, ಪಾದಯಾತ್ರೆ, ಪ್ರತಿನಿತ್ಯ ಕ್ರಮಿಸುವ ಮಾರ್ಗ, ವ್ಯವಸ್ಥೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮತ್ತು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ತಿಳಿಸಿದರು.  ರಾಜ್ಯ ಮುಖಂಡರುಗಳಾದ ಎಸ್.ಆರ್. ಪಾಟೀಲ್  ಬಿ.ಎಲ್.ಶಂಕರ, ಮಲ್ಲಿಕಾರ್ಜನ ನಾಗಪ್ಪ, ಭೋಸರಾಜ್, ಬಸವ ರಾಜ್ ರಾಯರೆಡ್ಡಿ, ಕೆ.ಸಿ,ಕೊಂಡಯ್ಯ, ಎಂ.ಸಿ.ವೇಣುಗೋಪಾಲ, ಎಂ.ಪಿ.ರವೀಂದ್ರ, ಆಂಜನೇಯಲು, ಆಶಾಲತಾ ಸೋಮಪ್ಪ, ಎಚ್. ಆರ್.ಗವಿಯಪ್ಪ, ಗುಜ್ಜಲ ಜಯಲಕ್ಷ್ಮಿ  ಹಾಜರಿದ್ದರು.  ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಬಿಜಾಪುರ, ಗದಗ, ಹುಬ್ಬಳ್ಳಿ ಧಾರವಾಡ, ಹಾವೇರಿ ಜಿಲ್ಲೆಗಳ ಜಿಲ್ಲಾ ಘಟಕದ ಅಧ್ಯಕ್ಷರು  ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry