ಸರ್ಕಾರದ ವಜಾಕ್ಕೆ ಪ್ರತಿಪಕ್ಷಗಳ ಆಗ್ರಹ

7

ಸರ್ಕಾರದ ವಜಾಕ್ಕೆ ಪ್ರತಿಪಕ್ಷಗಳ ಆಗ್ರಹ

Published:
Updated:

ಬೆಂಗಳೂರು: ಸದನದಲ್ಲಿ ಅಶ್ಲೀಲ ದೃಶ್ಯಾವಳಿ ವೀಕ್ಷಣೆ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್, ಸಂವಿಧಾನದ 356ನೇ ವಿಧಿ ಅನ್ವಯ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಲ್ಲಿ ಮನವಿ ಮಾಡಿವೆ.ಭಾರದ್ವಾಜ್ ಅವರನ್ನು ರಾಜಭವನದಲ್ಲಿ ಗುರುವಾರ ಪ್ರತ್ಯೇಕವಾಗಿ ಭೇಟಿ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಹಾಗೂ ಮುಖಂಡರು, `ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿಲ್ಲ. ವಿಧಾನಸಭೆಯ ಸ್ಪೀಕರ್ ಕೆ.ಜಿ. ಬೋಪಯ್ಯ ಕೂಡ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ~ ಎಂದು ದೂರಿದರು.ಕಾಂಗ್ರೆಸ್‌ನ ಕೋರಿಕೆ: ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಕೃಷ್ಣ ಪಾಲೆಮಾರ್ ಮತ್ತು ಸಿ.ಸಿ. ಪಾಟೀಲ ಅವರು `ಬ್ಲೂ ಫಿಲಂ~ ಪ್ರಕರಣದಲ್ಲಿ ಕಳಂಕಿತರಾಗುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಮಾಜಿ ಸಚಿವರ ಕೃತ್ಯ ಸದನದ ನಿಂದನೆಯೂ ಹೌದು ಎಂದು ರಾಜ್ಯಪಾಲರಿಗೆ ನೀಡಿರುವ ಮನವಿಯಲ್ಲಿ ಕಾಂಗ್ರೆಸ್ ಹೇಳಿದೆ.

ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರನ್ನು ಸದನದಿಂದ ಅಮಾನತು ಮಾಡಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸ್ಪೀಕರ್ ಬೋಪಯ್ಯ ಅವರಲ್ಲಿ ಮನವಿ ಮಾಡಲಾಯಿತು.

 

ಆದರೆ ಅವರು, ಸರ್ಕಾರವನ್ನು ಕಾಪಾಡುವ ಸಲುವಾಗಿ ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು ಎಂದು ಕಾಂಗ್ರೆಸ್ ದೂರಿದೆ.ಸ್ಪೀಕರ್ ಮತ್ತು ಮೂವರು ಮಾಜಿ ಸಚಿವರ ವರ್ತನೆ  ಆಡಳಿತ ವ್ಯವಸ್ಥೆಯ ಕುಸಿತ ಎಂದು ಪರಿಗಣಿಸಿ, ಸರ್ಕಾರದ ವಜಾಕ್ಕೆ ಶಿಫಾರಸು ಮಾಡಬೇಕು ಎಂದು ಕಾಂಗ್ರೆಸ್, ರಾಜ್ಯಪಾಲರನ್ನು ಕೋರಿದೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮತ್ತಿತರರು ನಿಯೋಗದಲ್ಲಿದ್ದರು.ಜೆಡಿಎಸ್ ಮನವಿ: ಕಳಂಕಿತ ಮಾಜಿ ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ್ದರ ಕುರಿತು ತನಿಖೆ ನಡೆಸಲು ವಿಚಾರಣಾ ಸಮಿತಿ ರಚಿಸಿರುವುದು ಸರ್ಕಾರದ ಕಣ್ಣೊರೆಸುವ ತಂತ್ರ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ, ತಪ್ಪೆಸಗಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ನಿಯೋಗ ಭಾರದ್ವಾಜ್ ಅವರನ್ನು ಕೋರಿದೆ.

ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಆಡಳಿತ ವ್ಯವಸ್ಥೆ ಕುಸಿದುಬಿದ್ದಿರುವುದಕ್ಕೆ ಉದಾಹರಣೆ ಎಂದು ಜೆಡಿಎಸ್ ಮನವಿಯಲ್ಲಿ ಹೇಳಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಮತ್ತಿತರರು ನಿಯೋಗದಲ್ಲಿದ್ದರು.ಕಾಂಗ್ರೆಸ್ ಪ್ರತಿಭಟನೆ: ಇದಕ್ಕೂ ಮುನ್ನ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರು ಧರಣಿ ನಡೆಸಿದ ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

`ಬ್ಲೂ ಫಿಲಂ ಪ್ರಕರಣ ಕುರಿತು ಸದನದಲ್ಲಿ ಚರ್ಚೆ ನಡೆಸಲು ಅವಕಾಶ ಕೊಡದೆ ಸರ್ಕಾರ ಹೇಡಿತನ ಪ್ರದರ್ಶಿಸಿದೆ~ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry