ಭಾನುವಾರ, ಜನವರಿ 26, 2020
29 °C
ವೃತ್ತಿ ಶಿಕ್ಷಣ ಕಾಯ್ದೆ ಜಾರಿ ಖಂಡಿಸಿ ಪ್ರತಿಭಟನೆ

ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಸಿಇಟಿ  2006 ಕಾಯ್ದೆ ಜಾರಿ ವಿರೋಧಿಸಿ ಬುಧವಾರ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜುಗಳ  ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.ಈ ಕಾಯ್ದೆ ಜಾರಿಗೊಳಿಸುವುದರಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದ ಸೀಟು ಸಿಗುವುದಿಲ್ಲ. ಪ್ರವೇಶ­ದಲ್ಲಿ ಪರಿಶಿಷ್ಟರು, ಹಿಂದುಳಿದ­ವರು ಸೇರಿ ಶೇಕಡಾ 50 ರಷ್ಟು ಮೀಸ­ಲಾತಿ ನಿಯಮ ಅನ್ವಯವಾದರೂ ಶುಲ್ಕ ಮಾತ್ರ ಏಕ ರೂಪವಾಗಿರುತ್ತದೆ. ಇದ­ರಿಂದ ಬಡ ಪ್ರತಿಭಾವಂತರು ವಂಚಿತ­ರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಲೇಜುವಾರು ಪ್ರತ್ಯೇಕ ಶುಲ್ಕ ನಿಗದಿ­ಯಾಗಿರುವುದರಿಂದ ಖಾಸಗಿ ಕಾಲೇಜು­ಗಳಲ್ಲಿ ದುಬಾರಿ ಶುಲ್ಕ ಭರಿಸಬೇಕಾ­ಗುತ್ತದೆ. ಕಳೆದ ವರ್ಷ ಸಿಇಟಿ ಮೂಲಕ ವೈದ್ಯಕೀಯ ಸೀಟುಗಳು 2,591 ಲಭ್ಯ­ವಿದ್ದವು. ಆದರೆ ಕಾಯ್ದೆ ಜಾರಿಯಿಂದ ಈ ಸೀಟುಗಳು 1,150ಕ್ಕೆ ಸೀಮಿತ­ವಾಗಲಿವೆ. ಅದೇ ರೀತಿ 49,580 ಎಂಜಿನಿಯರಿಂಗ್‌ ಸೀಟುಗಳು ಕಳೆದ ವರ್ಷ ಲಭ್ಯವಿದ್ದು ಕಾಯ್ದೆಯಿಂದ 6,150 ಕ್ಕೆ ಸೀಮಿತಗೊಳ್ಳಲಿದೆ. ­ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ­ವಾಗುತ್ತದೆ ಎಂದು ದೂರಿದರು.ಸರ್ಕಾರವು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ಭಾರಿ ಶುಲ್ಕ ಕಟ್ಟಬೇಕಾದ ಅನಿರ್ವಾಯತೆ ಸೃಷ್ಟಿಸಿದೆ. ಈಗ ಎಲ್ಲ ಕೋರ್ಸ್‌ಗಳ ಸೀಟುಗಳು ಸೇರಿ ಒಟ್ಟಾರೆ 10,000 ಸೀಟುಗಳಿಗೆ ಮಾತ್ರ ಸರ್ಕಾರ ಪ್ರವೇಶ ನೀಡಲಿರುವು­ದರಿಂದ ಇತರೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಈಗಾಗಲೇ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿದೆ. ಕಾಮೆಡ್‌–ಕೆ ಎಂಬ ವಿದ್ಯಾರ್ಥಿ ವಿರೋಧಿ ಧನ­ದಾಹಿ ಖಾಸಗಿ ಆಡಳಿತ ಮಂಡಳಿ ಪರವಾಗಿ ಸರ್ಕಾರಿ ಕಾಯ್ದೆ ರೂಪಿತವಾಗಿದೆ ಎಂದು ಟೀಕಿಸಿದರು.ರಾಜ್ಯದಲ್ಲಿ ಒಂದೇ ಸರ್ಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಬೇಕು. ಶೇ.50 ರಷ್ಟು ಸೀಟುಗಳಿಗೆ ಈಗಿರು­ವಂತೆಯೇ ಸರ್ಕಾರದ ಶುಲ್ಕ ಮುಂದು­ವರೆಸಬೇಕು. ಉಳಿದ ಶೇ.50 ರಷ್ಟು ಸೀಟುಗಳಿಗೆ ಆಡಳಿತ ಮಂಡಳಿ ಜತೆ ಚರ್ಚಿಸಿ ಶುಲ್ಕ ನಿಗದಿ­ಗೊಳಿಸಬೇಕು. 2006ರ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.ಹೊಸ ಬಸ್‌ ನಿಲ್ದಾಣದಿಂದ ಉಪವಿಭಾಗಾ­ಧಿಕಾರಿ ಕಚೇರಿಯ­ವರೆಗೂ ನೂರಾರು ಮಂದಿ ವಿದ್ಯಾರ್ಥಿ­ಗಳು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ ನಟೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಎಬಿವಿಪಿ ಘಟಕದ ನಗರ ಕಾರ್ಯದರ್ಶಿ ಅರುಣ್‌ ಕುಮಾರ್‌, ಸುನಿಲ್‌, ನಂದ, ಶಿಲ್ಪಾ, ಕಿಶೋರ್‌, ಸೌಮ್ಯ, ಚೈತ್ರ, ಮಹೇಶ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)