ಸರ್ಕಾರದ ವಿರುದ್ಧ ಬೃಹತ್ ರ್ಯಾಲಿ

7

ಸರ್ಕಾರದ ವಿರುದ್ಧ ಬೃಹತ್ ರ್ಯಾಲಿ

Published:
Updated:
ಸರ್ಕಾರದ ವಿರುದ್ಧ ಬೃಹತ್ ರ್ಯಾಲಿ

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ನವದೆಹಲಿಯಲ್ಲಿ ಬೃಹತ್ ರ್ಯಾಲಿ ನಡೆಯಿತು.

ರಾಷ್ಟ್ರದ ವಿವಿಧೆಡೆಯಿಂದ ಆಗಮಿಸಿದ್ದ ಎಡಪಕ್ಷಗಳು ಹಾಗೂ ಕಾಂಗ್ರೆಸ್ಸಿನೊಂದಿಗೆ ಗುರುತಿಸಿಕೊಂಡ ಕಾರ್ಮಿಕ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರಮುಖ ಬೀದಿಗಳ ಮೂಲಕ ಸಾಗಿ ಸಂಸತ್ ಭವನದವರೆಗೆ ಮೆರವಣಿಗೆ ನಡೆಸಿದರು. ಈ ವೇಳೆ ಕಾರ್ಯಕರ್ತರು ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬೆಲೆ ಏರಿಕೆಯನ್ನು, ವಿಶೇಷವಾಗಿ ಆಹಾರ ಪದಾರ್ಥಗಳ ದರ ಹೆಚ್ಚಳವನ್ನು ನಿಯಂತ್ರಿಸಬೇಕು; ಹಣದುಬ್ಬರಕ್ಕೆ ಕಾರಣವಾಗಿರುವ ರಾಷ್ಟ್ರೀಯ ಸಂಪನ್ಮೂಲದ ಲೂಟಿಯನ್ನು ತಡೆಗಟ್ಟಬೇಕು ಎಂದು ಸಂಸತ್ ಭವನದ ಮುಂದೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು ಒತ್ತಾಯಿಸಿದರು.

ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಹೂಡಿಕೆ ವಾಪಸಾತಿ ಕೂಡ ಈ ಸಂಪನ್ಮೂಲ ಲೂಟಿಯ ಒಂದು ಭಾಗವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ಅಮೆರಿಕದ ಬ್ಯಾಂಕುಗಳು ಕುಸಿದುಬಿದ್ದರೂ ಭಾರತದ ಬ್ಯಾಂಕುಗಳು ಕುಸಿಯಲಿಲ್ಲ. ಆದರೂ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯ ಮಾತುಗಳನ್ನು ಆಡುತ್ತಿದೆ ಎಂದು ಕಾರ್ಮಿಕ ಮುಖಂಡರು ಆಕ್ಷೇಪಿಸಿದರು.

ಬಿಜೆಪಿಗೆ ಸೇರಿದ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿಲ್ಲ. ಆದರೆ ಆ ಸಂಘಟನೆ ಪ್ರತಿಭಟನಾಕಾರರ ಎಲ್ಲ ಬೇಡಿಕೆಗಳ ಈಡೇರಿಕೆಗೆ ಬೆಂಬಲ ವ್ಯಕ್ತಪಡಿಸಿದೆ.

ಆನಂತರ ಮುಖಂಡರಾದ ಸಂಜೀವ ರೆಡ್ಡಿ, ಗುರುದಾಸ್ ದಾಸ್‌ಗುಪ್ತ ನೇತೃತ್ವದಲ್ಲಿ ನಿಯೋಗದಲ್ಲಿ ತೆರಳಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು, ಎಐಟಿಯುಸಿ, ಐಎನ್‌ಟಿಯುಸಿ, ಎಚ್‌ಎಂಎಸ್, ಟಿಯುಸಿಸಿ ಸಂಘಟನೆಗಳಿಗೆ ಸೇರಿದ ಪ್ರಮುಖರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry