ಸರ್ಕಾರದ ವಿಶೇಷ ಅನುದಾನಕ್ಕೆ ಆಗ್ರಹ

7
ನಿರಂತರ ನೀರು ಸರಬರಾಜು ಯೋಜನೆ ವಿಸ್ತರಣೆಗೆ ಒಪ್ಪಿಗೆ

ಸರ್ಕಾರದ ವಿಶೇಷ ಅನುದಾನಕ್ಕೆ ಆಗ್ರಹ

Published:
Updated:
ಸರ್ಕಾರದ ವಿಶೇಷ ಅನುದಾನಕ್ಕೆ ಆಗ್ರಹ

ಬೆಳಗಾವಿ: ನಗರದ ಎಲ್ಲ 58 ವಾರ್ಡುಗಳಿಗೆ ನಿರಂತರ ನೀರು ಸರಬರಾಜು ಯೋಜನೆಯನ್ನು (24/7) ವಿಸ್ತರಿಸಬೇಕು ಎಂಬ ಒತ್ತಾಯ, ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ನಡೆದ ಭಾಗೀದಾರರ  (ಗ್ರಾಹಕರು) ಸಮಾಲೋಚನಾ ಸಭೆಯಲ್ಲಿ ವ್ಯಕ್ತವಾಯಿತು.ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ) ಸಂಯುಕ್ತವಾಗಿ ಆಯೋಜಿಸಿದ್ದ ಸಭೆಯಲ್ಲಿ, ಗ್ರಾಹಕರು ಈ ಯೋಜನೆಯ ವಿಸ್ತರಣೆಗೆ ಒಪ್ಪಿಗೆ ನೀಡಿದರು. ಆದರೆ, ಯೋಜನಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದರು.`ನಗರದ 58 ವಾರ್ಡುಗಳ ಪೈಕಿ 10 ವಾರ್ಡುಗಳಲ್ಲಿ ಈಗಾಗಲೇ ನಿರಂತರ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ವಾರ್ಡುಗಳಿಗೆ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲು ಕೆಯುಐಡಿಎಫ್‌ಸಿ 470 ಕೋಟಿ ರೂಪಾಯಿ ಯೋಜನೆಯನ್ನು ಸಿದ್ಧಪಡಿಸಿದೆ' ಸಂಸ್ಥೆಯ ಸಲಹೆಗಾರ ಸಿ.ಎಸ್.ಪ್ರತಿನಿಧಿ ಸಭೆಗೆ ತಿಳಿಸಿದರು.ಈ ಯೋಜನೆಗೆ ಶೇ. 50 ರಷ್ಟು ಹಣವನ್ನು ವಿಶ್ವ ಬ್ಯಾಂಕಿನಿಂದ ನೆರವು ಪಡೆಯಬಹುದು. ಉಳಿದ ಶೇ 50 ರಷ್ಟು ಹಣಕಾಸು ವ್ಯವಸ್ಥೆಯನ್ನು ಕುರಿತು ನಿರ್ಣಯ ಕೈಗೊಳ್ಳಬೇಕು ಎಂದರು. ಈ ಯೋಜನೆಯನ್ನು ಮುಂದಿನ 30 ವರ್ಷಗಳ ಅಭಿವೃದ್ಧಿ ಇಟ್ಟುಕೊಂಡು ತಯಾರಿಸಲಾಗಿದೆ.

2041ರ ಹೊತ್ತಿಗೆ ಬೆಳಗಾವಿ ನಗರದ ಜನಸಂಖ್ಯೆ 8.48 ಲಕ್ಷಕ್ಕೆ ಏರುವ ಸಾಧ್ಯತೆ ಇದೆ. ಈ ಜನಸಂಖ್ಯೆಗೆ 184 ದಶಲಕ್ಷ ಲೀಟರ್ ಪ್ರತಿನಿತ್ಯ (ಎಂಎಲ್‌ಡಿ) ನೀರು ಬೇಕಾಗುತ್ತದೆ. ಆದರೆ ಸಧ್ಯ ಹಿಡಕಲ್ ಹಾಗೂ ರಾಕಸಕೊಪ್ಪ ಜಲಾಶಯದಿಂದ 115 ಎಂ.ಎಲ್.ಡಿ. ನೀರು ಲಭ್ಯವಿದೆ ಸಭೆಗೆ ವಿವರಿಸಿದರು.ಶಾಸಕರಾದ ಫಿರೋಜ್ ಸೇಠ್, ಅಭಯ ಪಾಟೀಲ ಸೇರಿದಂತೆ ಗ್ರಾಹಕರು ಮಾತನಾಡಿ, ಈಗ 10 ವಾರ್ಡುಗಳಲ್ಲಿ ನಿರಂತರ ನೀರು ಸರಬರಾಜು ಯೋಜನೆಯು ತೃಪ್ತಿಕರವಾಗಿ ಅನುಷ್ಠಾನಗೊಂಡಿದೆ. ಉಳಿದ 48 ವಾರ್ಡುಗಳಿಗೂ ಸಹ ಈ ಯೋಜನೆ ವಿಸ್ತರಿಸುವುದು ಅವಶ್ಯವಿದೆ. ಆದರೆ ಸಾರ್ವಜನಿಕರಿಗೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.ಈ ಯೋಜನೆ ವಿಸ್ತರಣೆಯಲ್ಲಿ ಖಾಸಗಿ ಸಹಭಾಗಿತ್ವ ಪಡೆಯಲು ಸಭೆ ವಿರೋಧ ವ್ಯಕ್ತಪಡಿಸಿತು. ಖಾಸಗಿ ಸಹಭಾಗಿತ್ವದಿಂದ ಗ್ರಾಹಕರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಆದ್ದರಿಂದ ಸರ್ಕಾರದಿಂದಲೇ ಸಂಪೂರ್ಣ ಅನುದಾನ ಪಡೆಯಬೇಕು ಎಂದು ಗ್ರಾಹಕರು ಒತ್ತಾಯಿಸಿದರು.`ಬಡತನ ರೇಖೆಗಿಂತ ಕೆಳಗಿರುವವರಿಗೆ ಈಗಿರುವ ನೀರಿನ ಕರ ಭರಿಸಲು ಸಾಧ್ಯವಾಗುತ್ತಿಲ್ಲ. ಈ ಯೋಜನೆಯಿಂದ ನೀರಿನ ಕರ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದಿಂದ ಅನುದಾನ ಪಡೆಯಬೇಕು' ಎಂದು ಶಾಸಕ ಸೇಠ್ ಸೂಚಿಸಿದರು.`ಈಗಿರುವ ಪರಿಸ್ಥಿತಿಯಲ್ಲಿ ಯೋಜನಾ ವೆಚ್ಚ ಕಡಿಮೆ ಮಾಡಬೇಕು. ನಿರ್ವಹಣಾ ವೆಚ್ಚ ಕಡಿಮೆ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು. ಪಾಲಿಕೆಯಿಂದ ಹಣ ನೀಡಲು ಸಾಧ್ಯವಿಲ್ಲ' ಎಂದು ಶಾಸಕ ಅಭಯ ಪಾಟೀಲ ಹೇಳಿದರು.ಗ್ರಾಹಕರಾದ ಅನೀಲ ದೇಶಪಾಂಡೆ, ಪಿ.ಬಿ. ಸ್ವಾಮಿ, ರಾಜೇಂದ್ರ ಹರಕುಣಿ, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಸತೀಶ ತೆಂಡೂಲ್ಕರ್, ಸುಧೀರ ಕುಲಕರ್ಣಿ. ಡಾ. ನಿತೀನ ಖೋತ್ ಮಾತನಾಡಿ, ನಿರಂತರ ನೀರು ಸರಬರಾಜು ಯೋಜನೆ ವಿಸ್ತರಣೆ ಅವಶ್ಯವಿದೆ. ಆದರೆ ಅನುದಾನವನ್ನು ಸರ್ಕಾರದಿಂದಲೇ ಪಡೆಯುವುದು ಅನಿವಾರ್ಯ ಎಂದ ಅವರು ತಿಳಿಸಿದರು.ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಅವರು, 235 ಕೋಟಿ ರೂಪಾಯಿಗಳನ್ನು ಪಾಲಿಕೆಯಿಂದ ಭರಿಸಲು ಕಷ್ಟಸಾಧ್ಯ. ಆದ್ದರಿಂದ ಈ ಯೋಜನೆಯ ಅನುಷ್ಠಾನಕ್ಕೆ ಯಾವ ರೀತಿಯ ಹಣಕಾಸು ವ್ಯವಸ್ಥೆಯನ್ನು ಮಾಡಬಹುದು ಎಂಬ ಕುರಿತು ಒಂದು ತಿಂಗಳೊಳಗೆ ವಿವರವಾದ ವರದಿ ನೀಡಬೇಕು ಎಂದು ಕೆಯುಐಡಿಎಫ್‌ಸಿ ಅಧಿಕಾರಿಗಳಿಗೆ ತಿಳಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪರಮಾನಂದ ಗೋದ್ವಾನಿ, ಪಾಲಿಕೆ ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್ ಹಾಗೂ ಬುಡಾ ಆಯುಕ್ತ ಪಿ.ಎನ್.ರವೀಂದ್ರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry