ಸರ್ಕಾರದ ಸೌಲಭ್ಯ ಸದುಪಯೋಗಕ್ಕೆ ಸಲಹೆ

7

ಸರ್ಕಾರದ ಸೌಲಭ್ಯ ಸದುಪಯೋಗಕ್ಕೆ ಸಲಹೆ

Published:
Updated:

ಸಂಡೂರು: ಮಹಿಳೆಯರನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸದೃಢಗೊಳಿಸಿ ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ತಮ್ಮ  ಇಲಾಖೆ ಶ್ರಮಿಸುತ್ತಿದೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್. ಕೃಷ್ಣಮೂರ್ತಿ ಹೇಳಿದರು.ನಿಸರ್ಗ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿ ಸಂಸ್ಥೆ ಹಾಗೂ ಕಸ್ತೂರಬಾ ಮಹಿಳಾ ಒಕ್ಕೂಟ ಹಮ್ಮಿಕೊಂಡಿದ್ದ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಅವರು ಮಾತನಾಡಿದರು.ತಾಲ್ಲೂಕಿನಲ್ಲಿ 690 ಸ್ತ್ರೀಶಕ್ತಿ ಸಂಘಗಳಿವೆ. ಸ್ತ್ರೀಶಕ್ತಿ ಸಂಘಗಳಿಗೆ 5000 ರೂ. ಸುತ್ತು ನಿಧಿ, ಜೊತೆಗೆ ಒಂದು ಲಕ್ಷಕ್ಕೂ ಹೆಚ್ಚು ಹಣ ಉಳಿತಾಯ ಮಾಡಿದ ಸಂಘಗಳಿಗೆ 20,000 ರೂ. ಹಾಗೂ 75ರಿಂದ ಒಂದು ಲಕ್ಷದವರೆಗೆ ಉಳಿತಾಯ ಮಾಡಿದ ಮಹಿಳಾ ಗುಂಪುಗಳಿಗೆ 15,000 ರೂ. ಅದೇ ರೀತಿ ಬ್ಯಾಂಕ್ ಸಾಲ ಪಡೆಯುವ ಪರಿಶಿಷ್ಟ ಜಾತಿ-ಪಂಗಡಗಳ ಗುಂಪುಗಳಿಗೆ 10,000 ರೂ. ಇತರರಿಗೆ 7500 ರೂ. ಇಲಾಖೆಯಿಂದ ಸಹಾಯಧನ ನೀಡಲಾಗುವುದು ಎಂದರು.ಅಲ್ಲದೇ ಸಂಘಗಳ ಸ್ಥಾಪನೆ, ನಿರ್ವಹಣೆ, ಆರ್ಥಿಕ ಸಬಲತೆ ಸಾಧಿಸಲು ತರಬೇತಿ ನೀಡಲಾಗುತ್ತದೆ. ಮಹಿಳಾ ಅಭಿವೃದ್ಧಿ ನಿಗಮದಿಂದಲೂ ಆರ್ಥಿಕ ಸಹಾಯ ಪಡೆಯಬಹುದಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಉಚಿತ ಕಾನೂನಿನ ನೆರವನ್ನು ನೀಡಲಾಗುತ್ತಿದ್ದು, ಈ ಎಲ್ಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಮಹಿಳಾ ಸಂಘಗಳ ಸದಸ್ಯರಿಗೆ ಸಲಹೆ ನೀಡಿದರು.ನಿಸರ್ಗ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಚಂದ್ರಪ್ಪ ಮಾತನಾಡಿ ಹಿಂದೆ ತಾಲ್ಲೂಕಿನ ಬನ್ನಿಹಟ್ಟಿಯಿಂದ ಬಂಡ್ರಿಯವರೆಗೆ ಅಪಾರ ಪ್ರಮಾಣದ ಅರಣ್ಯ ಸಂಪತ್ತಿನಿಂದ ಕಂಗೊಳಿಸುತ್ತಿದ್ದ ಈ ಪ್ರದೇಶವು ಇಂದು ಬಂಜರು ಭೂಮಿಯಂತಾಗಿದೆ. ಪ್ರಾಣಿ-ಪಕ್ಷಿ ಸಂಕುಲ ಮಾಯವಾಗಿದೆ. ಪರಿಸರ ಮರುಸೃಷ್ಟಿ ಮತ್ತು ಅಭಿವೃದ್ಧಿಯ ಜೊತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಾ ಬಂದಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ. ಉಪಾಧ್ಯಕ್ಷ ಎಚ್. ಮಲಿಯಪ್ಪ, ತಾ.ಪಂ. ವ್ಯವಸ್ಥಾಪಕ ಯರ‌್ರಿಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮಂಜುನಾಥ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಜಿ. ಲಕ್ಷ್ಮಿದೇವಿ, ಪುರಸಭೆಯ ಸಮುದಾಯ ಅಭಿವೃದ್ಧಿ ಅಧಿಕಾರಿ ಹಗರಿ ಪ್ರಭುರಾಜ್, ನಿಸರ್ಗ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಶೋಭಾ, ಕಸ್ತೂರಬಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸರೋಜಾಲಕ್ಷ್ಮಿ, ಮಹಿಳಾ ಸಾಕ್ಷರತೆ ಹೆಚ್ಚಿಸುವ ಮತ್ತು ಆರ್ಥಿಕ ಸ್ವಾವಲಂಬನೆ ಬಗ್ಗೆ ಮಾತನಾಡಿದರು.ಕಸ್ತೂರಬಾ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಎಚ್. ವನಿತಾ ವಂದಿಸಿದರು. ಮುಖ್ಯ ಶಿಕ್ಷಕ ಚರಂತಯ್ಯ ಕಾರ್ಯಕ್ರಮ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry