ಶನಿವಾರ, ಏಪ್ರಿಲ್ 17, 2021
32 °C

ಸರ್ಕಾರದ ಹಂಗಿಲ್ಲದ ಸಹಕಾರದ ಸಾಧನೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ರಾಜ್ಯದ ಬಹುತೇಕ ಹಳ್ಳಿಗಳ ಜನರು ಬಹಿರ್ದೆಸೆಗೆ ಇಂದಿಗೂ ಬಯಲನ್ನೇ ಅವಲಂಬಿಸಿದ್ದಾರೆ. ಇದಕ್ಕೆ ಅಪವಾದ ಎನ್ನುವಂತೆ ಇಲ್ಲೊಂದು ಸಹಕಾರ ಸಂಘ ಬಡವರ ಮನೆಗಳಲ್ಲಿ ಶೌಚಾಲಯ ನಿರ್ಮಿಸುತ್ತಾ ಸದ್ದಿಲ್ಲದೇ ‘ಸ್ವಚ್ಛತಾ ಕ್ರಾಂತಿ’ಗೆ ನಾಂದಿ ಹಾಡಿದೆ.ದಾವಣಗೆರೆಯಿಂದ 26 ಕಿ.ಮೀ. ದೂರದಲ್ಲಿರುವ ಚನ್ನಗಿರಿ ತಾಲ್ಲೂಕಿನ ಗಡಿಗ್ರಾಮ ಕಾರಿಗನೂರು. ಇಲ್ಲಿನ ‘ಜೆ.ಎಚ್. ಪಟೇಲ್ ವಿವಿಧೋದ್ದೇಶ ಸಹಕಾರ ಸಂಘ’ ಬಡವರಿಗೆ ಶೌಚಾಲಯ ನಿರ್ಮಿಸಿಕೊಡುವ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ಈಗಾಗಲೇ ` 7.5 ಲಕ್ಷ ವೆಚ್ಚದಲ್ಲಿ 150 ಶೌಚಾಲಯ ನಿರ್ಮಿಸಿಕೊಟ್ಟಿದೆ.600 ಕುಟುಂಬಗಳಿರುವ ಈ ಗ್ರಾಮ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ನಾಯಕ ಜೆ.ಎಚ್. ಪಟೇಲರ ಹುಟ್ಟೂರು. ಲಿಂಗಾಯತರು, ಪರಿಶಿಷ್ಟ ಜಾತಿ, ವರ್ಗ ಹಾಗೂ ಮುಸ್ಲಿಮರು ಇಲ್ಲಿ ವಾಸಿಸುತ್ತಿದ್ದು, ಒಂದು ವರ್ಷದ ಹಿಂದಿನವರೆಗೂ ಇಲ್ಲಿ ಪ್ರತಿಷ್ಠಿತರ ಮನೆಗಳಲ್ಲಿ ಮಾತ್ರ ಶೌಚಾಲಯ ಕಾಣಬಹುದಿತ್ತು. ಆದರೆ, ಒಂದು ವರ್ಷದಲ್ಲಿ ಗ್ರಾಮದ ಚಿತ್ರಣವೇ ಬದಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಮನೆಗಳಲ್ಲೂ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.ಹಿಂದೆಲ್ಲ ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದ ಅನುದಾನ ಬಂದರೂ ಇಲ್ಲಿನ ಬಹುತೇಕ ಜನರಿಗೆ ಅದು ತಲುಪಲಿಲ್ಲ. ಅದರಲ್ಲೂ ದಲಿತರು ಶೌಚಾಲಯ ನಿರ್ಮಾಣಕ್ಕೆ ಮುಂದೆ ಬರಲಿಲ್ಲ. ಇಡೀ ಗ್ರಾಮದ ಸುತ್ತಲ ಜಮೀನುಗಳು ಬಯಲ ಶೌಚಾಲಯಗಳಾಗಿದ್ದವು. ಇಂತಹ ಸಂದರ್ಭದಲ್ಲಿ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿ, ಪ್ರತಿಮನೆಯಲ್ಲೂ ಶೌಚಾಲಯ ನಿರ್ಮಿಸಲು ಪಟೇಲ್ ಸಹಕಾರ ಸಂಘ ಯೋಜನೆ ರೂಪಿಸಿತು.ಮೊದಲ ಹಂತದಲ್ಲಿ 150 ಮನೆಗಳನ್ನು ಆಯ್ಕೆ ಮಾಡಿಕೊಂಡು ಅವರ ಮನವೊಲಿಸಿ, ರೂ 5 ಸಾವಿರ ವೆಚ್ಚದ ಶೌಚಾಲಯ ನಿರ್ಮಾಣ ಕಾರ್ಯ ಆರಂಭಿಸಿತು. ಹಲವು ಅಡೆತಡೆ ನಿವಾರಿಸಿಕೊಂಡು ಇದೀಗ ಮೊದಲ ಹಂತದ  ಶೌಚಾಲಯ ಕಾರ್ಯ ಪೂರ್ಣಗೊಂಡಿದ್ದು, ಎರಡನೇ ಹಂತದ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ.‘ಸಂಘದ ನಿಯಮದಂತೆ ಯಾವುದೇ ವ್ಯಕ್ತಿಗೆ ಆರ್ಥಿಕ ಸಹಕಾರ ಮಾಡಬೇಕಾದರೆ ಆ ವ್ಯಕ್ತಿ ಸಂಘದಲ್ಲಿ ಕನಿಷ್ಠ ಒಂದು ಷೇರು ಹೊಂದಿರಬೇಕು. ಒಂದು ಷೇರಿನ ಬೆಲೆ ` ಒಂದು ಸಾವಿರ. ಆದರೆ, ಗ್ರಾಮದ ಬಹುತೇಕ ಬಡವರಿಗೆ ಒಂದು ಸಾವಿರ ನೀಡಲು ಆಗದಂತಹ ಸ್ಥಿತಿ ಇತ್ತು. ಇಂತಹ ಸಮಸ್ಯೆ ನಿವಾರಿಸಲು ಬೈಲಾ ತಿದ್ದುಪಡಿ ಮಾಡಿ, ಶೌಚಾಲಯ ಹೊಂದಲು ಇಚ್ಛಿಸುವ ವ್ಯಕ್ತಿ ` 10 ಪಾವತಿಸಿದರೆ ಸಾಕು ಅಂತಹ ವ್ಯಕ್ತಿಗೆ ಶೌಚಾಲಯ ನಿರ್ಮಿಸಿಕೊಡಲು ತೀರ್ಮಾನಿಸಲಾಯಿತು’ ಎಂದು ಸಂಘದ ಅಧ್ಯಕ್ಷ ತೇಜಸ್ವಿ ವಿ. ಪಟೇಲ್ ಮಾಹಿತಿ ನೀಡುತ್ತಾರೆ.ಮೊದಲ ಹಂತದಲ್ಲಿ ದಲಿತರು ಹಾಗೂ ಇತರ ಹಿಂದುಳಿದ ವರ್ಗದವರಿಗೆ ಶೌಚಾಲಯ ಕಲ್ಪಿಸಲಾಗಿದ್ದು, ಆರ್ಥಿಕವಾಗಿ ಅನುಕೂಲ ಇರುವವರು, ಮುಂದುವರಿದ ಜನಾಂಗದವರೂ ` 10  ಪಾವತಿಸುವ ಮೂಲಕ ಈ ಸೌಲಭ್ಯ ಹೊಂದಬಹುದು. ಆದರೆ, ಶೌಚಾಲಯಕ್ಕೆ ನೀಡಿದ ಹಣವನ್ನು ದಿನಕ್ಕೆ ` 10 ಅಂತೆ ಸಂಘಕ್ಕೆ ಪಾವತಿಸಬೇಕು. ಹಳೆಯ ಶೌಚಾಲಯ ಸೇರಿದಂತೆ ಗ್ರಾಮದಲ್ಲಿ ಈಗಾಗಲೇ 334  ಶೌಚಾಲಯಗಳಿದ್ದು, ಉಳಿದ 317 ಮನೆಗಳಿಗೆ ಎರಡು ಹಾಗೂ ಮೂರನೇ ಹಂತದಲ್ಲಿ ಶೌಚಾಲಯ ನಿರ್ಮಿಸಲಾಗುವುದು. ಯೋಜನೆಗೆ ಕೆಲ ಎನ್‌ಜಿಒಗಳು ಕೈಜೋಡಿಸಲು ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಇಡೀ ಜಿಲ್ಲೆಗೆ ವಿಸ್ತರಿಸಲಾಗುವುದು ಎಂದು ತೇಜಸ್ವಿ ಮಾಹಿತಿ ನೀಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.