ಮಂಗಳವಾರ, ಮೇ 24, 2022
27 °C

ಸರ್ಕಾರಿ ಆಂಗ್ಲ ಶಾಲೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಆಂಗ್ಲ ಶಾಲೆಗಳ ಪ್ರಾರಂಭಕ್ಕೆ ಹೊರಡಿಸಿರುವ ಆದೇಶವನ್ನು ಹದಿನೈದು ದಿನಗಳ ಒಳಗೆ ಬೇಷರತ್ ಆಗಿ ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ಗೋಕಾಕ್ ಚಳವಳಿ ಮಾದರಿಯಲ್ಲಿ ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಲಾಗುವುದು~ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ನಡೆದ ಸಾಹಿತಿಗಳು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರ ಸಭೆಯು ಎಚ್ಚರಿಕೆ ನೀಡಿತು.ಸಾಹಿತಿಗಳಾದ ಪ್ರೊ.ಜಿ.ವೆಂಕಟಸುಬ್ಬಯ್ಯ, ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ, ಹಂಪನಾ, ಸಿಪಿಕೆ, ಪ್ರೊ.ಚಂದ್ರಶೇಖರ ಪಾಟೀಲ, ಪ್ರೊ.ಎಂ.ಚಿದಾನಂದಮೂರ್ತಿ, ಗೊ.ರು.ಚನ್ನಬಸಪ್ಪ, ಕಮಲಾ ಹಂಪನಾ, ವಸುಂಧರಾ ಭೂಪತಿ, ಡಾ.ಬಿ.ಟಿ.ಲಲಿತಾನಾಯಕ್, ಜಿ.ರಾಮಕೃಷ್ಣ ಮೊದಲಾದವರು ಭಾಗವಹಿಸಿದ್ದ ಸಭೆಯ ನಿರ್ಣಯವನ್ನು ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಪ್ರಕಟಿಸಿದರು.`ಮುಖ್ಯಮಂತ್ರಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ನಮ್ಮ  ಹಕ್ಕೊತ್ತಾಯವನ್ನು ಪತ್ರದ ಮೂಲಕ ತಿಳಿಸಲಾಗುವುದು. ಗಡುವಿನೊಳಗೆ ಸರ್ಕಾರ ಸ್ಪಂದಿಸದೇ ಇದ್ದರೆ, ರಾಜ್ಯವ್ಯಾಪಿ ಹೋರಾಟ ಪ್ರಾರಂಭಿಸಲಾಗುವುದು. ನಾನು ಪರಿಷತ್ತಿನ ಕೇಂದ್ರ ಕಚೇರಿ ಆವರಣದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ನಡೆಸುವೆ~ ಎಂದು ಹಾಲಂಬಿ ಘೋಷಿಸಿದರು.`ನಾನು ಭಾವೋದ್ವೇಗದಿಂದ ಈ ಹೇಳಿಕೆ ನೀಡುತ್ತಿಲ್ಲ. ಕನ್ನಡ ನಾಡು ನುಡಿಗೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳುವಾಗ ಸರ್ಕಾರ, ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಪ್ರಬಲ ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಕನ್ನಡಿಗರ ಸಂಘಟನೆಯ ಶಕ್ತಿಯನ್ನು ತೋರಿಸಬೇಕಾಗಿದೆ~ ಎಂದರು.`ಪರಿಷತ್ತು ಆಂಗ್ಲ ಭಾಷೆಯ ವಿರೋಧಿಯಲ್ಲ, ಆದರೆ ಮಾಧ್ಯಮವಾಗಿ ಇಂಗ್ಲೀಷ್ ಹೇರಿಕೆಗೆ ಸ್ಪಷ್ಟ ವಿರೋಧವಿದೆ. ಮಾತೃಭಾಷಾ ಶಿಕ್ಷಣ ಪದ್ಧತಿ ಜಾರಿಗೆ ತರದೇ ಪ್ರಾದೇಶಿಕ ಭಾಷೆಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಭಾಷಾವಾರು ಪ್ರಾಂತ್ಯವಾರು ರಚನೆಯ ಉದ್ದೇಶವೇ ನಿಷ್ಫಲವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.`2012- 13ರ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 341 ಆಂಗ್ಲ ಮಾಧ್ಯಮ ಮಾಧ್ಯಮಿಕ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಕಂಟಕವಾಗುತ್ತಿರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಡಿವಾಣ ಹಾಕಬೇಕಾದ ಸರ್ಕಾರವು ತಾನೇ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ಮೂಲಕ ಕನ್ನಡಕ್ಕೆ ಮುಳುವಾಗುತ್ತಿದೆ~ ಎಂದು   ಟೀಕಿಸಿದರು.`ಇಂದಿನ ಸಭೆಗೆ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಆಹ್ವಾನ ನೀಡಲಾಗಿತ್ತು. ಅವರು ಬಾರದಿರುವ ಮೂಲಕ ಕನ್ನಡಕ್ಕೆ ಅವಮಾನ ಮಾಡಿದ್ದಾರೆ~ ಎಂದು   ದೂರಿದರು.ಮೊದಲಿಗೆ ಮಾತನಾಡಿದ ವೆಂಕಟಸುಬ್ಬಯ್ಯ, `1ರಿಂದ 10ನೇ ತರಗತಿವರೆಗೆ ಎಲ್ಲ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಬೇಕು. ಕನ್ನಡ ಉಳಿಸಲು ಮೊದಲು ಆದ್ಯತೆ ಕೊಡಬೇಕು. ಇಂಗ್ಲಿಷ್ ಕಲಿಸಲು ಯಾರ ಅಭ್ಯಂತರವೂ ಇಲ್ಲ~ ಎಂದರು.ಸಿಪಿಕೆ, `ಕನ್ನಡಕ್ಕೆ ಮೇಲಿಂದ ಮೇಲೆ ಸಮಸ್ಯೆಗಳು ಬರುತ್ತಿವೆ. ಸರ್ಕಾರದ ನಿರ್ಧಾರದ ವಿರುದ್ಧ ಚಳವಳಿ ನಡೆಸುವುದರ ಜತೆ ಜತೆಗೆ ಕಾನೂನು ಹೋರಾಟ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು~ ಎಂದರು.ಜಿ.ಎಸ್.ಸಿದ್ಧಲಿಂಗಯ್ಯ, `ಎಲ್ಲೆಲ್ಲೂ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ಸರ್ಕಾರದ ನಿರ್ಧಾರವು ಕನ್ನಡದ ಪಾಲಿಗೆ ಆಘಾತಕಾರಿಯಾಗಿದೆ. ಇದರ ವಿರುದ್ಧ ಎಲ್ಲರೂ ಹೋರಾಡಬೇಕು~ ಎಂದರು.ಹಂಪನಾ, `ಸರ್ಕಾರದ ವಿರುದ್ಧ ಧರಣಿ, ಮುಷ್ಕರಕ್ಕೆ ಎಲ್ಲರೂ ಸಜ್ಜಾಗಬೇಕು. ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭ ತಡೆಯುವುದರ ಜತೆಗೆ ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಬೇಕಾಗಿದೆ~ ಎಂದರು.ಚಂಪಾ, `ಗೋಕಾಕ್ ಚಳವಳಿಯ ನಂತರ ಐತಿಹಾಸಿಕ ಹೋರಾಟಕ್ಕೆ ಸಿದ್ಧವಾಗಬೇಕು. ಹೋರಾಟದ ಬಿಸಿ ಮುಟ್ಟಿಸಿದೇ ಇದ್ದರೆ ಸರ್ಕಾರ ಬಗ್ಗುವುದಿಲ್ಲ~ ಎಂದರು.ರಾಮಕೃಷ್ಣ, `ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಸರ್ಕಾರ ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸುತ್ತಿರುವಂತಿದೆ. ಇಂತಹ ನಿರ್ಧಾರದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಲಾಭವಾಗಲಿದೆ~ ಎಂದು ಆತಂಕ ವ್ಯಕ್ತಪಡಿಸಿದರು.ಕಮಲಾ ಹಂಪನಾ ಮಾತನಾಡಿ, `ಕನ್ನಡದ ಬಗ್ಗೆ ಸರ್ಕಾರ ಅಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಆದೇಶ ವಾಪಸ್ ಪಡೆಯುವಂತೆ ಮನವಿ ಪತ್ರ ನೀಡಿದರೆ ಪ್ರಯೋಜನವಾಗುವುದಿಲ್ಲ. ವಿಧಾನಸೌಧವನ್ನೇ ನಡುಗಿಸುವ ಹಾಗೆ ಹೋರಾಟದ ಕಹಳೆ ಮೊಳಗಿಸಬೇಕು~ ಎಂದರು.ಪರಿಷತ್ತಿನ ಮಾಜಿ ಅಧ್ಯಕ್ಷ ನಲ್ಲೂರು ಚಂದ್ರಶೇಖರ್, `ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸಮಾನ ಶಿಕ್ಷಣ ದೊರೆಯುವ ಹಾಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಇಂಗ್ಲಿಷ್ ಭಾಷೆಯಾಗಿ ಇರಲಿ, ಮಾಧ್ಯಮವಾಗಿ ಬೇಡ~ ಎಂದರು.ಮಾಜಿ ಶಾಸಕ ಪ್ರಭಾಕರರೆಡ್ಡಿ, ಮೈಸೂರಿನ ಕನ್ನಡ ಕ್ರಿಯಾ ಸಮಿತಿಯ ಸ.ರ.ಸುದರ್ಶನ್, ಮುಖಂಡರಾದ ಆರ್.ಎನ್.ಎಸ್.ಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಸಿ.ಕೆ.ರಾಮೇಗೌಡ, ಮೊದಲಾದವರು ಭಾಗವಹಿಸಿದ್ದರು.`ಇದು ಹೊಸದಲ್ಲ~

ರಾಜ್ಯ ಸರ್ಕಾರದ 1994ರ ಭಾಷಾ ನೀತಿ ಪ್ರಕಾರ ಒಂದರಿಂದ ಐದನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲಾಗುತ್ತಿದೆ. ಆದರೆ 6ನೇ ತರಗತಿಯಿಂದ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಲು ಕಾಯ್ದೆಯಲ್ಲಿ ಅವಕಾಶ ಇದೆ.ಇದಕ್ಕೆ ಅನುಗುಣವಾಗಿ ಖಾಸಗಿ ಶಾಲೆಗಳಲ್ಲಿ 6ನೇ ತರಗತಿಯಿಂದ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಲು ಅನುಮತಿ ನೀಡಲಾಗಿದೆ. ಆ ಪ್ರಕಾರವೇ ಸರ್ಕಾರಿ ಶಾಲೆಗಳಲ್ಲೂ ಬೇಡಿಕೆಗೆ ಅನುಗುಣವಾಗಿ ಆಂಗ್ಲಮಾಧ್ಯಮ ವಿಭಾಗ (ಸೆಕ್ಷನ್) ಆರಂಭಿಸಲು ಕಳೆದ ವರ್ಷದಿಂದ ಅನುಮತಿ ನೀಡಲಾಗುತ್ತಿದೆ.ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಬರುವ ಪ್ರಸ್ತಾವಗಳನ್ನು ಪರಿಶೀಲಿಸಿ, ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ, ಕೊಠಡಿ, ಸಿಬ್ಬಂದಿ ಇತ್ಯಾದಿ ಸೌಲಭ್ಯಗಳು ಇರುವುದನ್ನು ಖಚಿತಪಡಿಸಿಕೊಂಡು ಆಂಗ್ಲಮಾಧ್ಯಮ ಆರಂಭಿಸಲು ಅನುಮತಿ ನೀಡಲಾಗುತ್ತದೆ. ಈ ವರ್ಷ ಸುಮಾರು 400 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲಮಾಧ್ಯಮ ವಿಭಾಗ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆ.ಖಾಸಗಿ ಶಾಲೆಗಳ ಬಗ್ಗೆ ಪೋಷಕರಲ್ಲಿರುವ ವ್ಯಾಮೋಹವನ್ನು ಹೋಗಲಾಡಿಸಬೇಕು. ವಂತಿಗೆ ಹಾವಳಿಗೆ ಕಡಿವಾಣ ಹಾಕಬೇಕು. ಸರ್ಕಾರಿ ಶಾಲೆಗಳಿಗೆ ಬರುವ ಆಸಕ್ತ ಮಕ್ಕಳಿಗೆ ಆಂಗ್ಲಮಾಧ್ಯಮ ಶಿಕ್ಷಣ ದೊರೆಯಬೇಕು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

- ಎ.ದೇವಪ್ರಕಾಶ್, ನಿರ್ದೇಶಕರು, ಪ್ರಾಥಮಿಕ ಶಿಕ್ಷಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.