ಸರ್ಕಾರಿ ಆಸ್ಪತ್ರೆಗಳಲ್ಲಿ `ಫೈವ್-ಇನ್-ಒನ್' ಲಸಿಕೆ

7
ಮಕ್ಕಳ ಸೋಂಕುರೋಗ ನಿರೋಧಕ ಚುಚ್ಚುಮದ್ದು

ಸರ್ಕಾರಿ ಆಸ್ಪತ್ರೆಗಳಲ್ಲಿ `ಫೈವ್-ಇನ್-ಒನ್' ಲಸಿಕೆ

Published:
Updated:
ಸರ್ಕಾರಿ ಆಸ್ಪತ್ರೆಗಳಲ್ಲಿ `ಫೈವ್-ಇನ್-ಒನ್' ಲಸಿಕೆ

ಹುಬ್ಬಳ್ಳಿ: ಮಾರುಕಟ್ಟೆಯಲ್ಲಿ ಅತಿ ದುಬಾರಿಯಾದ, ಮಕ್ಕಳ ಸೋಂಕುರೋಗ ನಿರೋಧಕ ಚುಚ್ಚುಮದ್ದು ಪೆಂಟಾವಲೆಂಟ್‌ ಸದ್ಯದಲ್ಲೇ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಾಗಲಿದೆ.ನವಜಾತ ಶಿಶುಗಳನ್ನು ಮಾರಣಾಂತಿಕವಾಗಿ ಬಾಧಿಸುವ ಐದು ಸೋಂಕುರೋಗಗಳಿಗೆ ಈ `ಫೈವ್-ಇನ್-ಒನ್' ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಜಾಗತಿಕ ಮಟ್ಟದಲ್ಲಿ ಸಾಬೀತುಗೊಂಡಿದ್ದು, ಇನ್ನು ಮುಂದೆ ಬಡಮಕ್ಕಳ ಪಾಲಿಗೂ ಸಂಜೀವಿನಿಯಾಗಲಿದೆ!ಗಂಟಲು ಮಾರಿ (ಡಿಫ್ತೀರಿಯಾ), ನಾಯಿಕೆಮ್ಮು (ಪರ‌್ಟು  ಸಿಸ್), ಧನುರ್ವಾಯು (ಟೆಟನಸ್) , ಕಾಮಾಲೆ ಹಾಗೂ ಯಕೃತ್ತನ್ನು ಬಾಧಿಸುವ ರೋಗ (ಹೆಪಟೈಟಿಸ್- ಬಿ ) ತಡೆಗೆ ಶಿಶು ಜನನದ 6ನೇ, 10ನೇ ಮತ್ತು 14ನೇ ವಾರದಲ್ಲಿ ತಲಾ ಎರಡು ಚುಚ್ಚುಮದ್ದು ನೀಡಲಾಗುತ್ತಿದೆ. ಆದರೆ ಇನ್ನು ಮುಂದೆ ಈ ರೀತಿ ಎರಡು ಚುಚ್ಚುಮದ್ದು ನೀಡುವ ಬದಲು, ಈ ನಾಲ್ಕು ಸೋಂಕುರೋಗ ಹಾಗೂ ನ್ಯುಮೋನಿಯಾ, ಮಿದುಳು ಜ್ವರಕ್ಕೆ ಕಾರಣವಾಗುವ ಹಿಬ್ (ಹಿಮೋಫಿಲಸ್ ಇನ್‌ಪ್ಲುಎನ್‌ಝಾ -ಬಿ) ಎಂಬ ಮತ್ತೊಂದು ಮಾರಕ ರೋಗದಿಂದಲೂ ರಕ್ಷಣೆ ನೀಡುವ ಲಸಿಕೆಯಿಂದ ಸಂಯೋಜಿತ 'ಪೆಂಟಾವಲೆಂಟ್' ಚುಚ್ಚುಮದ್ದು ಬಳಕೆಯಾಗಲಿದೆ. ಆದರೆ ಮಗು ಹುಟ್ಟಿದ 24 ಗಂಟೆಯೊಳಗೆ ನೀಡಲಾಗುವ ಹೈಪಟೈಟಿಸ್ -ಬಿ ಡೋಸ್ ಈಗಿರುವಂತೆ ಮುಂದುವರಿಯಲಿದೆ.ರಾಷ್ಟ್ರೀಯ ಲಸಿಕಾ ಆಂದೋಲನ ಕಾರ್ಯಕ್ರಮದಡಿ ಕೇಂದ್ರ ಸರ್ಕಾರ ಪೆಂಟಾವಲೆಂಟ್ ಉಚಿತವಾಗಿ ಪೂರೈಕೆ ಮಾಡಲಿದ್ದು, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಇದು 2011ರಿಂದಲೇ ಲಭ್ಯವಿದೆ. ವಿವಿಧ ರಾಜ್ಯಗಳಲ್ಲಿ ಹಂತಹಂತವಾಗಿ ಈ ಚುಚ್ಚುಮದ್ದು ಪೂರೈಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ,  ನವೆಂಬರ್‌ನಿಂದ ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಪುದುಚೇರಿ, ಗೋವಾ, ಗುಜರಾತ್ ಮತ್ತು ಹರಿಯಾಣ ರಾಜ್ಯಗಳಿಗೆ ಈ ಯೋಜನೆ ವಿಸ್ತರಿಸಿದ್ದು, 2013ರ ಅಂತ್ಯದೊಳಗೆ ದೇಶದಾದ್ಯಂತ ವ್ಯಾಪಕವಾಗಲಿದೆ.ಈ ಕುರಿತು `ಪ್ರಜಾವಾಣಿ' ಜೊತೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎನ್.ಎಂ. ಅಂಗಡಿ, `ಕೆಲವೇ ದಿನಗಳಲ್ಲಿ ಪೆಂಟಾವಲೆಂಟ್ ಲಸಿಕೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ತಲುಪಲಿದೆ ಎಂದು ಆರೋಗ್ಯ ಇಲಾಖೆಯಿಂದ ಮಾಹಿತಿ ಬಂದಿದೆ. ರಾಜ್ಯಮಟ್ಟದಲ್ಲಿ ಚುಚ್ಚುಮದ್ದು ವಿತರಣಾ ಕಾರ್ಯಕ್ರಮ ಉದ್ಘಾಟನೆಗೊಂಡ ಬಳಿಕ ಎಲ್ಲ ಜಿಲ್ಲೆಗಳಲ್ಲಿ ಪ್ರಚಾರ ನೀಡಿ ಚಾಲನೆ ನೀಡಲಾಗುವುದು' ಎಂದರು.`ಪೆಂಟಾವಲೆಂಟ್ ಚುಚ್ಚುಮದ್ದು, ಮಕ್ಕಳ ಮಾರಣಾಂತಿಕ ಸೋಂಕು ರೋಗಗಳಿಗೆ ಪ್ರತಿರೋಧಕ ಶಕ್ತಿ ನೀಡುವ ಮೂಲಕ, ಶಿಶು ಮರಣ ಸಂಖ್ಯೆ  ಕಡಿಮೆಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈಗಾಗಲೇ ಪೆಂಟಾವಲೆಂಟ್ ಚುಚ್ಚುಮದ್ದು ಪ್ರಯೋಗ ಕೇರಳ ಮತ್ತು ತಮಿಳುನಾಡಿನಲ್ಲಿ ಬಳಕೆಯಲ್ಲಿದ್ದು ಇದು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ. ಹೀಗಾಗಿ ಮಾರುಕಟ್ಟೆಯಲ್ಲಿ ದುಬಾರಿಯಾಗಿರುವ ಈ ಲಸಿಕೆಯನ್ನು ಉಚಿತವಾಗಿ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ' ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಸುಭಾಷ್ ಬಬ್ರುವಾಡ ತಿಳಿಸಿದರು.

ಏನಿದು `ಪೆಂಟಾವಲೆಂಟ್'?

ಮಕ್ಕಳ ಜೀವಕ್ಕೆ ಕುತ್ತು ತರುವ ಐದು ಮಾರಕ ರೋಗಗಳ ವಿರುದ್ಧ ರಕ್ಷಣೆ ನೀಡುವ ರೋಗಪ್ರತಿರೋಧಕ ಸಾಮರ್ಥ್ಯ ಹೊಂದಿದ ಲಸಿಕೆಗಳ ಸಂಯೋಜನೆ `ಪೆಂಟಾವಲೆಂಟ್'. ಅಮೆರಿಕ, ಇಂಗ್ಲೆಂಡ್ ಮತ್ತು ಯೂರೋಪ್   ಹಾಗೂ ಆಫ್ರಿಕಾ ದೇಶಗಳಲ್ಲಿ ಪೆಂಟಾವಲೆಂಟ್ ಈಗಾಗಲೇ ಬಳಕೆಯಲ್ಲಿದೆ. ಈ ಚುಚ್ಚುಮದ್ದು 1990ರಲ್ಲಿ ಜಾಗತಿಕ ಮಟ್ಟದಲ್ಲಿ ಆರಂಭಗೊಂಡಿದೆ.

ಮಾರಕ ಸೋಂಕುರೋಗ `ಹಿಬ್'!

ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಬಾಧಿಸುವ ಹಿಬ್ (ನ್ಯುಮೋನಿಯಾ, ಮಿದುಳು ಜ್ವರ) ಅತಿ ಮಾರಣಾಂತಿಕ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಏಷ್ಯಾ ಖಂಡದಲ್ಲಿ ಮೂರರಲ್ಲಿ ಒಂದು ಮಗು ಹಿಬ್ ಸೋಂಕಿನಿಂದ ಸಾವಿಗೀಡಾಗುತ್ತಿದೆ. ಜಗತ್ತಿನಲ್ಲಿ ಪ್ರತಿ ಐದು ವರ್ಷಕ್ಕೆ 3.70 ಲಕ್ಷ ಮಕ್ಕಳು ಹಿಬ್‌ನಿಂದ ಬಲಿಯಾಗುತ್ತಿದ್ದು, ಈ ಪೈಕಿ ಶೇಕಡಾ 20ರಷ್ಟು ಸಾವು ಭಾರತದಲ್ಲಿ ಸಂಭವಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry