ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಕಲ್ಪಿಸಲು ಶಾಸಕರ ಸೂಚನೆ

7

ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಕಲ್ಪಿಸಲು ಶಾಸಕರ ಸೂಚನೆ

Published:
Updated:

ಹಿರೇಕೆರೂರ: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು, ರಾತ್ರಿ ಕರ್ತವ್ಯ ನಿರ್ವಹಿಸುವ ವೈದ್ಯರ ಹೆಸರುಗಳನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಹಾಕಬೇಕು, ಕೃಷಿಕರಿಗೆ ಅಗತ್ಯ ದಾಖಲೆಗಳನ್ನು ಅಧಿಕಾರಿಗಳು ವಿಳಂಬ ಮಾಡದೇ ನೀಡಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿ ಅವರು ಮಾತನಾಡಿದರು. ಚಿಕ್ಕೇರೂರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ­ಯಿಂದ ರೋಗಿಗಳಿಗೆ ತುಂಬಾ ತೊಂದರೆ­ಯಾಗುತ್ತಿದೆ. ಇದರ ಬಗ್ಗೆ ಅನೇಕ ಬಾರಿ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ, ಕೂಡಲೇ ವೈದ್ಯರನ್ನು ನಿಯೋಜಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಅಣ್ಣಪ್ಪನವರ ಹಾಗೂ ಸದಸ್ಯೆ ಸುನೀತಾ ಕೊಡ್ಲೇರ್ ಆಗ್ರಹಿಸಿದರು.ಮಾಸೂರು–ಹಿರೇಕೆರೂರ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗುತ್ತಿದೆ. ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಗೌಸಮುದ್ದಿನ್‌ ತೋಟದ ಒತ್ತಾಯಿಸಿದರು. ಕಡೂರು ಗ್ರಾಮದ ಸಮೀಪ ಚಿರತೆ ಹಾವಳಿಯಿಂದ ರೈತರು ಭಯಭೀತರಾಗಿದ್ದಾರೆ ಎಂದು ಆ ಕ್ಷೇತ್ರದ ಸದಸ್ಯೆ ಶೋಭಾ ಲಕ್ಕನಗೌಡ್ರ ಸಭೆಗೆ ಹೇಳಿದರು. ಇದಕ್ಕೆ ಉತ್ತರಿಸಿದ ಅರಣ್ಯ ಅಧಿಕಾರಿ, ಇಲಾಖೆಯಿಂದ ಗಸ್ತು ಕಾರ್ಯಾಚರಣೆ ನಡೆಯುತ್ತಿದ್ದು ಜನತೆ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅನ್ನಪೂರ್ಣಾ ಗಾಳಿ, ಸದಸ್ಯರಾದ ಶಿವಣ್ಣ ಗಡಿ­ಯಣ್ಣನವರ, ಬಸನಗೌಡ ಕಳ್ಳೇರ, ಬಸವರಾಜ ದೂಳ­ಪ್ಪನವರ, ರೂಪಾ ಆಡೂರ, ಸೋಮಪ್ಪ ಶಿದ್ಲಿಂಗಪ್ಪನವರ, ಗದಿಗೆವ್ವ ಬಿದರಿ, ನಿರ್ಮಲಾ ಗುಬ್ಬಿ, ಪ್ರಭಾ ಕುಲಕರ್ಣಿ, ಬಸವಂತಪ್ಪ ದೊಡ್ಡಮನಿ, ನಾಗರತ್ನ ಕಂಕನವರ, ಸಣ್ಣಗೌಡ ಪಾಟೀಲ, ರುದ್ರಮ್ಮ ಕುಸಗೂರ, ಶೀಲಮ್ಮ ತುಮ್ಮಿನಕಟ್ಟಿ ಹಾಜರಿದ್ದರು.ಅಹೋರಾತ್ರಿ ಸಂಗೀತ 4ರಂದು

ರಾಣೆಬೆನ್ನೂರು:
ಕರ್ನಾಟಕ ಸಂಘದ ವತಿಯಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ–ಸಂಗೀತ ಸುಧೆ ಇದೇ ೪ರಂದು ನಡೆಯಲಿದೆ.

ಕರ್ನಾಟಕ ಬ್ಯಾಂಕ್‌ ವ್ಯವಸ್ಥಾಪಕ ಎನ್. ವೆಂಕಟರಮಣ ಉದ್ಘಾಟಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸುವರು. ಎಸ್. ಎಚ್. ಕುಲಕರ್ಣಿ ಅತಿಥಿ­ಗಳಾಗಿ ಆಗಮಿಸುವರು. ೩೫ಕ್ಕೂ ಹೆಚ್ಚು ಮಂದಿ ಸಂಗೀತ ನಡೆಸಿಕೊಡುವರು. ಕಲಾವಿದರಾದ ಉತ್ತರಾ­ಚಾರ್ ಕಮ್ಮಾರ, ಮೌನೇ­ಶಾ­­ಚಾರ್ ಬಡಿಗೇರ ಹಾಗೂ ಗಾಯಿ­ತ್ರಮ್ಮ ನಾಗೇಶ ಅವರನ್ನು ಸನ್ಮಾನಿಸಲಾ­ಗುವುದು ಎಂದು ಸಲಹಾ ಸಮಿತಿ ಅಧ್ಯಕ್ಷ ಪಿ. ಜೆ. ಕುಲಕರ್ಣಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry