ಭಾನುವಾರ, ಆಗಸ್ಟ್ 25, 2019
28 °C

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಯುವಕ ಬಲಿ

Published:
Updated:

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ, ಆಂಬುಲೆನ್ಸ್ ಸೇವೆ ದೊರೆಯದ ಕಾರಣ 28 ಗಂಟೆ ಜೀವನ್ಮರಣ ಹೋರಾಟ ನಡೆಸಿದ ಯುವಕ ಬುಧವಾರ ರಾತ್ರಿ 12 ಗಂಟೆಗೆ ಸಾವನ್ನಪ್ಪಿದ ಘಟನೆ ನಡೆದಿದೆ.ಪಟ್ಟಣದ ನಿವಾಸಿ ಭಾಸ್ಕರ್ (25) ಮೃತ ವ್ಯಕ್ತಿ. ಈತ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಜೆ.ಸಿ.ಪುರದ ಬಳಿ ಮಂಗಳವಾರ ರಾತ್ರಿ 8 ಗಂಟೆಗೆ ಬೈಕ್‌ನಿಂದ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದ. ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಸ್ನೇಹಿತರು ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದರು.ಗಾಯಾಳುವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಕೃತಕ ಉಸಿರಾಟ ಕಲ್ಪಿಸಲು ಆಸ್ಪತ್ರೆಯಲ್ಲಿ ಆಮ್ಲಜನಕ ಇರಲಿಲ್ಲ. ಆಸ್ಪತ್ರೆ ಆಂಬುಲೆನ್ಸ್ ಸುಸ್ಥಿತಿಯಲ್ಲಿ ಇಲ್ಲದ ಕಾರಣ ಗುಬ್ಬಿಯಿಂದ ಆಂಬುಲೆನ್ಸ್ ಕರೆಸಲಾಯಿತು.ಅದೂ ಮಲ್ಲಸಂದ್ರ ಬಳಿ ಕೆಟ್ಟು ನಿಂತಿತು. ನಂತರ ಖಾಸಗಿ ಕಾರೊಂದನ್ನು ಬಾಡಿಗೆಗೆ ಪಡೆದು ಭಾಸ್ಕರನನ್ನು ತುಮಕೂರಿನ ನರ್ಸಿಂಗ್ ಹೋಂಗೆ ಸೇರಿಸುವ ಹೊತ್ತಿಗೆ ಮಂಗಳವಾರ ರಾತ್ರಿ 11 ಗಂಟೆಯಾಗಿತ್ತು. ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮ್ಹೋನ್ಸ್‌ಗೆ ಕರೆದೊಯ್ಯಲಾಯಿತು.ಆಸ್ಪತ್ರೆಗೆ ಕರೆ ತರುವ ಹೊತ್ತಿಗೆ ಸಾಕಷ್ಟು ತಡವಾದ ಕಾರಣ ತಜ್ಞ ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಭಾಸ್ಕರ್ ಜೀವ ಉಳಿಯಲಿಲ್ಲ. ಒಂದು ವೇಳೆ ತಾಲ್ಲೂಕು ಆಸ್ಪತ್ರೆಯಲ್ಲಿ ಸಕಾಲಕ್ಕೆ ಆಮ್ಲಜನಕ, ಆಂಬುಲೆನ್ಸ್ ಸೇವೆ, ಅವಶ್ಯಕ ಪ್ರಥಮ ಚಿಕಿತ್ಸೆ ದೊರೆತಿದ್ದರೆ ಭಾಸ್ಕರನ ಪ್ರಾಣ ಉಳಿಯುತ್ತಿತ್ತು ಎಂದು ಮೃತನ ಸ್ನೇಹಿತ ನಾಗಕುಮಾರ್ ಚೌಕೀಮಠ್ ದೂರಿದರು.ತಾಲ್ಲೂಕು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ವಿವಿಧ ಜನಪರ ಸಂಘಟನೆಗಳು ಬುಧವಾರವಷ್ಟೇ ಬೀದಿಗಿಳಿದು ಪ್ರತಿಭಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಸಾವಿಗೆ ಅವ್ಯವಸ್ಥೆ ಕಾರಣವಲ್ಲ...

ಭಾಸ್ಕರ್ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದುದರಿಂದ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಲಾಯಿತು. 108 ಆಂಬುಲೆನ್ಸ್ ನೌಕರರು ಮುಷ್ಕರ ನಿರತರಾಗಿರುವುದರಿಂದ ಬೇರೆ ಚಾಲಕನೊಂದಿಗೆ ಇದ್ದ ಹಳೆ ಆಂಬುಲೆನ್ಸ್‌ನಲ್ಲಿ ಗಾಯಾಳುವನ್ನು ಕಳುಹಿಸಿಕೊಡಲಾಯಿತು ಎಂದು ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಹಳೆ ಆಂಬುಲೆನ್ಸ್‌ನಲ್ಲಿ ಆಕ್ಸಿಜನ್ ವ್ಯವಸ್ಥೆ ಇರಲಿಲ್ಲ. ಆಕ್ಸಿಜನ್ ಕೊರತೆಗೂ ಗಾಯಾಳು ಮೃತಪಟ್ಟಿರುವುದಕ್ಕೂ ಸಂಬಂಧವಿಲ್ಲ ಎಂದು ಅವರು ಹೇಳಿದರು.ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚನ್ನಮಲ್ಲಯ್ಯ ಅವರನ್ನು ಘಟನೆ ಕುರಿತು ಪ್ರಶ್ನಿಸಿದಾಗ `ನನಗೆ ಈ ವಿಚಾರ ಏನು ಗೊತ್ತಿಲ್ಲ, ಚಿಕ್ಕನಾಯಕಹಳ್ಳಿಗೆ ಭೇಟಿ ನೀಡಿದ್ದು ನಿಜ, ಆದರೆ ಅಲ್ಲಿನ ವೈದ್ಯರು ಈ ವಿಚಾರವಾಗಿ ಏನು ಹೇಳಿಲ್ಲ, ನನ್ನ ಗಮನಕ್ಕೆ ಬಂದಿಲ್ಲ' ಎಂದು ತಿಳಿಸಿದರು.

Post Comments (+)