ಸರ್ಕಾರಿ ಕಾಲೇಜಿಗೆ ಉಪನ್ಯಾಸಕರ ಕೊರತೆ

ಶುಕ್ರವಾರ, ಜೂಲೈ 19, 2019
24 °C
600 ವಿದ್ಯಾರ್ಥಿಗಳಿಗೆ ಐದು ಕೊಠಡಿ

ಸರ್ಕಾರಿ ಕಾಲೇಜಿಗೆ ಉಪನ್ಯಾಸಕರ ಕೊರತೆ

Published:
Updated:

ಮುಂಡಗೋಡ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಹೆಜ್ಜೆಯಾಗಿರುವ ಪದವಿ ಪೂರ್ವ ಶಿಕ್ಷಣದಲ್ಲಿ ಉಪನ್ಯಾಸಕರ ಹಾಗೂ ತರಗತಿಗಳ ಕೊರತೆಯಿಂದ ಸೂಕ್ತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿರುವದಕ್ಕೆ ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜ ಜೀವಂತ ಸಾಕ್ಷಿಯಾಗಿದೆ.ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಶಾಸ್ತ್ರ ಹೀಗೆ ಒಟ್ಟು ಮೂರು ವಿಭಾಗಗಳನ್ನು ಹೊಂದಿರುವ ಇಲ್ಲಿಯ ಕಾಲೇಜಿನಲ್ಲಿ ಪ್ರಥಮ ಪಿ.ಯು.ನಲ್ಲಿ 378, ದ್ವಿತೀಯ ಪಿ.ಯು.ನಲ್ಲಿ 311 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುವ ಈ ಕಾಲೇಜನಲ್ಲಿ 5ಕ್ಕೂ ಹೆಚ್ಚು ಉಪನ್ಯಾಸಕರ ಕೊರತೆ ಕಾಡುತ್ತಿದೆ. ಅಲ್ಲದೇ ತರಗತಿಯ ಅಭಾವದಿಂದ ಒಂದೊಂದು ಡೆಸ್ಕ್‌ನಲ್ಲಿ ಐದಾರು ವಿದ್ಯಾರ್ಥಿಗಳು ಕುಳಿತುಕೊಂಡು ಪಾಠ ಕೇಳುವ ಅನಿವಾರ್ಯತೆ ಎದುರಾಗಿದೆ. ವಾಣಿಜ್ಯ ವಿಭಾಗದಲ್ಲಿ ಕನ್ನಡ ವಿಷಯದ ಉಪನ್ಯಾಸಕರನ್ನು ಹೊರತುಪಡಿಸಿ ಉಳಿದ ವಿಷಯಗಳಿಗೆ ಉಪನ್ಯಾಸಕರ ಕೊರತೆ ಇದೆ.  ಅದೇ ರೀತಿ ಭೌತಶಾಸ್ತ್ರ, ಇಂಗ್ಲಿಷ್, ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ ಸೇರಿದಂತೆ ಪ್ರಮುಖ ವಿಷಯಗಳನ್ನು ಬೋಧಿಸಲು ಉಪನ್ಯಾಸಕರ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವಲ್ಲಿ ವಂಚಿತರಾಗುತ್ತಿದ್ದರೂ ಸಹಿತ ಅನಿವಾರ್ಯವಾಗಿ ಕಾಲೇಜ ಮೆಟ್ಟಿಲು ಹತ್ತಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಒಟ್ಟು 6 ಉಪನ್ಯಾಸಕರ ನೇಮಕ ತಕ್ಷಣಕ್ಕೆ ಆಗಬೇಕಾಗಿದೆ ಎಂದು ಉಪನ್ಯಾಸಕರೊಬ್ಬರು ಹೇಳಿದರು.ನಗರ ಪ್ರದೇಶದಿಂದ 15 ಕಿ.ಮೀ. ಅಂತರದ ಕಾಲೇಜಗಳಿಗೆ `ಬಿ' ಗ್ರೇಡ್, 20 ಕಿ.ಮೀ ಅಂತರದ ಕಾಲೇಜಗಳಿಗೆ `ಸಿ' ಗ್ರೇಡ್ ನೀಡಿ ಮೊದಲಿಗೆ `ಬಿ' ಮತ್ತು `ಸಿ' ಗ್ರೇಡ್‌ಗಳ ಕಾಲೇಜಗಳಲ್ಲಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಿದ ನಂತರವಷ್ಟೇ ಪಟ್ಟಣ ಅಥವಾ ನಗರದ `ಎ' ಗ್ರೇಡ್ ಕಾಲೇಜಗಳಿಗೆ ಉಪನ್ಯಾಸಕರ ಆಯ್ಕೆ ನಡೆಯುವುದರಿಂದ ಈ ರೀತಿ ತೊಂದರೆಯಾಗುತ್ತಿದೆ ಎನ್ನಲಾಗಿದೆ.ಪಟ್ಟಣದ ಪದವಿ ಪೂರ್ವ ಕಾಲೇಜನಲ್ಲಿ ಒಂದೊಂದು ತರಗತಿಯಲ್ಲಿ 40-50 ವಿದ್ಯಾರ್ಥಿಗಳ ಸಮೂಹ ಕಾಣಬಹುದಾಗಿದ್ದು, ಕಿರಿದಾದ ಜಾಗದಲ್ಲಿಯೇ ಕುಳಿತುಕೊಂಡು ಪಾಠ ಕೇಳಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದಾಗಿದೆ. ಬೆಳಿಗ್ಗೆ 8ರಿಂದ 11ರವರೆಗೆ ನಡೆಯುವ ಪದವಿ ಪೂರ್ವ ಕಾಲೇಜಿನಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಪದವಿ ಪೂರ್ವ ಕಾಲೇಜು ತರಗತಿಗಳು ಬಿಡುವವರೆಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಆವರಣದಲ್ಲಿ ಕಾಯುತ್ತ ಇರಬೇಕಾಗಿದೆ.ವಿದ್ಯಾರ್ಥಿಯ ಭವಿಷ್ಯ ರೂಪಿಸುವಂತಹ ಪದವಿ ಪೂರ್ವ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಶಿಕ್ಷಕರು ಹಾಗೂ ತರಗತಿಗಳ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ಗ್ರಾಮೀಣ ಭಾಗದ ಪ್ರತಿಭೆಗಳು ಸಾಮರ್ಥ್ಯ ತೋರಲು ಸಾಧ್ಯವಾಗುತ್ತದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry