ಸರ್ಕಾರಿ ಕಾಲೇಜಿಗೆ ನ್ಯಾಕ್ ಭೇಟಿ; ಮನೆ ಮಾಡಿತು ಸಂಭ್ರಮ

7

ಸರ್ಕಾರಿ ಕಾಲೇಜಿಗೆ ನ್ಯಾಕ್ ಭೇಟಿ; ಮನೆ ಮಾಡಿತು ಸಂಭ್ರಮ

Published:
Updated:

ಚಿಕ್ಕಬಳ್ಳಾಪುರ:  ಜಿಲ್ಲೆಯಲ್ಲಿ ತನ್ನದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿರುವ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ಬಾರಿಗೆ ರಾಷ್ಟ್ರೀಯ ಮೌಲ್ಯಮಾಪನಾ ಮಾನ್ಯತಾ ಮಂಡಳಿ (ನ್ಯಾಕ್) ಸೋಮವಾರ (ಫೆ.21) ಭೇಟಿ ನೀಡಲಿದೆ.ನ್ಯಾಕ್ ಮಂಡಳಿಯ ಮೂವರು ಸದಸ್ಯರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಸಂಚಲನ ಮೂಡಿದ್ದು, ವಿದ್ಯಾರ್ಥಿಗಳು ಸೇರಿದಂತೆ ಪ್ರಾಧ್ಯಾಪಕರು ಕಾಲೇಜಿನ ಸಿದ್ಧತಾ ಮತ್ತು ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಕಾಲೇಜನ್ನು ಅಲಂಕರಿಸುವುದು, ಸ್ವಚ್ಛಗೊಳಿಸುವುದು ಸೇರಿದಂತೆ ವಿವಿಧ ಕಾರ್ಯಗಳು ಭಾನುವಾರ ಸಂಜೆ ವೇಳೆಗೆ ಪೂರ್ಣಗೊಳಿಸಲಾಯಿತು.1968ರಲ್ಲಿ ಸ್ಥಾಪನೆಗೊಂಡ ಈ ಕಾಲೇಜಿಗೆ ಈವರೆಗೆ ನ್ಯಾಕ್ ಮಂಡಳಿ ಭೇಟಿ ನೀಡಿರಲಿಲ್ಲ.43 ವರ್ಷಗಳ ಇತಿಹಾಸವಿದ್ದರೂ ಕಾಲೇಜಿಗೆ ಮಾನ್ಯತೆ ಕೊಡುವುದರ ಬಗ್ಗೆ ಮತ್ತು ಗುಣಮಟ್ಟ ಹೆಚ್ಚಿಸುವುದರ ಬಗ್ಗೆ ಚರ್ಚೆ ನಡೆದಿರಲಿಲ್ಲ.ನ್ಯಾಕ್ ಮಂಡಳಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರಿ ಬದಲಾವಣೆಗಳು ಆಗಬಹುದು ಎಂಬ ಸಂತಸದಲ್ಲಿ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದಾರೆ.ಕಾಲೇಜಿಗೆ ಹೊಸದಾಗಿ ಬಣ್ಣ ಬಳಿಯಲಾಗಿದೆ, ಆವರಣದಲ್ಲಿನ ಕಸಕಡ್ಡಿ, ತ್ಯಾಜ್ಯವಸ್ತುಗಳನ್ನು, ಮಾಲಿನ್ಯವನ್ನು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ತೆರವುಗೊಳಿಸಿದ್ದಾರೆ.ಶಿಕ್ಷಣದಲ್ಲಿ ಈವರೆಗೆ ತೋರಲಾಗಿರುವ ಸಾಧನೆಯನ್ನು ಹೇಳಿಕೊಳ್ಳುವ ಉಮೇದಿನಲ್ಲಿ ವಿದ್ಯಾರ್ಥಿಗಳು ಇದ್ದರೆ, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಕಾಲೇಜಿನ ಗುಣಮಟ್ಟ, ಇತಿಹಾಸದ ಮೈಲಿಗಲ್ಲುಗಳು ಮತ್ತು ಯಶಸ್ಸಿನ ಸಂಗತಿಗಳನ್ನು ಉತ್ಸುಕರಾಗಿದ್ದಾರೆ. ಇದರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿ ಅಲ್ಪಕಾಲದ ತರಬೇತಿಯನ್ನು ಸಹ ಪಡೆದಿದ್ದಾರೆ.‘ನ್ಯಾಕ್ ಮಂಡಳಿ ಕಾಲೇಜಿಗೆ ಪ್ರಥಮ ಬಾರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ಜಿಲ್ಲೆಯಲ್ಲಿ ತನ್ನದೇ ಆದ ಇತಿಹಾಸ ಹೊಂದಿರುವ ಈ ಕಾಲೇಜಿನಲ್ಲಿ ಹಲವಾರು ಪ್ರತಿಭಾವಂತರು ಅಧ್ಯಯನ ಮಾಡಿದ್ದಾರೆ. ಅವರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಕಾಲೇಜಿಗೆ ಹೆಮ್ಮೆ ಮೂಡಿಸಿದ್ದಾರೆ. ಈ ಎಲ್ಲದರ ಬಗ್ಗೆ ನ್ಯಾಕ್ ಮಂಡಳಿಗೆ ಮಾಹಿತಿ ನೀಡಲು ಉತ್ತಮ ಅವಕಾಶ ಸಿಗಲಿದೆ’ ಎಂದು ಕಾಲೇಜು ಪ್ರಾಂಶುಪಾಲ ಪ್ರೊ. ಬಿ.ವಿ.ಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.‘ನ್ಯಾಕ್ ಮಂಡಳಿಯು ಕಾಲೇಜು ಪರಿಶೀಲಿಸಿದ ಬಳಿಕ ಎ, ಬಿ ಅಥವಾ ಸಿ ಶ್ರೇಣಿಗಳಲ್ಲಿನ ಯಾವುದಾದರೂ ಶ್ರೇಣಿಯನ್ನು ಕಾಲೇಜಿಗೆ ನೀಡಲಿದೆ. ‘ಎ’ ಅಥವಾ ‘ಬಿ’ ಶ್ರೇಣಿ ಗಳಿಸಿದರೆ, ಕಾಲೇಜಿಗೆ ಹೆಚ್ಚಿನ ಅನುದಾನ ಬರುತ್ತದೆ. ಮೂಲಸೌಕರ್ಯಗಳನ್ನು ಪೂರೈಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ. ಒಂದು ವೇಳೆ ‘ಸಿ’ ಶ್ರೇಣಿ ಬಂದಲ್ಲಿ, ನ್ಯಾಕ್ ಮಂಡಳಿಯ ಭೇಟಿಗೆ ಮತ್ತೆ ಐದು ವರ್ಷ ಕಾಯಬೇಕಾಗುತ್ತದೆ’ ಎಂದು ಅವರು ತಿಳಿಸಿದರು.ಈಗಾಗಲೇ ಮೂಲಸೌಕರ್ಯ ಮತ್ತು ಇನ್ನಿತರ ಕೊರತೆಗಳನ್ನು ಎದುರಿಸುತ್ತಿರುವ ಕಾಲೇಜಿಗೆ ಹೆಚ್ಚಿನ ಅನುದಾನ ಬಿಡುಗಡೆಯಾದಲ್ಲಿ ಸೌಕರ್ಯಕ್ಕೆ ಸಂಬಂಧಿಸಿದಂತೆ ಹಲವು ಕೊರತೆಗಳನ್ನು ನೀಗಿಸಿಕೊಳ್ಳಬಹುದು. ಇತರ ಕಾಲೇಜುಗಳಿಗೆ ಸಮಾನವಾಗಿ ಅಭಿವೃದ್ಧಿಪಥದಲ್ಲಿ ಮುನ್ನಡೆಯಬಹುದು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry