ಸರ್ಕಾರಿ ಕಾಲೇಜುಗಳಲ್ಲಿ ಪಾಳಿ ಮೇಲೆ ಪಾಠ

ಮಂಗಳವಾರ, ಜೂಲೈ 23, 2019
20 °C

ಸರ್ಕಾರಿ ಕಾಲೇಜುಗಳಲ್ಲಿ ಪಾಳಿ ಮೇಲೆ ಪಾಠ

Published:
Updated:

ತುಮಕೂರು: ಮೂರೂವರೆ ಸಾವಿರ ವಿದ್ಯಾರ್ಥಿಗಳನ್ನು  ಹೊಂದಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ಸಂಖ್ಯೆ ಕೇವಲ 24. ಇಷ್ಟೇ ಅಲ್ಲ 1679 ವಿದ್ಯಾರ್ಥಿಗಳಿರುವ ಪದವಿ ಕಾಲೇಜಿಗೆ ಇದೂವರೆಗೂ ಇಂಗ್ಲಿಷ್ ಪ್ರಾಧ್ಯಾಪಕರ ಹುದ್ದೆಯೇ ಮಂಜೂರಾಗಿಲ್ಲ!ಇಲ್ಲಿ ಸರ್ಕಾರಿ ಪದವಿ ಕಾಲೇಜುಗಳೆಲ್ಲ ಕಾರ್ಖಾನೆಗಳಂತೆ ಪಾಳಿ ಮೇಲೆ ಕೆಲಸ ನಿರ್ವಹಿಸುತ್ತಿವೆ. ಮೊದಲ ಪದವಿ ತರಗತಿಗೆ ಬೆಳಿಗ್ಗೆ ಕಾಲೇಜು ನಡೆದರೆ, ದ್ವಿತೀಯ, ತೃತೀಯ ಪದವಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ನಂತರ ಕಾಲೇಜು ನಡೆಯುತ್ತಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಾರಿಗೆ ಸಂಪರ್ಕದ ಕೊರತೆಯಿಂದ ಅರ್ಧ ದಿನ ನಡೆಯುವ ಕಾಲೇಜಿಗೂ `ಅರ್ಧ ದಿನದಲ್ಲೇ ಅರ್ಧ ದಿನ~ ಗೈರು ಹಾಜರಾಗುವ ಸನ್ನಿವೇಶವನ್ನು ಸರ್ಕಾರವೇ ಸೃಷ್ಟಿಸಿದೆ.ಇದು ಕುಗ್ರಾಮಗಳಲ್ಲಿರುವ ಪದವಿ ಕಾಲೇಜುಗಳ ಕಥೆಯಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕೇವಲ ಎಪ್ಪತ್ತೇ ಕಿಲೋಮೀಟರ್ ದೂರದ ತುಮಕೂರು ಜಿಲ್ಲೆಯ ಕತೆ.ಜಿಲ್ಲೆಯಲ್ಲಿ 16 ಸರ್ಕಾರಿ ಪದವಿ ಕಾಲೇಜುಗಳಿವೆ. ಅವುಗಳಲ್ಲಿ ಹೊಸದಾಗಿ ಆರಂಭಗೊಂಡ ನಾಲ್ಕು ಕಾಲೇಜು ಬಿಟ್ಟರೆ ಉಳಿದ ಕಾಲೇಜುಗಳ ಪರಿಸ್ಥಿತಿಯನ್ನು ಹೇಳುವಂತೆಯೇ ಇಲ್ಲ.ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ), ಕೇಂದ್ರ ಮಾವನ ಸಂಪನ್ಮೂಲ ಸಚಿವಾಲಯ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯನ್ನು ಈಗಿರುವ ಸಂಖ್ಯೆಗಿಂತ ದ್ವಿಗುಣಗೊಳಿಸಬೇಕೆಂದು ಹರ ಸಾಹಸಪಡುತ್ತಿದೆ.ಆದರೆ, ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು, ಕೊಠಡಿ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲವಾಗಿದೆ. ದನದ ದೊಡ್ಡಿಗಿಂತಲೂ ಕಡೆಯಾಗಿ ಸರ್ಕಾರಿ ಕಾಲೇಜುಗಳನ್ನು ನಡೆಸಿಕೊಳ್ಳಲಾಗುತ್ತಿದೆ.ತುಮಕೂರು, ಹುಳಿಯಾರು, ಪಾವಗಡ, ಕೊರಟಗೆರೆ, ಬಡವನಹಳ್ಳಿ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಮಧುಗಿರಿ, ಶಿರಾ, ತುರುವೇಕೆರೆ ಹಾಗೂ ಕುಣಿಗಲ್‌ನ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳೇ ಇಲ್ಲ. ಸ್ವಲ್ಪ ಕೊರತೆಯಾದರೆ ಸರಿ, ಆದರೆ ವಿಪರೀತ ಕೊರತೆ ಕಾರಣ ಇವಿಷ್ಟು ಕಾಲೇಜುಗಳಲ್ಲಿ ಪಾಳಿ ಮೇಲೆ ತರಗತಿ ನಡೆಯುತ್ತಿವೆ. ತರಗತಿ ನಡೆಯುವ ಕೊಠಡಿಯಲ್ಲಿ ಸೀಟು ಹಿಡಿಯಲು ವಿದ್ಯಾರ್ಥಿಗಳು ಸಿನಿಮಾ ಥಿಯೇಟರ್ ಒಳಗೆ ನುಗ್ಗುವಂತೆ ನುಸುಳಿ ಜಾಗ ಹಿಡಿಯುವಂತಾಗಿದೆ.ಕಾಲೇಜಿಗೆ ಕೊಠಡಿ ಬೇಕೆಂದು ಶಾಸಕರಿಂದ ಹಿಡಿದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು, ಆಯುಕ್ತರು, ಮುಖ್ಯಮಂತ್ರಿಗೆ  ಸೇರಿದಂತೆ ಇಲ್ಲಿಯವರೆಗೂ ಇಪ್ಪತ್ತು ಪತ್ರ ಬರೆಯಲಾಗಿದೆ. ಆದರೂ ಒಂದೇ ಒಂದು ಕೊಠಡಿ ಮಂಜೂರು ಮಾಡಿಲ್ಲ. 50ರಿಂದ 60 ವಿದ್ಯಾರ್ಥಿಗಳು ಕೂರಬಹುದಾದ ಕೊಠಡಿಯಲ್ಲಿ 150 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಹೇಳುತ್ತಿದ್ದೇವೆ. ಗ್ರಾಮಾಂತರ ಪ್ರದೇಶದ ಕಾಲೇಜಿನ ಸಮಸ್ಯೆ ಆಲಿಸುವವರೇ ಇಲ್ಲವಾಗಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು `ಪ್ರಜಾವಾಣಿ~ಗೆ ತಿಳಿಸಿದರು.ಹೊಸ ಜಿಲ್ಲೆಯಾಗುವ ಕನಸು ಹೊತ್ತಿರುವ ಜಿಲ್ಲೆಯ ತಿಪಟೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಬರೋಬರಿ 3500 ವಿದ್ಯಾರ್ಥಿಗಳಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಕೇವಲ 24 ಪ್ರಾಧ್ಯಾಕರನ್ನು ನೀಡಲಾಗಿದೆ.

ಸಾಕಷ್ಟು ಹುದ್ದೆಗಳಿಗೆ ಮಂಜೂರಾತಿಯನ್ನೇ ನೀಡಿಲ್ಲ. ಈ ಕಾಲೇಜಿನಲ್ಲಿ 100 ಅತಿಥಿ ಉಪನ್ಯಾಸಕರು ಕೆಲಸ ಮಾಡಬೇಕಾಗಿದೆ. ಇಷ್ಟೊಂದು ಸಂಖ್ಯೆಯ ಅತಿಥಿ ಉಪನ್ಯಾಸಕರನ್ನು ಹೊಂದಿರುವ ಬೇರೊಂದು ಕಾಲೇಜು ರಾಜ್ಯದಲ್ಲೇ ಇಲ್ಲ ಎನ್ನುತ್ತಾರೆ ಪ್ರಾಂಶುಪಾಲ ಡಾ.ಜಯದೇವಪ್ಪ.ತಿಪಟೂರು ಕಾಲೇಜಿನಲ್ಲಿ ಕಾಲೇಜಿನ ಹೊರಾಂಗಣದ ನೆಲವೇ ಪಾಠ ಕೇಳುವ ಕೊಠಡಿಯಾಗಿದೆ. ಕೇವಲ 8 ಕೊಠಡಿಗಳಲ್ಲೇ ಮೂರೂವರೆ ಸಾವಿರ ವಿದ್ಯಾರ್ಥಿಗಳನ್ನು ನಿರ್ವಹಣೆ ಮಾಡಬೇಕಾದ ಪಾಡು ಈ ಕಾಲೇಜಿನದಾಗಿದೆ. ಪಾಳಿಯ ಮೇಲೆ ಪಾಠ ನಡೆಯುತ್ತಿದ್ದರೂ ಒಂದೊಂದು ಕೊಠಡಿಗೆ 150ರಿಂದ 180 ವಿದ್ಯಾರ್ಥಿಗಳನ್ನು ತುರುಕಲಾಗುತ್ತಿದೆ.ಕುಣಿಗಲ್ ಸರ್ಕಾರಿ ಕಾಲೇಜಿನ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ ಬಿಎಸ್ಸಿ ವಿದ್ಯಾರ್ಥಿಗಳಿಗೆ ಪ್ರಯೋಗಾಲಯವೇ ಬೋಧನಾ ಕೊಠಡಿಯೂ ಆಗಿದೆ. 20 ವಿದ್ಯಾರ್ಥಿಗಳು ಕೂರಬಹುದಾದ ಕೊಠಡಿಯಲ್ಲಿ 60 ವಿದ್ಯಾರ್ಥಿಗಳು ಕೂರಬೇಕಾಗಿದೆ. ಪ್ರಯೋಗಾಲಯದ ಕಮಟು ವಾಸನೆಯಲ್ಲೇ ಪಾಠ ಕೇಳಬೇಕಾಗಿದೆ ಎನ್ನುತ್ತಾರೆ ಈ ಕಾಲೇಜಿನ ವಿದ್ಯಾರ್ಥಿಗಳು. ಯಾವುದೇ ಕಾಲೇಜಿಗೆ ಹೋದರೂ ಅತಿಥಿ ಉಪನ್ಯಾಸಕರೇ ರಾರಾಜಿಸುತ್ತಾರೆ. ರೂ 50ರಿಂದ 60 ಸಾವಿರ ಸಂಬಳ ಪಡೆಯುವ ಪ್ರಾಧ್ಯಾಪಕರ ಜಾಗದಲ್ಲಿ ಮಾಸಿಕ ರೂ 10 ಸಾವಿರ ಸಂಬಳ ಪಡೆಯುವ ಅತಿಥಿ ಉಪನ್ಯಾಸಕರಿಗೂ ಸರ್ಕಾರ ಕಳೆದ ವರ್ಷದ 8 ತಿಂಗಳ ಸಂಬಳವನ್ನೇ ನೀಡಿಲ್ಲ. ಈ ವರ್ಷ ಹೊಸದಾಗಿ ನೇಮಕ ಮಾಡಿಕೊಳ್ಳಲು ಇದುವರೆಗೂ ಆದೇಶವನ್ನೇ ಹೊರಡಿಸಿಲ್ಲ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry