ಗುರುವಾರ , ಮೇ 19, 2022
20 °C

ಸರ್ಕಾರಿ ಗೌರವ, ಭಕ್ತರ ಮಹಾಪೂರ- ಶ್ರೀ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಜ್ಜಯಿನಿ (ಬಳ್ಳಾರಿ ಜಿಲ್ಲೆ): ಸೋಮವಾರ ರಾತ್ರಿ ಲಿಂಗೈಕ್ಯರಾದ ಉಜ್ಜಯಿನಿ ಪೀಠದ ಜಗದ್ಗುರು ಮರುಳಸಿದ್ಧ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರ ಅಂತ್ಯಕ್ರಿಯೆ ಮಂಗಳವಾರ ಸಂಜೆ ವೀರಶೈವ ವಿಧಿವಿಧಾನಗಳೊಂದಿಗೆ ನೆರವೇರಿತು.ಉಜ್ಜಯಿನಿ ಗ್ರಾಮದ ಹೊರ ವಲಯದಲ್ಲಿರುವ ಸಿದ್ಧವನದಲ್ಲಿರುವ, ಈ ಹಿಂದಿನ ಪೀಠಾಧಿಪತಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಗದ್ದುಗೆಯ ಪಕ್ಕದಲ್ಲೇ ಮರುಳಸಿದ್ಧ ರಾಜ ದೇಶಿಕೇಂದ್ರ ಶಿವಾಚಾರ್ಯರ  ಅಂತ್ಯಕ್ರಿಯೆಯನ್ನು ಸಂಜೆ 6.50ಕ್ಕೆ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.ಕಾಶಿ ಹಾಗೂ ಶ್ರೀಶೈಲ ಪೀಠಗಳ ಜಗದ್ಗುರುಗಳು, ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಸಚಿವರಾದ ಸಿ.ಎಂ. ಉದಾಸಿ, ಸಿ.ಸಿ. ಪಾಟೀಲ, ವಿ.ಸೋಮಣ್ಣ ಹಾಗೂ ಲಕ್ಷ್ಮಣ ಸವದಿ ಉಜ್ಜಯಿನಿಗೆ ಮಧ್ಯಾಹ್ನ ಭೇಟಿ ನೀಡಿ, ಶ್ರೀಗಳ ಅಂತಿಮ ದರ್ಶನ ಪಡೆದರಲ್ಲದೆ, ಸಿದ್ಧವನಕ್ಕೂ ತೆರಳಿ ಶ್ರೀಗಳ ನಿಯೋಜಿತ ಗದ್ದುಗೆಯ ದರ್ಶನ ಪಡೆದರು.ಮಧ್ಯಾಹ್ನ 2ಕ್ಕೆ ಶ್ರೀಮಠದಿಂದ ಆರಂಭವಾದ ಅಂತಿಮ ಯಾತ್ರೆ 5.30ಕ್ಕೆ ಕೂಡ್ಲಿಗಿ ರಸ್ತೆಯಲ್ಲಿರುವ ಸಿದ್ಧವನ ತಲುಪಿದಾಗ, ಭಕ್ತಸಮೂಹದ ದುಃಖದ ಕಟ್ಟೆ ಒಡೆಯಿತು.ಸಕಲ ವಾದ್ಯ, ಭಜನಾ ಹಾಗೂ ಜನಪದ ಕಲಾ ತಂಡಗಳ ಕಲಾವಿದರು ಹಾಗೂ ಸಾವಿರಾರು ಜನರು ಮೂರು ಗಂಟೆ ಕಾಲ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್  ಅಂತಿಮ ನಮನ ಸಲ್ಲಿಸಿದ ನಂತರ ಪೊಲೀಸರು ಕುಶಾಲ ತೋಪಿನ ಮೂಲಕ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ, ರಾಷ್ಟ್ರಗೀತೆ ನುಡಿಸಿದರು.ಕಾಶಿ ಮತ್ತು ಶ್ರೀಶೈಲ ಪೀಠದ ಜಗದ್ಗುರುಗಳು ಅಂತಿಮ ವಿಧಿವಿಧಾನ ಪೂರೈಸಿ, ಸಕಲ ಪೂಜೆಗಳನ್ನು ನೆರವೇರಿಸಿದ ಬಳಿಕ ಕ್ರಿಯಾ ವಿಭೂತಿ ಗಟ್ಟಿಗಳೊಂದಿಗೆ ಶ್ರೀಗಳ ಅಂತ್ಯಸಂಸ್ಕಾರವನ್ನುನೆರವೇರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.