ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ

7

ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ

Published:
Updated:
ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ

ದಾವಣಗೆರೆ: ಸರ್ಕಾರಿ ಕೆಲಸ ಸಿಕ್ಕಿದೆ, ಇನ್ನು ಆರಾಮವಾಗಿ ಇರಬಹುದು ಎಂದುಕೊಂಡು ನಿಟ್ಟುಸಿರು ಬಿಡುವ ನೌಕರರು ಹಾಗೂ ಅಧಿಕಾರಿಗಳು ಶೀಘ್ರದಲ್ಲಿಯೇ ನಡೆಯಲಿರುವ `ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ' ಎದುರಿಸಲು ಸಜ್ಜಾಗಬೇಕಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ, ಬಡ್ತಿ, ಇನ್‌ಕ್ರಿಮೆಂಟ್ ಪಡೆಯುವಾಗ ಸಮಸ್ಯೆ ಎದುರಿಸಬೇಕಾಗುತ್ತದೆ.ಎಲ್ಲ ಸರ್ಕಾರಿ ನೌಕರರೂ ಕಂಪ್ಯೂಟರ್ ಕಲಿಯುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಹಿಂದೆಯೇ ಹೇಳಿತ್ತು. ಈಗ ಇದನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿದೆ. ಪರೀಕ್ಷೆ ಮೂಲಕ ಸರ್ಕಾರಿ ನೌಕರರ ಕಂಪ್ಯೂಟರ್ ಬಳಕೆಯ ಜ್ಞಾನ ಅಳೆಯುವುದಕ್ಕೆ ಸರ್ಕಾರ ಮುಂದಾಗಿದೆ.ಈ ಸಂಬಂಧ ಪಠ್ಯಕ್ರಮ ಸಿದ್ಧಪಡಿಸಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಸೇವಾ ನಿಯಮ-1) ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಪಠ್ಯಕ್ರಮವನ್ನು ಜಿಲ್ಲಾಮಟ್ಟದ ಅಧಿಕಾರಿಗಳಿಗೆಕಳುಹಿಸಿದ್ದಾರೆ.ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಿಂಗಳೊಳಗೆ ಆಯಾ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.ಏನಿದರ ಮಹತ್ವ? ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಕಲಿಕೆ ಬಹಳ ಮುಖ್ಯವಾಗಿದೆ. ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಆನ್‌ಲೈನ್, ಅಂತರ್‌ಜಾಲದ ಮೂಲಕ ನೀಡಲಾಗುತ್ತಿದೆ. ಇದಕ್ಕಾಗಿ, ಸರ್ಕಾರಿ ನೌಕರರು ಕಂಪ್ಯೂಟರ್ ಬಳಸಿಕೊಂಡು ಸಮರ್ಪಕ ಸೇವೆ ಒದಗಿಸಬೇಕಾದ ಅನಿವಾರ್ಯತೆ ಇದೆ. `ಕಾಗದ ರಹಿತ' ಆಡಳಿತಕ್ಕೆ ಒತ್ತು ನೀಡಿರುವ ಈ ಸಂದರ್ಭದಲ್ಲಿ ಕಂಪ್ಯೂಟರ್ ಬಗ್ಗೆ ಮಾಹಿತಿ ಎಲ್ಲ ನೌಕರರಿಗೂ ಇರಬೇಕು ಎಂಬ ಉದ್ದೇಶದಿಂದ, ಎಲ್ಲರಿಗೂ ಕಂಪ್ಯೂಟರ್ ಜ್ಞಾನ ಒದಗಿಸವ ಪ್ರಯತ್ನ ಇದಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.ಪ್ರಾಯೋಗಿಕ ಹಾಗೂ ಲಿಖಿತ ಪರೀಕ್ಷೆ ಇರುತ್ತದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗುವುದು. ನೌಕರರು, ಕನ್ನಡ ಅಥವಾ ಇಂಗ್ಲಿಷ್ ಆಯ್ಕೆ ಮಾಡಿಕೊಳ್ಳಬಹುದು. ಕಂಪ್ಯೂಟರ್ ಎಂದರೇನು? ಕಂಪ್ಯೂಟರ್‌ನ ಭಾಷೆ, ಮೂಲ ಅಂಶಗಳು, ಕಂಪ್ಯೂಟರ್‌ಗೆ ಸಂಬಂಧಿಸಿದ ಸಿಪಿಯು (ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್), ಹಾರ್ಡ್‌ವೇರ್ ಅಂಡ್ ಸಾಫ್ಟ್‌ವೇರ್, ಮೌಸ್, ವಿಂಡೋಸ್, ರೀಸೈಕಲ್ ಬಿನ್, ಸ್ಟೇಟಸ್ ಬಾರ್, ಸ್ಟಾರ್ಟ್, ಮೆನು, ವಿಂಡೋಸ್ ಎಕ್ಸ್‌ಫ್ಲೋರ್, ಕಂಟ್ರೋಲ್ ಪ್ಯಾನಲ್ಸ್, ವಾಲ್‌ಪೇಪರ್, ಸ್ಕ್ರೀನ್ ಸೇವರ್, ಎಂಎಸ್ ವರ್ಡ್, ಪ್ರಿಂಟ್ ಕೊಡುವುದು, ಎಂಎಸ್ ಎಕ್ಸೆಲ್, ಕಂಪ್ಯೂಟರ್ ಸಂವಹನ ಹಾಗೂ ಅಂತರ್‌ಜಾಲ ಬಳಕೆ, ವೆಬ್‌ಸೈಟ್, ವೆಬ್ ಬ್ರೌಸಿಂಗ್ ಸಾಫ್ಟ್‌ವೇರ್, ಇ-ಮೇಲ್, ಪವರ್ ಪಾಯಿಂಟ್ ಪ್ರೆಸೆಂಟೇಷನ್, ಸ್ಲೈಡ್ಸ್‌ಗಳನ್ನು ಸಿದ್ಧಪಡಿಸುವುದು, ಕನ್ನಡ ನುಡಿಯ ಬಗ್ಗೆ ಜ್ಞಾನ ಮೊದಲಾದ ವಿಷಯಗಳು ಪಠ್ಯಕ್ರಮದಲ್ಲಿವೆ.ಅಂಕಗಳ ನೀಡಿಕೆ ಹೇಗೆ?: ಗರಿಷ್ಠ 80 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. 90 ನಿಮಿಷ ಕಾಲಾವಕಾಶ ಇರುತ್ತದೆ. ಕಂಪ್ಯೂಟರ್ ಮೂಲಾಂಶಗಳು ಹಾಗೂ ವಿಂಡೋಸ್- ಗರಿಷ್ಠ 5 ಅಂಕ, ವರ್ಡ್ ಪ್ರೊಸೆಸಿಂಗ್-ಎಂಎಸ್ ವರ್ಡ್- ಗರಿಷ್ಠ 20 ಅಂಕ. ಸ್ಪ್ರೆಡ್‌ಶೀಟ್- ಎಂಎಸ್ ಎಕ್ಸೆಲ್- ಗರಿಷ್ಠ 20 ಅಂಕ. ಕಂಪ್ಯೂಟರ್ ಕಮ್ಯುನಿಕೇಷನ್ಸ್, ಇಂಟರ್‌ನೆಟ್, ಇ-ಮೇಲ್- ಗರಿಷ್ಠ 20 ಅಂಕ, ವರ್ಡ್ ಪ್ರೊಸೆಸಿಂಗ್‌ನಲ್ಲಿ ನುಡಿ ಕನ್ನಡ ಸಾಫ್ಟ್‌ವೇರ್ ಜ್ಞಾನ- ಗರಿಷ್ಠ 10 ಅಂಕ. ಪವರ್ ಪಾಯಿಂಟ್ ಗರಿಷ್ಠ 5 ಅಂಕ ನೀಡಲಾಗುವುದು ಎಂದು ಪಠ್ಯಕ್ರಮದ ಕುರಿತು ಕಳುಹಿಸಿರುವ ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನಡೆಸುವ ಸಂಬಂಧ 15 ದಿನಗಳ ಹಿಂದೆಯೇ ಸರ್ಕಾರದಿಂದ ಪತ್ರ ಬಂದಿದೆ. ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಮಟ್ಟದಲ್ಲಿ ಪರೀಕ್ಷೆ ನಡೆಸಲಾಗುವುದು. ಎಲ್ಲ ನೌಕರರಿಗೆ ಕಂಪ್ಯೂಟರ್ ಜ್ಞಾನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅನುತ್ತೀರ್ಣರಾದವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ.ಆದರೆ, ಅವರಿಗೆ ಬಡ್ತಿ ಹಾಗೂ ಇನ್‌ಕ್ರೀಮೆಂಟ್ ದೊರೆಯುವಾಗ ಸಮಸ್ಯೆಯಾಗುತ್ತದೆ. ಇದೇ ಮೊದಲ ಬಾರಿಗೆ ಇಂತಹ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry