ಗುರುವಾರ , ನವೆಂಬರ್ 21, 2019
21 °C
ಮತದಾನ ಶೇ 80ಕ್ಕೆ ಹೆಚ್ಚಿಸುವ ಗುರಿ- ಸಿಇಒ ಸೂಚನೆ

ಸರ್ಕಾರಿ ನೌಕರರಿಗೆ ಮತದಾನ ಕಡ್ಡಾಯ

Published:
Updated:
ಸರ್ಕಾರಿ ನೌಕರರಿಗೆ ಮತದಾನ ಕಡ್ಡಾಯ

ಉಡುಪಿ: `ಚುನಾವಣೆಯ ವಿವಿಧ ಕಾರ್ಯಗಳಿಗೆ ನಿಯೋಜಿಸಿರುವ ಎಲ್ಲ ಸರ್ಕಾರಿ ನೌಕರರೂ ಕಡ್ಡಾಯವಾಗಿ ಅಂಚೆ ಮತದಾನ ಮಾಡಬೇಕು' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯ ಎಲ್ಲಾ ಚುನಾವಣಾ ಸೆಕ್ಟರ್ ಅಧಿಕಾರಿಗಳಿಗೆ ಮತ್ತು ಮಾಸ್ಟರ್ ಟ್ರೈನಿಗಳಿಗೆ ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿಯ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಲೆಕ್ಟ್ರಾನಿಕ್ ಮತ ಯಂತ್ರ ಬಳಕೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಸಾಮಾನ್ಯವಾಗಿ ಶೇ. 65 ರಿಂದ 70 ಮತದಾನ ನಡೆಯುತ್ತಿದ್ದು, ಸ್ವೀಪ್ ಯೋಜನೆಯ ಮೂಲಕ ಮತದಾನ ಪ್ರಮಾಣವನ್ನು ಶೇ 80ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಮತದಾನ ಕಾರ್ಯಕ್ಕೆ ಶಿಕ್ಷಕರು, ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು, ವಾಹನ ಚಾಲಕರು ಮತ್ತು ಪೋಲಿಸ್ ಸಿಬ್ಬಂದಿ ಸೇರಿದಂತೆ ಸುಮಾರು 7000 ಸರ್ಕಾರಿ ನೌಕರರನ್ನು ನಿಯೋಜಿಸಲಾಗುತ್ತದೆ ಎಂದರು.`ಸರಿಯಾದ ಮಾಹಿತಿಯ ಕೊರತೆಯಿಂದ ಪ್ರತಿ ಚುನಾವಣೆಯಲ್ಲಿ ಶೇ.50 ಕ್ಕೂ ಹೆಚ್ಚು ಸಿಬ್ಬಂದಿ ಅಂಚೆ ಮೂಲಕ ಮಾಡುವ ಮತದಾನ ತಿರಸ್ಕೃತವಾಗುತ್ತಿದ್ದು, ಈ ತರಬೇತಿಯಲ್ಲಿ ಭಾಗವಹಿಸಿರುವ ಸೆಕ್ಟರ್ ಅಧಿಕಾರಿಗಳು ಮತ್ತು ಮಾಸ್ಟರ್ ಟ್ರೈನಿಗಳು ತಮ್ಮ ಅಧೀನದ ಸಿಬ್ಬಂದಿಗೆ ಅಂಚೆ ಮತದಾನ ಮಾಡುವ ಕುರಿತು ಸಮರ್ಪಕ ಮಾಹಿತಿ ನೀಡ ಬೇಕು' ಎಂದು ಅವರು ಸೂಚಿಸಿದರು. ಅಂಚೆ ಮತದಾನ ವಿಧಾನವನ್ನು ಹಾಗೂ ಅಂಚೆ ಮತದಾನದಲ್ಲಿ ಬಳಸುವ ವಿವಿದ ನಮೂನೆಯ ಅರ್ಜಿಗಳನ್ನು ಹಾಗೂ ಅವುಗಳನ್ನು ಸಲ್ಲಿಸುವ ಸವಿವರವನ್ನು ಅವರು ನೀಡಿದರು. `ಸೆಕ್ಟರ್ ಅಧಿಕಾರಿಗಳು ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಎಲೆಕ್ಟ್ರಾನಿಕ್ ಮತ ಯಂತ್ರ ಬಳಕೆ ಕುರಿತ ತರಬೇತಿ ನೀಡಬೇಕು. ಮತದಾನದ ದಿನ ಕಂಡು ಬರುವ ಮತಯಂತ್ರಗಳ ಸಮಸ್ಯೆಗಳಿಗೂ ಸಹ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ. ಹಾಗೂ ತಮ್ಮ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅವಶ್ಯವಿದ್ದರೆ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಬೇಕು' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.

 

`ತಮ್ಮ ವ್ಯಾಪ್ತಿಯ ಮತಗಟ್ಟೆಗಳನ್ನು ಪರೀಕ್ಷಿಸಿ ವರದಿ ನೀಡಬೇಕು ಹಾಗೂ ಸಾರ್ವಜನಿಕರಿಗೆ ಎಲೆಕ್ಟ್ರಾನಿಕ್ ಮತ ಯಂತ್ರ ಬಳಕೆ ಕುರಿತ ಪ್ರಾತ್ಯಕ್ಷಿಕೆಯನ್ನು ನೀಡಬೇಕು' ಎಂದರು. ಸೆಕ್ಟರ್ ಅಧಿಕಾರಿಗಳಿಗೆ ಮತ್ತು ಮಾಸ್ಟರ್ ಟ್ರೈನಿಗಳಿಗೆ ಎಲೆಕ್ಟ್ರಾನಿಕ್ ಮತ ಯಂತ್ರ ಬಳಕೆ ಕುರಿತು ಜಿಲ್ಲಾ ಮಾಸ್ಟರ್ ಟ್ರೈನಿ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ತರಬೇತಿ ನೀಡಿದರು.

ಪ್ರತಿಕ್ರಿಯಿಸಿ (+)