ಶುಕ್ರವಾರ, ನವೆಂಬರ್ 22, 2019
23 °C

ಸರ್ಕಾರಿ ನೌಕರರಿಗೆ ಮತದಾರರ ಹೊಣೆ!

Published:
Updated:

ದಾವಣಗೆರೆ: ಮತಗಟ್ಟೆಗೆ ಇಂತಿಷ್ಟು ಕಾರ್ಯಕರ್ತರನ್ನು ನಿಯೋಜಿಸುವುದು, `ನಿರಂತರ ಸಂಪರ್ಕ'ದಲ್ಲಿ ಇರುವ ಮೂಲಕ ಆ ವ್ಯಾಪ್ತಿಯ ಮತದಾರರು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಮನವೊಲಿಸುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುವುದನ್ನು ನೋಡಿದ್ದೀರಿ; ಕೇಳಿದ್ದೀರಿ. ಇದೇ ಮಾದರಿಯ ಪ್ರಯೋಗವನ್ನು ಈ ಬಾರಿ ಚುನಾವಣಾ ಆಯೋಗ ಮಾಡಲು ಕಾರ್ಯಕ್ರಮ ರೂಪಿಸಿದೆ.ಪ್ರತಿ 5ರಿಂದ 10 ಮತಗಟ್ಟೆಗೆ ಇಂತಿಷ್ಟು ಸರ್ಕಾರಿ ನೌಕರರನ್ನು ನಿಯೋಜಿಸಬೇಕು. ಅವರ ಮೂಲಕ ಆಯಾ ವ್ಯಾಪ್ತಿಯ ಮತದಾರರಿಗೆ ಮತದಾನದ ಅರಿವು ಮೂಡಿಸಬೇಕು. ನಿರ್ಭೀತಿಯಿಂದ ಮತಗಟ್ಟೆಗೆ ಆಗಮಿಸುವಂತೆ `ಧೈರ್ಯ' ತುಂಬುವ ಕೆಲಸವನ್ನು ಈ ತಂಡ ಮಾಡಬೇಕು ಎಂದು ಆಯೋಗ ಸೂಚಿಸಿದೆ.2008ರಲ್ಲಿ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ದಾಖಲಾದ ಮತದಾನದ ಪ್ರಮಾಣವನ್ನು ಈ ಬಾರಿ ಮೀರಿಸುವ ಗುರಿ ಆಯೋಗದ್ದು. ಹೀಗಾಗಿ, ಪ್ರತಿ 5ರಿಂದ 10 ಮತಗಟ್ಟೆಗೆ ಒಬ್ಬ ನೋಡೆಲ್ ಅಧಿಕಾರಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲು ಆಯೋಗ ಸೂಚಿಸಿದೆ. ಶಿಕ್ಷಣ ಇಲಾಖೆಯ ಸಿಆರ್‌ಸಿ (ಕ್ಲಸ್ಟರ್ ರಿಸೋರ್ಸ್ ಪರ್ಸನ್), ಬಿಆರ್‌ಸಿ (ಬ್ಲಾಕ್ ರಿಸೋರ್ಸ್ ಪರ್ಸನ್) ಹಾಗೂ ಸ್ಥಳೀಯ ಸಂಸ್ಥೆಗಳ ಬಿಲ್‌ಕಲೆಕ್ಟರ್‌ಗಳನ್ನು ಒಳಗೊಂಡ ಸಿಬ್ಬಂದಿಯ ತಂಡಗಳಿಗೆ, ಇಂತಿಷ್ಟು ಮತಗಟ್ಟೆಗಳ ವ್ಯಾಪ್ತಿಯ ಪ್ರದೇಶ ನೀಡಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ `ಪ್ರಜಾವಾಣಿ'ಗೆ ತಿಳಿಸಿದರು.ಏನಿದು ಜವಾಬ್ದಾರಿ?: ಈ ತಂಡ, ನಿಗದಿಪಡಿಸಿದ ವ್ಯಾಪ್ತಿಯ ಪ್ರತಿ ಮನೆ ಮನೆಗೆ ಭೇಟಿ ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಮತದಾನದ ಮಹತ್ವ ಏನೆಂಬುದನ್ನು ತಿಳಿಸಿಕೊಡಲಿದೆ.  ಮತದಾನ ಜಾಗೃತಿಗೆ ಎಲ್ಲ ಇಲಾಖೆಗಳ ಸಿಬ್ಬಂದಿ ಬಳಸಲಾಗುತ್ತಿದೆ. ತಂಡ, ಪ್ರತಿ ಮನೆಗೆ ಭೇಟಿ ನೀಡಿ ಮತ ಜಾಗೃತಿ ಮೂಡಿಸಬೇಕು. ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಬೇಕು. ಹಿಂದಿನ ಚುನಾವಣೆಗಿಂತ ಕಡಿಮೆ ಪ್ರಮಾಣದ ಮತದಾನ ಆಯಾ ವ್ಯಾಪ್ತಿಯಲ್ಲಿ ಆಗಿರುವುದು ಕಂಡುಬಂದರೆ, ಇದಕ್ಕೆ ನಿಯೋಜಿತ ತಂಡವನ್ನೇ ಹೊಣೆ ಮಾಡಲಾಗುವುದು ಎನ್ನುತ್ತಾರೆ ಹೇಮಚಂದ್ರ.ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಈ ರೀತಿಯ ಕಾರ್ಯಕ್ರಮ ನಡೆಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ನಗರ ಪ್ರದೇಶದಲ್ಲಿ ಶೀಘ್ರವೇ ಆರಂಭಗೊಳ್ಳಲಿದೆ. ಕಾರ್ಯಕ್ರಮದ ಮೇಲ್ವಿಚಾರಣೆಗೆ, ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಳ್ಳಿಗಳಲ್ಲಿ ಪಂಚಾಯ್ತಿವಾರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಮತದಾನ ಜಾಗೃತಿಗೆ ಕವಿಗೋಷ್ಠಿ

ಮತದಾನ ಜಾಗೃತಿಗೆ ಕವಿತೆಗಳ `ಮೊರೆ' ಹೋಗುವುದಕ್ಕೆ ಆಯೋಗ ವಿಶೇಷ ಕಾರ್ಯಕ್ರಮ ರೂಪಿಸಿದೆ.

ಜಿಲ್ಲಾಮಟ್ಟದಲ್ಲಿ ಆಸಕ್ತರು, ಮತದಾನ ಜಾಗೃತಿ ಬಗ್ಗೆ ಕವಿತೆ ರಚಿಸಿ ಸಲ್ಲಿಸಬಹುದು. ಇವೆಲ್ಲವನ್ನು ಸಂಗ್ರಹಿಸಿ ನಿರ್ದಿಷ್ಟ ದಿನದಂದು ಕವಿಗೋಷ್ಠಿ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಉತ್ತಮ ಕವಿತೆ ರಚಿಸಿದವರಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಪ್ರಚಾರ ನೀಡಲಾಗುವುದು ಎಂದು ಹೇಮಚಂದ್ರ ತಿಳಿಸಿದರು.

 

ಪ್ರತಿಕ್ರಿಯಿಸಿ (+)