ಬುಧವಾರ, ಮೇ 18, 2022
25 °C

ಸರ್ಕಾರಿ ನೌಕರರ ಚುನಾವಣೆ: ಶೇ 95ರಷ್ಟು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ನಿರ್ದೇಶಕರ (ಕಾರ್ಯಕಾರಿ ಸಮಿತಿ) ಆಯ್ಕೆಗೆ ಸೋಮವಾರ ನಗರದ ಸೀತಮ್ಮ ಪ್ರೌಢಶಾಲೆಯಲ್ಲಿ ನಡೆದ ಚುನಾವಣೆ ಶಾಂತಿಯುತವಾಗಿತ್ತು.25 ಇಲಾಖೆಗಳ ಒಟ್ಟು 27 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿತ್ತು. ಉಳಿದ 22 ಇಲಾಖೆಗಳ 31 ಸ್ಥಾನಕ್ಕೆ ಆಯ್ಕೆ ಬಯಸಿ 92 ಅಭ್ಯರ್ಥಿಗಳು ಕಣದಲ್ಲಿದ್ದರು. 4,535 ಮತದಾರರಿದ್ದರು. ಈ ಪೈಕಿ ಶೇ 95ರಷ್ಟು ಮತದಾನವಾಗಿದೆ. ಮತದಾನ ಶಾಂತಿಯುತವಾಗಿ ನಡೆಯಿತು. ವಿಜೇತರಿಗೆ ಸ್ಥಳದಲ್ಲಿಯೇ ಪ್ರಮಾಣಪತ್ರ ವಿತರಿಸಲಾಗಿದೆ. ನಾಮಪತ್ರ ಸಲ್ಲಿಸಿದ್ದ 142 ಮಂದಿಯಲ್ಲಿ, 50 ಮಂದಿ  ನಾಮಪತ್ರ ವಾಪಸ್ ಪಡೆದಿದ್ದು, 92 ಮಂದಿ ಕಣದಲ್ಲಿದ್ದಾದರು ಎಂದು ಚುನಾವಣಾಧಿಕಾರಿ ಶೋಭಾ `ಪ್ರಜಾವಾಣಿ'ಗೆ ತಿಳಿಸಿದರು.ಬಿರುಸಿನ ಮತದಾನ: ಸೀತಮ್ಮ ಪ್ರೌಢಶಾಲೆಯ ಬಹುತೇಕ ಕೊಠಡಿಗಳಲ್ಲಿ ಮತಗಟ್ಟೆಗಳನ್ನು ಹಾಕಲಾಗಿತ್ತು. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಮತದಾನ ನಡೆಯಿತು. ನೌಕರರು ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಶಾಲೆಯ ಎದುರಿನ ಪಾದಚಾರಿ ಮಾರ್ಗದಲ್ಲಿ ಶಾಮಿಯಾನ ಹಾಕಿಕೊಂಡಿದ್ದ ಅಭ್ಯರ್ಥಿಗಳ ಬೆಂಬಲಿಗರು, `ತಮ್ಮವರಿಗೆ' ಮತ ಹಾಕುವಂತೆ ಕೋರಿಕೊಳ್ಳುತ್ತಿದ್ದುದು ಹಾಗೂ ಅಭ್ಯರ್ಥಿಗಳು ಕೊನೆಕ್ಷಣದ ಕಸರತ್ತು ನಡೆಸುತ್ತಿದ್ದುದು ಕಂಡುಬಂದಿತು. ಆಗಾಗ ಬೀಳುತ್ತಿದ್ದ ಮಳೆ ಅಭ್ಯರ್ಥಿಗಳು ಹಾಗೂ ಬೆಂಬಲಿಗರ ಮತಪ್ರಚಾರಕ್ಕೆ ಅಡ್ಡಿಯಾಯಿತು. ಮಳೆಯ ನಡುವೆಯೂ ಮತದಾರರ ಉತ್ಸಾಹ ಕುಗ್ಗಲಿಲ್ಲ.ಮತ ಹಾಕಲು ಬರುವವರಿಗೆ `ಚೀಟಿ' ನೀಡಿ, ತಮಗೇ ಮತ ಹಾಕುವಂತೆ ಅಭ್ಯರ್ಥಿಗಳು ಕೋರುತ್ತಿದ್ದರು. ಶಾಲೆಯ ಕಾಂಪೌಂಡ್ ಆವರಣದಲ್ಲಿ ನಿಲ್ಲುತ್ತಿದ್ದ ನೌಕರರನ್ನು ಹೊರ ಕಳುಹಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದೇ ವಿಚಾರಕ್ಕೆ ಕೆಲವರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದುದು ಕಂಡುಬಂದಿತು. ಕೆಲ ಅಭ್ಯರ್ಥಿಗಳು, ಪ್ರವಾಸಿ ಮಂದಿರದ ಆವರಣದಲ್ಲಿ ಮತದಾರರಿಗೆ ಉಪಾಹಾರದ ವ್ಯವಸ್ಥೆ ಮಾಡಿದ್ದರು.ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ 3 ಸ್ಥಾನಗಳಿಗೆ 15 ಮಂದಿ, ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ 2 ಸ್ಥಾನಕ್ಕೆ 7 ಮಂದಿ, ಪ್ರಾಥಮಿಕ ಶಿಕ್ಷಣ ಇಲಾಖೆಯ 4 ಸ್ಥಾನಕ್ಕೆ 13 ಮಂದಿ, ಪ್ರೌಢಶಿಕ್ಷಣ ಇಲಾಖೆಯ 2 ಸ್ಥಾನಕ್ಕೆ 8 ಮಂದಿ, ನ್ಯಾಯಾಂಗ ಇಲಾಖೆಯ 2 ಸ್ಥಾನಕ್ಕೆ 6 ಮಂದಿ ಸ್ಪರ್ಧಿಸ್ದ್ದಿದರು. ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 1,510 ಮತದಾರರಿದ್ದರು. ಹೀಗಾಗಿ, ಮತ ಎಣಿಕೆ ಪ್ರಕ್ರಿಯೆ ರಾತ್ರಿವರೆಗೂ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.