ಸರ್ಕಾರಿ ನೌಕರರ ಸಮಾವೇಶದಲ್ಲಿ ಅರಣಾ ಪಾಟೀಲ ಕರೆ

7

ಸರ್ಕಾರಿ ನೌಕರರ ಸಮಾವೇಶದಲ್ಲಿ ಅರಣಾ ಪಾಟೀಲ ಕರೆ

Published:
Updated:

ಗುಲ್ಬರ್ಗ: ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ನೌಕರರ ಪಾತ್ರ ಹಿರಿದಾಗಿದೆ. ನೌಕರರು ಪ್ರಾಮಾಣಿಕತೆ ಮತ್ತು ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ನೆರವಾಗಬೇಕು ಎಂದು ಶಾಸಕಿ ಅರುಣಾ ಸಿ. ಪಾಟೀಲ ತಿಳಿಸಿದರು.ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಮಾಜಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ನೌಕರರ ಅತಿಥಿ ಗೃಹ ಹಾಗೂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ನನ್ನ ಪತಿ ದಿ. ಚಂದ್ರಶೇಖರ ಪಾಟೀಲ ರೇವೂರ ಅವರ ಅನುದಾನದಲ್ಲಿ ನಿರ್ಮಾಣವಾಗಿರುವ ಈ ಅತಿಥಿ ಗೃಹ ಸದ್ಬಳಕೆಯಾಗಬೇಕು. ನೌಕರರ ಕಾರ್ಯಚಟುವಟಿಕೆಗಳಿಗೆ ಮತ್ತೆ ಐದು ಲಕ್ಷ ರೂಪಾಯಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.ಶಾಸಕ ಖಮರುಲ್ ಇಸ್ಲಾಂ ಮಾತನಾಡಿ, ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸು ಜಾರಿ ಕುರಿತು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ನಿಮ್ಮ ಜೊತೆ ನಾವಿದ್ದೇವೆ. ಒತ್ತಡದ ಮಧ್ಯೆಯೂ ಜನರ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ನೌಕರರಿಗೆ ಎಂದು ಕರೆ ನೀಡಿದರು.ರಾಜ್ಯ ಸರ್ಕಾರ ನೌಕರರ ಪರವಾಗಿದೆ ಎನ್ನುವುದಕ್ಕೆ ವೇತನ ಆಯೋಗ ರಚನೆ ಮಾಡಿರುವುದೇ ಸಾಕ್ಷಿಯಾಗಿದೆ. ಮುಂದಿನ ಬಜೆಟ್‌ನಲ್ಲಿ 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂದು ಅವರ ಸಂದೇಶವನ್ನು ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ಸಭೆಗೆ ತಿಳಿಸಿದರು.ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಲ್. ಭೈರಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯವನ್ನು ಮುಂದಿನ ಆಯವ್ಯಯ ಪಟ್ಟಿಯಲ್ಲಿ ಸರಿಪಡಿಸಬೇಕು.

 

ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಲ್ಲಿ ಅಲ್ಲಿನ ಸರ್ಕಾರಗಳು ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ಭತ್ಯೆ ಹಾಗೂ ಸವಲತ್ತುಗಳನ್ನು ಒದಗಿಸಿದ್ದು, ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಇಲ್ಲಿನ ನೌಕರರಿಗೆ ವಿಶೇಷ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಕೋಶಾಧ್ಯಕ್ಷ ಡಾ. ಚೌಡಯ್ಯ, ಯೋಗಾನಂದ, ದಾಸಪ್ಪ, ರೇವಣಸಿದ್ದಪ್ಪ ಚಿಂಚೋಳಿ, ಮಹಿಬೂಬ್ ಅಲಿ ಪಾಶಾ, ಗೋಪಾಲ ಟಿ. ಕೌಶಿಕ್, ಎಸ್.ಎನ್. ಚಿನ್ಮಳ್ಳಿ, ವೀರಯ್ಯ ಸ್ವಾಮಿ, ಚಂದ್ರಾಮ ಹುಬಳಿ, ಚಂದ್ರಕಾಂತ ಅಷ್ಟಗಿ, ವಿರೂಪಾಕ್ಷ ಚಾಂದಕವಟೆ, ಸಿದ್ದಣ್ಣ ಕೋಲ್ಹಾರ ಮತ್ತಿತರರು   ವೇದಿಕೆಯಲ್ಲಿದ್ದರು.ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ದೇಸಾಯಿ ಸ್ವಾಗತಿಸಿದರು.

ಇದಕ್ಕೂ ಮುನ್ನ ಜಗತ್ ವೃತ್ತದಿಂದ ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry