ಸರ್ಕಾರಿ ನೌಕರಿಯ ಭರವಸೆ

7
ಅಂಧರ ವಿಶ್ವಕಪ್ ಗೆದ್ದ ಕರ್ನಾಟಕ ಆಟಗಾರರಿಗೆ

ಸರ್ಕಾರಿ ನೌಕರಿಯ ಭರವಸೆ

Published:
Updated:
ಸರ್ಕಾರಿ ನೌಕರಿಯ ಭರವಸೆ

ಬೆಂಗಳೂರು: `ಅಂಧರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡದಲ್ಲಿದ್ದ ಕರ್ನಾಟಕದ ಮೂವರು ಆಟಗಾರರಿಗೆ ಸರ್ಕಾರಿ ನೌಕರಿ ನೀಡುವ ಕುರಿತು ಚಿಂತನೆ ನಡೆದಿದೆ.

ಶೀಘ್ರದಲ್ಲಿಯೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಚಿವ ಅಪ್ಪಚ್ಚು ರಂಜನ್ ಭರವಸೆ ನೀಡಿದರು.ಅಂಧರ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿದ್ದ ಕನ್ನಡಿಗರಾದ ಶೇಖರ್ ನಾಯ್ಕ, ಪ್ರಕಾಶ್ ಜಯರಾಮಯ್ಯ ಮತ್ತು ಎಸ್. ರವಿ ಅವರಿಗೆ ಗುರುವಾರ ನಡೆದ ಬಹುಮಾನ ಪ್ರದಾನ ಸಂದರ್ಭದಲ್ಲಿ ಅವರು ಮಾತನಾಡಿದರು.`ವಿಶ್ವಕಪ್ ಟೂರ್ನಿ ಆಯೋಜಿಸಲು ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಸಂಘಟಕರಿಗೆ ಮೊದಲೇ ತಿಳಿಸಲಾಗಿತ್ತು. ಕೆಲ ದಿನಗಳಲ್ಲಿಯೇ ಈ ಹಣ ಅವರ ಕೈಸೇರಲಿದೆ. ಈಗ ಆಟಗಾರರಿಗೆ ಬಹುಮಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರಿ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ತಿಳಿಸಿದರು.ಬಹುಮಾನ ಪ್ರದಾನ: ರಾಜ್ಯದ ಮೂವರು ಆಟಗಾರರಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಲಾ ಮೂರು ಲಕ್ಷ ರೂಪಾಯಿ ಬಹುಮಾನ ಪ್ರದಾನ ಮಾಡಿದರು. ಅದರಲ್ಲಿ ಒಂದು ಲಕ್ಷ ರೂ. ಚೆಕ್ ಹಾಗೂ ಎರಡು ಲಕ್ಷ ರೂಪಾಯಿ ಠೇವಣಿ ಇಡಲಾಗಿದೆ.ವಿಶ್ವ ಅಂಧರ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಜಿ.ಕೆ. ಮಹಾಂತೇಶ್, ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ನಾಗೇಶ್, ಯುವಜನ ಸೇವಾ ಇಲಾಖೆಯ ನಿರ್ದೇಶಕ ಬಲದೇವ ಕೃಷ್ಣ, ಜಂಟಿ ನಿರ್ದೇಶಕ ಅಪ್ಪಚ್ಚು ಕಾರ್ಯಕ್ರಮದಲ್ಲಿ ಹಾಜರಿದ್ದರು.`ಸಿಎಂ ಹೇಳಿಕೆ ಬಗ್ಗೆ ಮಾಹಿತಿ ಇಲ್ಲ'

ಬೆಂಗಳೂರು:
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅಂಧ ಕ್ರಿಕೆಟ್ ಸಾಧಕರಿಗೆ ಐದು ಲಕ್ಷ ರೂಪಾಯಿ ಕೊಡುತ್ತೇವೆಂದು ಧಾರವಾಡದಲ್ಲಿ ನೀಡಿದ್ದ ಹೇಳಿಕೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಬಲದೇವ ಕೃಷ್ಣ ಸ್ಪಷ್ಟ ಪಡಿಸಿದ್ದಾರೆ.ಅಂಧ ಕ್ರಿಕೆಟ್ ಸಾಧಕರಿಗೆ ಗುರುವಾರ ತಲಾ 3ಲಕ್ಷ ಕೊಟ್ಟ ಹಿನ್ನೆಲೆಯಲ್ಲಿ ಹಿಂದೆ ಮುಖ್ಯಮಂತ್ರಿಗಳ `ಹೇಳಿಕೆ' ಬಗ್ಗೆ ಪ್ರಸ್ತಾಪಿಸಿದಾಗ ಬಲದೇವ ಕೃಷ್ಣ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕಾರಣಕ್ಕೂ ಇನ್ನು ಎರಡು ಲಕ್ಷ ರೂಪಾಯಿಗಳನ್ನು ನೀಡುವ ಸಾಧ್ಯತೆ ಇಲ್ಲವೇ ಇಲ್ಲ ಎಂದೂ ಅವರು ಖಚಿತ ಪಡಿಸಿದರು.ಗುರುವಾರ ಬೆಳಿಗ್ಗೆಯ ಕಾರ್ಯಕ್ರಮ ತೀರಾ ಅವಸರದಲ್ಲಿ ನಡೆದಿರುವುದು ನಿಜ ಎಂದು ಒಪ್ಪಿಕೊಂಡ ಅವರು `ಮುಂದೊಂದು ದಿನ ಇದಕ್ಕೆ ಸಂಬಂಧಿಸಿದಂತೆ ಉತ್ತಮ ಕಾರ್ಯಕ್ರಮವೊಂದನ್ನು ಸಂಘಟಿಸುತ್ತೇವೆ' ಎಂದರು.`ಆಟಗಾರರ ಕೈಗೆ ಚೆಕ್ ನೀಡುವ ಮುನ್ನ ಬಹುಮಾನ ಮೊತ್ತ ಐದು ಲಕ್ಷ ರೂಪಾಯಿ ಎಂದೇ ನಾವು ತಿಳಿದಿದ್ದೆವು. ಆದರೆ, ಚೆಕ್ ನೀಡಿದ ನಂತರವೇ ಈ ವಿಷಯ ಗೊತ್ತಾಯಿತು. ಇದರಿಂದ ಅಚ್ಚರಿಯೂ ಆಯಿತು. ಉಳಿದ ಹಣ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುತ್ತೇವೆ'

-ಜಿ.ಕೆ. ಮಹಾಂತೇಶ್, ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ (ಕ್ಯಾಬಿ) ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry