ಶನಿವಾರ, ಜುಲೈ 31, 2021
22 °C

ಸರ್ಕಾರಿ ಪ್ರಾಥಮಿಕ ಶಾಲೆ ಉಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹದಿನಾಲ್ಕು ವರ್ಷದ ಎಲ್ಲಾ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎನ್ನುವ ಕಾನೂನಿನ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದೆ ಬಾಗಿಲು ಮುಚ್ಚುತ್ತಿವೆ. ಗ್ರಾಮೀಣ ಭಾಗವು ಸೇರಿದಂತೆ ಎಲ್ಲಾ ಕಡೆಗಳಲ್ಲೂ ಹೊಸ ಖಾಸಗಿ ಶಾಲೆಗಳು ಆರಂಭವಾಗುತ್ತಲೇ ಇವೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು ಗ್ರಾಮೀಣ  ಜನರ ಬದುಕಿನ ಮೇಲೆ ಕೆಟ್ಟಪರಿಣಾಮ ಬೀರಲಿದೆ.ಈಗಲೇ ಗ್ರಾಮೀಣ ಪ್ರದೇಶದಲ್ಲಿನ ರೈತರ ಆರ್ಥಿಕ ಸ್ಥಿತಿ ದಿನೇ ದಿನೇ ಕ್ಷೀಣಿಸುತ್ತಿದೆ. ಸರ್ಕಾರ ಪ್ರತಿ ವರ್ಷ ಹೊಸ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದಕ್ಕೆ ಬದಲಾಗಿ ಮಕ್ಕಳ ದಾಖಲಾತಿ ಕೊರತೆಯಿಂದ ಮುಚ್ಚುತ್ತಿರುವ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನ ನೀಡಬೇಕಿದೆ. 2010ರಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಐದು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮಕ್ಕಳ ಸಂಖ್ಯೆ ಇಲ್ಲದೆ  ಮುಚ್ಚಲಾಗಿದೆ.2011ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 60 ಪ್ರಾಥಮಿಕ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದ್ದವು. ಆದರೆ ಇಷ್ಟು ದಿನಗಳ ಕಾಲ 30 ಜನ ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು ಎನ್ನುವ ನಿಯಮಕ್ಕೆ ಬದಲಾಗಿ 2011ನೇ ಸಾಲಿನಿಂದ 11 ಜನ ವಿದ್ಯಾರ್ಥಿಗೆ ಒಬ್ಬರು ಶಿಕ್ಷಕರು ಎನ್ನುವ ಹೊಸ  ‘ಹೊಂದಾಣಿಕೆ’ ನಿಯಮ ಜಾರಿಗೆ ತರಲಾಯಿತು. ಇದರಿಂದ ಮುಚ್ಚಬೇಕಾದ ಶಾಲೆಗಳಿಗೆ ಜೀವ ಬಂದಂತಾಯಿತು.ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿದರೆ ಸಾಮಾನ್ಯ ವರ್ಗದ ಜನ ದುಬಾರಿ ಶುಲ್ಕ, ವಂತಿಗೆ ನೀಡಿ ಖಾಸಗಿ ಶಾಲೆಗಳಲ್ಲಿ  ಕಲಿಯಲಾಗದೆ ಮತ್ತೆ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಲಿದೆ. ಸರ್ಕಾರ ಕೇವಲ ಆರು ಸಾವಿರ ಹೊಸ ಶಿಕ್ಷಕರನ್ನು ನೇಮಕ ಮಾಡಿಕೊಂಡರಷ್ಟೇ ಸಾಲದು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತಕ್ಕೆ ಕಾರಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ಸರಿಪಡಿಸುವ ಕಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.