ಬುಧವಾರ, ಮೇ 18, 2022
27 °C

ಸರ್ಕಾರಿ ಮದ್ಯದಂಗಡಿಗೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಬ (ಉಪ್ಪಿನಂಗಡಿ): ಇಲ್ಲಿನ ಪೇಟೆಯಲ್ಲಿ ಸರ್ಕಾರಿ ಮದ್ಯದ ಅಂಗಡಿ ಆರಂಭಕ್ಕೆ ಅನುಕೂಲ ಆಗುವ ಸಲುವಾಗಿ ಗ್ರಾಮ ಪಂಚಾಯಿತಿ ಎನ್‌ಒಸಿ ಪ್ರಮಾಣಪತ್ರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿ, ಪಂಚಾಯಿತಿ ಅದಕ್ಕೆ ಸಮ್ಮತಿಸಿ ಕಡಬ ಗ್ರಾಮ ಸಭೆ ನಿರ್ಣಯ ಅಂಗೀಕರಿಸಿದ ಘಟನೆ ಈಚೆಗೆ ನಡೆಯಿತು.  ಸಭೆ ಆರಂಭ ಆಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು ಈ ಹಿಂದೆ ಕಡಬ ಗ್ರಾಮ ಪಂಚಾಯಿತಿ ‘ಮದ್ಯ ಮುಕ್ತ ಗ್ರಾಮ’ ಮಾಡಬೇಕು ಎಂದು ನಿರ್ಣಯ ಅಂಗೀಕರಿಸಿ ಸರ್ಕಾರಿ ಸ್ವಾಮ್ಯದ ಮದ್ಯದ ಅಂಗಡಿ ತೆರೆಯುವುದಕ್ಕೆ ಆಕ್ಷೇಪ ಸಲ್ಲಿಸಿತ್ತು. ಆದರೆ ಈಗಾಗಲೇ ಇರುವ 2 ಮದ್ಯದ ಅಂಗಡಿಯನ್ನು ಬಂದ್ ಮಾಡಿಸಲು ಆಗಿರುವುದಿಲ್ಲ. ಹೀಗಿರುವಾಗ ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ಪಂಚಾಯಿತಿಯಿಂದ ಸಾಧ್ಯವಿಲ್ಲ ಎಂದಿರುವಾಗ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಮಾರಾಟ ಮಾಡುವ ಸರ್ಕಾರಿ ಮದ್ಯದಂಗಡಿಗೆ ವ್ಯವಹಾರ ಪ್ರಾರಂಭಿಸಲು ಅವಶ್ಯವಿರುವ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಮ್ಮತಿಸಿ ಎನ್‌ಒಸಿ ನೀಡುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.ಕೋಡಿಂಬಾಳ ಗ್ರಾಮದ ಉಂಡಿಲದಲ್ಲಿ ನೀರು ಸರಬರಾಜು ಬಗ್ಗೆ ಎಲ್ಲಾ ಸೌಕರ್ಯ ಇದ್ದರೂ ವಾಟರ್‌ಮ್ಯಾನ್ ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಕುಡಿಯುವ ನೀರಿಗೆ ಕೃತಕ ಸಮಸ್ಯೆ ಉಂಟಾಗಿದೆ. ಬಹಳ ದೂರದ ಬಾವಿಯೊಂದರಿಂದ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ದೂರು ಸಲ್ಲಿಸಿ ಸಮಸ್ಯೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಪಾಜೋವು ಪರಿಶಿಷ್ಟ ಜಾತಿ ಕಾಲೋನಿಗೆ ಹೋಗುವ ದಾರಿಯನ್ನು ಸ್ಥಳೀಯ ವ್ಯಕ್ತಿಯೋರ್ವರು ಅತಿಕ್ರಮಿಸಿದ್ದಾರೆ ಎಂಬ ಆರೋಪ ವ್ಯಕ್ತವಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಪುತ್ತೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ನಾಕ್ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು. ಆರೋಗ್ಯ, ಮೆಸ್ಕಾಂ, ಕಂದಾಯ, ಕೃಷಿ, ಶಿಶು ಅಬಿವೃದ್ಧಿ, ಅರಣ್ಯ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.  ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ. ಕುಮಾರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್, ಫಝಲ್, ಆಂದ್ರ, ಜನಾರ್ದನ, ಗ್ರಾಮಸ್ಥರಾದ ಸತೀಶ್ ನಾಯಕ್, ರಾಮಣ್ಣ ಗೌಡ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೃಷ್ಣಪ್ಪ, ಗೀತಾ ಬಾಲಕೃಷ್ಣ, ಶೋಭಾ ಜಯಾನಂದ್, ಪ್ರೇಮಲತಾ, ಸಾವಿತ್ರಿ, ಮಾಧವ, ನೀಲಾವತಿ ಶಿವರಾಮ, ಜಾನಕಿ, ಆದಂ, ಸುದರ್ಶನ, ಆಲೀಸ್ ಚಾಕೋ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.