ಗುರುವಾರ , ಮೇ 28, 2020
27 °C

ಸರ್ಕಾರಿ ಯೋಜನೆಗಳ ಅರಿವು ಜನರಿಗೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸರ್ಕಾರಿ ಯೋಜನೆಗಳ ಅನುಷ್ಠಾನ ಕೇವಲ ಅಧಿಕಾರಿಗಳಿಂದ ಮಾತ್ರ ಆಗುವುದಿಲ್ಲ. ಜನ ಸಾಮಾನ್ಯರೂ ಇದರ ಮಹತ್ವ ತಿಳಿದಿಕೊಂಡಾಗ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ  ಹೇಳಿದರು.ಹುಣಸೂರಿನ ಮುನೇಶ್ವರ ಕಾವಲ್ ಮೈದಾನದಲ್ಲಿ ಕ್ಷೇತ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ ಏರ್ಪಡಿಸಿದ್ದ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ಇರಬೇಕು.ಆಗ ಮಾತ್ರ ಉಪಯೋಗ ಪಡೆದುಕೊಳ್ಳಬಹುದು. ವಸ್ತು ಪ್ರದರ್ಶನದಲ್ಲಿ ಭೇಟಿ ನೀಡಿದಾಗ ಸರ್ಕಾರದ ಕೆಲ ಯೋಜನೆಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಹೀಗಿರುವಾಗ ಅಧಿಕಾರಿಗಳಿಂದ ಜನರು ಯಾವ ಮಾಹಿತಿ ನಿರೀಕ್ಷಿಸಲು ಸಾಧ್ಯ?. ಕಾರ್ಯಕ್ರಮಗಳು ಮುಖ್ಯವಾಗಿ ಅರ್ಹ ಫಲಾನುಭವಿಗಳಿಗೆ ದೊರಕಬೇಕು. ಸುತ್ತಮುತ್ತಲಿನ ಜನರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಗ್ರಾ.ಪಂ. ತಾ.ಪಂ. ಮತ್ತು ಜಿ.ಪಂ. ಚುನಾಯಿತ ಪ್ರತಿನಿಧಿಗಳು ಮೊದಲು ಮಾಹಿತಿ ಪಡೆಯಬೇಕು. ಇದರಿಂದ ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬಹುದು. ಪತ್ರಿಕೆ. ಟಿ.ವಿ. ರೇಡಿಯೋಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಕೈಗಾರಿಕೋದ್ಯಮಿಗಳಿಗೆ ಸಾಲ ಸಿಗುತ್ತಿದೆ. ಆದರೆ ಸಣ್ಣ ವ್ಯಾಪಾರ ಮಾಡುವ ಪೆಟ್ಟಿಗೆ ಅಂಗಡಿ, ಆಟೋ ಚಾಲಕ ಹಾಗೂ ಇತರರಿಗೆ ಸಾಲ ಸಿಗುತ್ತಿಲ್ಲ.ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡಲು ಮುಂದಾಗಬೇಕು. ಸಕಾಲದಲ್ಲಿ ಸಾಲ ಪಾವತಿ ಮಾಡುವವರಿಗೆ ಇನ್ಸೆಂಟಿವ್ ನೀಡುವ ವ್ಯವಸ್ಥೆಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಜಾರಿಗೆ ತರಲಿದೆ. ಹಕ್ಕು ತಿಳಿದುಕೊಂಡು ಹಕ್ಕು ಚಲಾಯಿಸಿರಿ ಎಂದು ಜನತೆಗೆ ಕರೆ ನೀಡಿದರು.ವಿಧಾನ ಪರಿಷತ್ ಸದಸ್ಯ ಚಿಕ್ಕಮಾದು ಮಾತನಾಡಿ, ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಜನರಿಗೆ ಬೇಕಾಗಿಲ್ಲ. ರೂ. 170 ರೂಪಾಯಿ ಸೀರೆ ಯಾರಿಗೆ ಬೇಕು? ಅದರ ಬದಲು ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ, ಅಂಗನವಾಡಿ ಕಟ್ಟಡ ಹಾಗೂ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಬಗ್ಗೆ ಜನರು ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮ ಇಂದಿನಿಂದ ಭಾನುವಾರದವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಯೋಜನೆಗಳನ್ನು ಮ್ಯಾಜಿಕ್ ಶೋ, ಬೀದಿ ನಾಟಕ, ಚಲನಚಿತ್ರ ಪ್ರದರ್ಶನಗಳ ಮೂಲಕ ಅರಿವು ಮೂಡಿಸಲಾಗುತ್ತದೆ.ಕಾರ್ಯಕ್ರಮದಲ್ಲಿ ಪಿಐಬಿ ಉಪ ನಿರ್ದೇಶಕಿ ಪಲ್ಲವಿ ಚಿಣ್ಯ, ಕ್ಷೇತ್ರ ಪ್ರಚಾರ ನಿರ್ದೇಶನಾಲಯ ನಿರ್ದೇಶಕ ಎಂ.ನಾಗೇಂದ್ರ ಸ್ವಾಮಿ, ಪ್ರೊಬೇಷನರಿ ಉಪ ವಿಭಾಗಾಧಿಕಾರಿ ಪ್ರಿಯಾಂಕ್ ಫ್ಯಾನ್ಸಿಸ್, ಉಪವಿಭಾಗಾಧಿಕಾರಿ ಲಿಂಗಮೂರ್ತಿ, ಪುರಸಭೆ ಅಧ್ಯಕ್ಷೆ ಮಂಜುಳಾ ಚೆನ್ನಬಸಪ್ಪ, ಇಓ ಪಾಪಣ್ಣ ಹಾಗೂ ಇತರರು ಹಾಜರಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.