ಗುರುವಾರ , ಅಕ್ಟೋಬರ್ 17, 2019
22 °C

ಸರ್ಕಾರಿ ಯೋಜನೆ ಸದುಪಯೋಗಪಡಿಸಿ

Published:
Updated:

ನರಸಿಂಹರಾಜಪುರ: ಹೊಲಿಗೆ ವೃತ್ತಿಯಲ್ಲಿ ತೊಡಗಿಕೊಂಡವರಿಗೆ ನೂತನ ಪಿಂಚಣಿ ವ್ಯವಸ್ಥೆ ಸ್ವಾವಲಂಬನ್ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ ಎಂದು ಕರ್ನಾಟಕ ರಾಜ್ಯ ಟೈಲರ್ಸ್‌ ಅಸೋಷಿಯೇಷನ್‌ನ ಶೃಂಗೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಶಾರದ ವಿಠಲ ಭಂಡಾರಿ ತಿಳಿಸಿದರು.ಪಟ್ಟಣದ ಕೃಷಿ ಭವನದಲ್ಲಿ ಇತ್ತೀಚೆಗೆ ರಾಜ್ಯ ಟೈಲರ್ಸ್‌ ಅಸೋಷಿಯೇಷನ್‌ನ  ತಾಲ್ಲೂಕು ಶಾಖೆ ವತಿಯಿಂದ ನಡೆದ ಈ ಹೊಸ ಪಿಂಚಣಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಯೋಜನೆಗೆ ಸೇರುವ ಫಲಾನುಭವಿ ಪ್ರತಿ ತಿಂಗಳಿಗೆ ಕನಿಷ್ಠ ರೂ.100 ಪಾವತಿ ಮಾಡಬೇಕು. ರಾಜ್ಯ ಸರ್ಕಾರ ತನ್ನ ವಂತಿಗೆ ರೂ.100 ಹಾಗೂ ಕೇಂದ್ರ ಸರ್ಕಾರ ವಾರ್ಷಿಕ ರೂ.1,000 ಅನ್ನು ಪ್ರತಿ ಫಲಾನುಭವಿಯ ಖಾತೆಗೆ ಜಮಾ ಮಾಡುತ್ತದೆ. ಪ್ರತಿ ಫಲಾನುಭವಿಯು 18ರಿಂದ 60ವರ್ಷದವರೆಗೆ ಹಣ ಜಮಾ ಮಾಡಬೇಕಾಗುತ್ತದೆ. ಸದ್ಯಕ್ಕೆ ರಾಜ್ಯ ಸರ್ಕಾರ 3ವರ್ಷ ಅವಧಿಗೆ ಹಾಗೂ ಕೇಂದ್ರ ಸರ್ಕಾರವು 5ವರ್ಷಗಳ ಅವಧಿಗೆ ಈ ಯೋಜನೆಗೆ ಹಣ ಸಂದಾಯ ಮಾಡಲು ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ, ಟೈಲರಿಂಗ್ ವೃತ್ತಿಯಲ್ಲಿ ನಿರತರಾಗಿರುವವರು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಇತರ ಬೇಡಿಕೆಗಳ ಈಡೇರಿಕೆ ಸಂಘಟಿತರಾಗಿ ಹೋರಾಟ ನಡೆಸ ಬೇಕೆಂದರು.ಕರ್ನಾಟಕ ರಾಜ್ಯ ಟೈಲರ್ ಅಸೋಷಿಯೇಷನ್‌ನ ತಾಲ್ಲೂಕು ಶಾಖೆಯ ಅಧ್ಯಕ್ಷ ಎನ್.ವಿಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಟೈಲರ್ಸ್‌ ಸಂಘದ ತಾಲ್ಲೂಕು ಶಾಖೆಯ ಗೌರವಾಧ್ಯಕ್ಷ ಗಿರಿಧರ್,ಕೋಶಾಧಿಕಾರಿ ಮಂಜುನಾಥ್, ನಟೇಶ್,ಕೊಪ್ಪಶಾಖೆಯ  ಅಧ್ಯಕ್ಷ ಚಂದ್ರಶೇಖರ್, ಕ್ಯಾಮ್ಸ ಏಜೆನ್ಸಿಯ ಪ್ರಶಾಂತ್ ಇದ್ದರು. ಸಂಘದ 90ಕ್ಕೂ ಅಧಿಕ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.              

 

Post Comments (+)