ಸರ್ಕಾರಿ ರಸ್ತೆಗೆ ಸ್ವಂತ ಹಣ

7

ಸರ್ಕಾರಿ ರಸ್ತೆಗೆ ಸ್ವಂತ ಹಣ

Published:
Updated:
ಸರ್ಕಾರಿ ರಸ್ತೆಗೆ ಸ್ವಂತ ಹಣ

ಸರ್ಕಾರಿ ಹಣದಲ್ಲಿ ಖಾಸಗಿ ರಸ್ತೆ ಮಾಡಿಸಿಕೊಂಡವರನ್ನು, ತಮ್ಮ ಸ್ವಂತಕ್ಕೆ ಅನುಕೂಲ ಪಡೆದವರನ್ನು ಬೇಕಾದಷ್ಟು ನೋಡಿದ್ದೇವೆ. ಆದರೆ ವ್ಯಕ್ತಿಯೊಬ್ಬರು ಸ್ವಂತ ಹಣ (ಅದೂ ಒಂದೆರಡಲ್ಲ ಸುಮಾರು 6 ಕೋಟಿ ರೂಪಾಯಿ) ಖರ್ಚು ಮಾಡಿ ಸಾರ್ವಜನಿಕ ರಸ್ತೆ ನಿರ್ಮಿಸಿದ ಅಪರೂಪದ ಪ್ರಸಂಗವೊಂದು ಇಲ್ಲಿದೆ.2.56 ಕಿಮಿ ಉದ್ದದ ಆ ರಸ್ತೆ ಇರುವುದು ಹೇಸರಘಟ್ಟ ರಸ್ತೆ ಸೋಲದೇವನಹಳ್ಳಿಯ ಆಚಾರ್ಯ ಶಿಕ್ಷಣ ಸಂಸ್ಥೆ ಬಳಿ. ಅದರಿಂದ ಸಂಸ್ಥೆಯ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಸುತ್ತಲಿನ ಸುಮಾರು 6 ಗ್ರಾಮಗಳ ಜನರಿಗೂ ಉಪಯೋಗವಾಗುತ್ತಿದೆ. ಕೈಯಿಂದ ಹಣ ಹಾಕಿ ರಸ್ತೆ ಮಾಡಿಸಿದವರು ಸಂಸ್ಥೆ ಅಧ್ಯಕ್ಷ ಬಿ. ಪ್ರೇಮನಾಥ ರೆಡ್ಡಿ. 2000ನೇ ಇಸ್ವಿಯಲ್ಲಿ ನಡೆದ ಒಂದು ತೀವ್ರ ರಸ್ತೆ ಅಪಘಾತ ಈ ಕಾರ್ಯಕ್ಕೆ ಅವರಿಗೆ ಪ್ರೇರಣೆ.ಸಾಮಾನ್ಯವಾಗಿ ಸರ್ಕಾರವು ಜನ ಪ್ರತಿನಿಧಿಗಳ ಮೂಲಕ ನಾಗರಿಕರ ಕಷ್ಟಗಳನ್ನು ಅರಿತುಕೊಂಡು ಪರಿಹಾರ ಕ್ರಮ ಕೈಗೊಳ್ಳುತ್ತದೆ. ಆದರೆ ಇಲ್ಲಿ ಒಬ್ಬ ಪ್ರಜ್ಞಾವಂತ ನಾಗರಿಕ, ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಕಂಡು ಕಷ್ಟ ಅರುಹಿದರೂ ಯಾವುದೇ ಪ್ರಯೋಜನ ಆಗದೇ ಇದ್ದಾಗ ಖುದ್ದು ತಾನೇ ಅಖಾಡಕ್ಕೆ ಇಳಿದು ಗುರಿ ಸಾಧಿಸಿದ್ದಾರೆ. ಅದರ ಫಲವಾಗಿ ರಸ್ತೆ ಕಾಮಗಾರಿ ಈಗ ಪೂರ್ಣಗೊಂಡಿದೆ.ಅಲ್ಲಿ ಮೊದಲು ಸ್ಥಳೀಯರು ತಮ್ಮ ಓಡಾಟಕ್ಕಾಗಿ ಮಣ್ಣಿನ ರಸ್ತೆಯನ್ನು ಬಳಸುತ್ತಿದ್ದರು. 1960 ರಿಂದಲೂ ಪಕ್ಕಾ ರಸ್ತೆಯ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಇತರ ಜನ ಪ್ರತಿನಿಧಿಗಳನ್ನು ಒತ್ತಾಯಿಸುತ್ತಲೇ ಬಂದಿದ್ದರು. ಸ್ಥಳೀಯ ಸರ್ಕಾರಿ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಈ ನಿಟ್ಟಿನಲ್ಲಿ ಪ್ರಮುಖರು. ಆದರೆ ಅವರ ನಿರಂತರ ಹೋರಾಟಕ್ಕೆ ಸಿಕ್ಕ ಫಲ ಮಾತ್ರ ಶೂನ್ಯ. 1990 ರಲ್ಲಿ ಆಚಾರ್ಯ ಶಿಕ್ಷಣ ಸಂಸ್ಥೆ ಸೋಲದೇವನಹಳ್ಳಿಯ 120 ಎಕರೆ ಪ್ರದೇಶದಲ್ಲಿ ಶಾಲೆ, ಕಾಲೇಜು ಆರಂಭಿಸಿತು. ಆಗಂತೂ ರಸ್ತೆ ದುಸ್ಥಿತಿ ಹೇಳುವಂತೆಯೇ ಇರಲಿಲ್ಲ. ಸಂಸ್ಥೆಯವರೂ ಸರ್ಕಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅರ್ಜಿ ಬರೆದೂ ಬರೆದೂ ಸುಸ್ತಾದರು. ಏನೂ ಪ್ರಯೋಜನವಾಗಲಿಲ್ಲ.ಆದರೆ ಈ ಕಥೆಯು ತಿರುವು ಪಡೆದುಕೊಂಡದ್ದು 2000 ನೇ ಇಸವಿಯಲ್ಲಿ. ಅಂದು ಒಂದು ದಿನ ಕಾಲೇಜಿನ  ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ಮಣ್ಣಿನ ರಸ್ತೆಯ ಬದಿಯ ಮನೆಯೊಂದಕ್ಕೆ ಹೋಗಿ ಅಪ್ಪಳಿಸಿತು. ಅದೃಷ್ಟವಶಾತ್ ಮನೆ ಮಂದಿ ಮತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಹೆಚ್ಚಿನ ಗಾಯಗಳೇನೂ ಆಗಲಿಲ್ಲ. ಆ ರಸ್ತೆ ಉದ್ದಕ್ಕೂ ಬೆಂಗಳೂರು ನೀರು ಸರಬರಾಜು ಮಂಡಳಿಯ ಪೈಪ್‌ಲೈನ್ ಇತ್ತು. ಜೊತೆಗೆ 10 ಅಡಿ ಅಗಲದ ಮಣ್ಣು ರಸ್ತೆ ನಿರ್ವಹಣೆ ಹೊಣೆ ಕೂಡ ಅದರ ಮೇಲಿತ್ತು. ಆಗ ರೆಡ್ಡಿ ಅವರು ಜಲಮಂಡಳಿಯನ್ನು ಸಂಪರ್ಕಿಸಿ `ರಸ್ತೆಯನ್ನು ಸಾರ್ವಜನಿಕ ಉಪಯೋಗಕ್ಕೆ ಬಿಡಿ~ ಎಂದು ವಿನಂತಿಸಿದರು.ಆದರೆ ಅಧಿಕಾರಿಗಳು ಒಪ್ಪಲಿಲ್ಲ. ಬದಲಾಗಿ ಈ ರಸ್ತೆ ಬಳಸಿದರೆ ತಿಂಗಳಿಗೆ 30 ಸಾವಿರ ರೂ ತೆರಬೇಕು ಎಂಬ ಷರತ್ತು ಹಾಕಿದರು. ಇಷ್ಟಾದರೂ ಟಾರ್ ಹಾಕಲು ಮಾತ್ರ ಸುತಾರಾಂ ಒಪ್ಪಲಿಲ್ಲ.

ಉದ್ದಕ್ಕೂ ವಿಘ್ನ

ರೆಡ್ಡಿಯವರ ಮಾತಿನಲ್ಲಿಯೇ ಹೇಳುವುದಾದರೆ `ನಾನೇ ನನ್ನ ಸ್ವಂತ ಹಣದಿಂದ ರಸ್ತೆಯನ್ನು ನಿರ್ಮಿಸಲು ಮುಂದಾದೆ. ಸುತ್ತಲಿನ ಆರು ಹಳ್ಳಿಯ  ಜನಪ್ರತಿನಿಧಿಗಳನ್ನು ಮತ್ತು ಜಮೀನು ಮಾಲೀಕರನ್ನು  ಮಾತುಕತೆಗೆ ಆಹ್ವಾನಿಸಿ ಮನವೊಲಿಸಿದೆ. ಬರೀ ಜಮೀನು ಖರೀದಿಗೆ ಬರೋಬ್ಬರಿ 60 ಲಕ್ಷದಷ್ಟು ಬೃಹತ್ ಮೊತ್ತವನ್ನು ತೆತ್ತೆವು. ಆದರೂ ಇಡೀ ಕೆಲಸ ಅಷ್ಟು ಸುಲಭವಾಗಿರಲಿಲ್ಲ~.`ಈ ಮಧ್ಯೆ ಜಮೀನು ಮಾಲೀಕರೊಬ್ಬರು ಕೋರ್ಟ್ ಮೆಟ್ಟಿಲೇರಿದರು. ಅದರ ಜೊತೆಗೆ ಒಂದಿಷ್ಟು ಸಮಾಜಘಾತುಕ ಶಕ್ತಿಗಳು ಕೈ ಜೋಡಿಸಿ, ನನಗೆ ಮತ್ತು ಕಂಟ್ರಾಕ್ಟರ್‌ಗೆ ಜೀವ ಬೆದರಿಕೆ ಹಾಕಿದರು. ನಂತರ ನಾನು ಆಗಿನ ಶಾಸಕ ಪ್ರಸನ್ನ ಕುಮಾರ್ ಮತ್ತು ಸಚಿವ ಆರ್. ಅಶೋಕ್ ಅವರನ್ನು ಸಂಪರ್ಕಿಸಿದೆ. ಅವರು ಯಾವುದೇ ಭಯವಿಲ್ಲದೆ ರಸ್ತೆ ನಿರ್ಮಾಣ ಕಾರ್ಯ ಮುಂದುವರಿಸಲು ಬೆಂಬಲ ಸೂಚಿಸಿದರು~.`ನಾವು ರಸ್ತೆ ಕೆಲಸ ಆರಂಭಿಸುವಾಗ ಅಂದಾಜು ವೆಚ್ಚ ಸುಮಾರು 1.5 ಕೋಟಿಯಷ್ಟಾಗಿತ್ತು. ಆದರೆ ಮುಗಿಯುವಷ್ಟರಲ್ಲಿ 6 ಕೋಟಿ ರೂಪಾಯಿಗೆ ಏರಿತ್ತು~.`ನಾನು ಈ ರಸ್ತೆಗೆ ಭಾರತದ ಮಾಜಿ ರಾಷ್ಟ್ರಪತಿ ದಿ. ಎಸ್. ರಾಧಾಕೃಷ್ಣನ್ ಅವರ ಹೆಸರು ಇಡಬೇಕೆಂದುಕೊಂಡಿದ್ದೆ. ಕಾರಣ ಅವರು ಒಬ್ಬ ಶಿಕ್ಷಕರಾಗಿದ್ದರು. ಅಲ್ಲದೆ ನಾನೂ ಒಂದು ಶಿಕ್ಷಣ ಸಂಸ್ಥೆ ನಡೆಸುತ್ತಿರುವವನು. ಅವರ ಹೆಸರು ಈ ರಸ್ತೆಗೆ ಹೆಚ್ಚು ಸೂಕ್ತ ಎಂಬುದು ನನ್ನ  ಅಭಿಮತವಾಗಿತ್ತು. ಆದರೆ ಕೆಲವರು ಇದಕ್ಕೆ ರಾಜಕಾರಣಿಗಳ ಮತ್ತು ಸಿನೆಮಾ ತಾರೆಯರ ಹೆಸರು ಇಡಬೇಕೆಂದು ಒತ್ತಾಯಿಸಿದರು. ಆದರೂ ನಾನು ಪಟ್ಟು ಬಿಡಲಿಲ್ಲ~.ಕೊನೆಗೂ ಡಾ. ರಾಧಾಕೃಷ್ಣನ್ ಹೆಸರು ಹೊತ್ತ ಈ ರಸ್ತೆಯನ್ನು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು. ಈಗಲೂ ಈ ರಸ್ತೆಯ ಸಂಪೂರ್ಣ ಹೊಣೆಯನ್ನು ಆಚಾರ್ಯ ಶಿಕ್ಷಣ ಸಂಸ್ಥೆಯೇ ನೋಡಿಕೊಳ್ಳುತ್ತಿದೆ. ಇಕ್ಕೆಲಗಳಲ್ಲಿ ಆಳವಡಿಸಿದ ವಿದ್ಯುತ್ ದೀಪದ ನಿರ್ವಹಣೆ, ಅದಕ್ಕೆ ತಗಲುವ ವೆಚ್ಚ ಭರಿಸುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ಗಿಡ ನೆಟ್ಟು ಬೆಳೆಸುತ್ತಿದೆ, ಮೋರಿಯ ನಿರ್ವಹಣೆ ಮಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry