ಭಾನುವಾರ, ಏಪ್ರಿಲ್ 11, 2021
32 °C

ಸರ್ಕಾರಿ ವಕೀಲರಾಗಿ ಲಲಿತ್ ನೇಮಕ: ಕೇಂದ್ರಕ್ಕೆ ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ಮತ್ತು ಇತರರನ್ನು ಒಳಗೊಂಡ 2 ಜಿ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆ ನಡೆಸಲು ಹಿರಿಯ ವಕೀಲ ಯು.ಯು. ಲಲಿತ್ ಅವರನ್ನು ವಿಶೇಷ ಸರ್ಕಾರಿ ವಕೀಲರಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಸೋಮವಾರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಿಬಿಐಗೆ ಕೆಲಸ ಮಾಡುತ್ತಿರುವ ವಕೀಲರ ಸಮಿತಿಯಿಂದ ತಮ್ಮ ಪ್ರಾಸಿಕ್ಯೂಟರ್‌ಗಳ ತಂಡವನ್ನು ಆಯ್ಕೆ ಮಾಡಿಕೊಳ್ಳಲು ಲಲಿತ್ ಅವರು ಸ್ವತಂತ್ರರಾಗಿರುತ್ತಾರೆ . ವಿಚಾರಣೆಯು ನಿತ್ಯ ನಡೆಯಬೇಕು. ಯಾವುದೇ ಕಾರಣಕ್ಕೆ ವಿಚಾರಣೆ ಮುಂದೂಡಬಾರದು ಎಂದು ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನು ಒಳಗೊಂಡ ಪೀಠವು ಸ್ಪಷ್ಟಪಡಿಸಿದೆ. ಪ್ರಕರಣದಲ್ಲಿ ಪೂರಕ ಆರೋಪ ಪಟ್ಟಿಯನ್ನು ಈ ತಿಂಗಳ 24ರ ವೇಳೆಗೆ ಸಲ್ಲಿಸುವುದಾಗಿ ಸಿಬಿಐ ಹೇಳಿದೆ. ವಿಚಾರಣೆಯಲ್ಲಿ ಲಲಿತ್ ಅವರಿಗೆ ನೆರವು ನೀಡಲು ಸಿಬಿಐ ತನ್ನ ವಕೀಲರನ್ನು ನೇಮಕ ಮಾಡಬಹುದು ಎಂದೂ ಕೋರ್ಟ್ ತಿಳಿಸಿದೆ. ಈ ಮೊದಲು ಕೇಂದ್ರವು ವಿಶೇಷ ಸರ್ಕಾರಿ ವಕೀಲರಾಗಿ ಲಲಿತ್ ಅವರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈ ಕಾರ್ಯಕ್ಕೆ ಬೇಕಾದ ಅರ್ಹತೆ ಲಲಿತ್ ಅವರಿಗಿಲ್ಲ ಎಂದೂ ಕೇಂದ್ರ ಆಕ್ಷೇಪಿಸಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತಕರಾರು ಅಥವಾ ಅರ್ಜಿಯನ್ನು ಸುಪ್ರೀಂಕೋರ್ಟ್ ಹೊರತು ಪಡಿಸಿ ಇತರ ಕೋರ್ಟ್‌ಗಳು ಪರಿಗಣಿಸಬಾರದು ಎಂದೂ ಪೀಠ ಹೇಳಿದೆ. ಸಿಬಿಐ ಪರ ಹಾಜರಿದ್ದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್ ಅವರು, ಸಿಬಿಐ ತನ್ನ ಪೂರಕ ಆರೋಪ ಪಟ್ಟಿಯನ್ನು ಈ ತಿಂಗಳ 24ರ ವೇಳೆಗೆ ಸಲ್ಲಿಸುವುದು ಎಂದರು. ಐಪಿಸಿ ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯಡಿ ಸಿಬಿಐ ರಾಜಾ ಮತ್ತು ಇತರ ಎಂಟು ಮಂದಿ ಹಾಗೂ ಮೂರು ಟೆಲಿಕಾಂ ಕಂಪೆನಿಗಳ ವಿರುದ್ಧ  ತನ್ನ ಮೊದಲ ಆರೋಪ ಪಟ್ಟಿಯನ್ನು ಏ. 2ರಂದು ಸಲ್ಲಿಸಿತ್ತು.ಅಕ್ರಮ ಹಣ ಹೂಡಿಕೆ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿರುವುದರಿಂದ ಲಲಿತ್ ಅವರು ರಾಜ್ಯ ಅಥವಾ ಕೇಂದ್ರ ಸರ್ಕಾರದಡಿ ಕನಿಷ್ಠ ಏಳು ವರ್ಷಗಳವರೆಗೆ ಕೆಲಸ ಮಾಡಿದ್ದರೆ ವಿಶೇಷ ಸರ್ಕಾರಿ ವಕೀಲರಾಗಿ ನೇಮಕಗೊಳ್ಳುವ ಅರ್ಹತೆ ಪಡೆಯುತ್ತಿದ್ದರು. ಆದರೆ ಅವರು ಈ ಕೆಲಸ ಮಾಡಿಲ್ಲ ಎಂದು ಕೇಂದ್ರ ಆಕ್ಷೇಪಿಸಿತ್ತು. ಲಲಿತ್ ಅವರು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಕೀಲರುಗಳ ಸಮಿತಿಯಲ್ಲಿ ಅನುಕ್ರಮವಾಗಿ 15 ವರ್ಷ ಮತ್ತು ಐದು ವರ್ಷ ಕೆಲಸ ಮಾಡಿದ್ದು ಈ ಸ್ಥಾನಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ವೇಣುಗೋಪಾಲ್ ವಾದಿಸಿದ್ದರು.ಆದರೆ  ಸಮಿತಿಯಲ್ಲಿದ್ದರೆ ಸಾಲದು, ಸರ್ಕಾರದ ಮಾನ್ಯತೆ ಪಡೆದ ವಕೀಲರ ಮಂಡಳಿಯಲ್ಲಿ ಏಳು ವರ್ಷ ಸೇವೆ ಸಲ್ಲಿಸಿರಬೇಕು ಎಂದು ಅಟಾರ್ನಿ ಜನರಲ್ ವಹನ್ವತಿ ಹೇಳಿದ್ದರು.ಕಾಯಿದೆಯಲ್ಲಿ ‘ಮಾನ್ಯತೆ ಪಡೆದ ವಕೀಲರ ಮಂಡಳಿ’ ಎಂಬ ಪದವನ್ನು ಹೇಳಿಲ್ಲ. ಆಕ್ಷೇಪವು ತಾಂತ್ರಿಕ ಸ್ವರೂಪದ್ದಾಗಿದ್ದು  ‘ತರ್ಕಬದ್ಧ’ ವಿವರಣೆ ನೀಡಬಹುದಾಗಿದೆ ಎಂದು ಕೋರ್ಟ್ ಹೇಳಿತ್ತು.

2ಜಿ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆಗೆಂದೇ ನೇಮಿಸಲಾದ ವಿಶೇಷ ಕೋರ್ಟ್‌ಗೆ ನೆರವಾಗಲು ಲಲಿತ್ ಅವರನ್ನು ವಿಶೇಷ ಸರ್ಕಾರಿ ವಕೀಲರಾಗಿ ನೇಮಿಸುವುದಾಗಿ ಸಿಬಿಐ ಏ. 1ರಂದು ಹೇಳಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.