ಸರ್ಕಾರಿ ವಾಹಿನಿ ಅಗತ್ಯವೇ?

7

ಸರ್ಕಾರಿ ವಾಹಿನಿ ಅಗತ್ಯವೇ?

Published:
Updated:

ರಾಜ್ಯ ವಿಧಾನ ಮಂಡಲದ ಕಲಾಪಗಳನ್ನು ಪ್ರಸಾರ ಮಾಡಲು ಸರ್ಕಾರಿ ವಾಹಿನಿ ಆರಂಭಿಸಲು ಸ್ಪೀಕರ್ ಕೆ.ಜಿ. ಬೋಪಯ್ಯ ಪ್ರಸ್ತಾಪಿಸಿದ ಸಂದರ್ಭವೇ ಅವರ ಕಾಳಜಿಯನ್ನೇ ಅನುಮಾನಿಸುವಂತೆ ಮಾಡಿದೆ.

 

ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಸಚಿವರು ರಾಜೀನಾಮೆ ನೀಡಿದ ಬೆನ್ನಲ್ಲೇ ಸ್ಪೀಕರ್ ಅವರು, ನಾಲ್ಕೈದು ವರ್ಷಗಳ ಹಿಂದಿನ ಲೋಕಸಭಾ ಸಚಿವಾಲಯದ ಪ್ರಸ್ತಾವವನ್ನು ಜಾರಿಗೆ ತರುವ ಮಾತುಗಳನ್ನು ಆಡುತ್ತಿರುವುದು ಕಾಕತಾಳೀಯವಂತೂ ಅಲ್ಲ.

 

ಈ ಮೊದಲು ಸರ್ಕಾರಿ ವಾಹಿನಿ ಆರಂಭಿಸುವ ಕುರಿತು ಕನಿಷ್ಠ ಆಸಕ್ತಿಯನ್ನೂ ತೋರದ ಸ್ಪೀಕರ್ ಅವರು ಈಗ ಅತ್ಯುತ್ಸಾಹ ತೋರುತ್ತಿರುವುದಕ್ಕೆ ಕಾರಣವೇನು ಎಂಬುದಕ್ಕೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ.

 

ಸಚಿವರು ವಿಧಾನಸಭೆಯಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯಾವಳಿ ವೀಕ್ಷಿಸುತ್ತಿದ್ದ ದೃಶ್ಯಗಳನ್ನು ಜನರ ಗಮನಕ್ಕೆ ತರುವ ಮೂಲಕ ಖಾಸಗಿ ಟಿವಿ ವಾಹಿನಿಗಳು ಸರ್ಕಾರ ಮತ್ತು ಬಿಜೆಪಿಯ ನೈತಿಕತೆಯನ್ನೇ ಹರಾಜು ಹಾಕಿದ್ದವು. ಖಾಸಗಿ ವಾಹಿನಿಗಳಿಂದಾಗಿ ಸರ್ಕಾರ ತೀವ್ರ ಮುಜುಗರ ಎದುರಿಸಬೇಕಾಯಿತು.ಸಭೆಯ ಕಲಾಪಗಳ ಪ್ರಸಾರಕ್ಕೆ ಸರ್ಕಾರಿ ವಾಹಿನಿ ಇದ್ದಿದ್ದರೆ ಇಂತಹ ಸಂದರ್ಭ ಬರುತ್ತಿರಲಿಲ್ಲ ಎಂದು ಸ್ಪೀಕರ್ ಅವರು ಭಾವಿಸಿರುವಂತೆ ತೋರುತ್ತದೆ. ಈ ಹಿನ್ನೆಲೆಯಲ್ಲಿ ಅವರು ಸರ್ಕಾರಿ ವಾಹಿನಿ ಆರಂಭಕ್ಕೆ ಆಸಕ್ತಿ ತೋರಿಸುತ್ತಿದಾರೆ ಎಂದೇ ಈ ಬೆಳವಣಿಗೆಯನ್ನು ಅರ್ಥೈಸಬೇಕಾಗುತ್ತದೆ.ವಿಧಾನ ಮಂಡಲದ ಕಲಾಪಗಳ ಪ್ರಸಾರಕ್ಕೆ ಸರ್ಕಾರಿ ವಾಹಿನಿ ಅಗತ್ಯ ಇದೆಯೇ ಎಂಬುದು ಚರ್ಚೆಗೆ ಒಳಗಾಗಬೇಕಾದ ವಿಷಯ. ಕಲಾಪಗಳ ಪ್ರಸಾರವನ್ನು ಈಗ ಖಾಸಗಿ ವಾಹಿನಿಗಳು ಸಮರ್ಥವಾಗಿ ನಿಭಾಯಿಸುತ್ತಿರುವಾಗ ಸರ್ಕಾರ ತನ್ನದೇ ವಾಹಿನಿ ಆರಂಭಿಸುವ ಅಗತ್ಯ ಇಲ್ಲ.ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳ ಪ್ರಸಾರಕ್ಕೆ ಸರ್ಕಾರಿ ವಾಹಿನಿಗೆ ಮಾತ್ರ ಅವಕಾಶವಿದೆ. ಎಲ್ಲಾ ರಾಜ್ಯಗಳ ಹಾಗೂ ವಿದೇಶಿ ಖಾಸಗಿ ವಾಹಿನಿಗಳ ದೊಡ್ಡ ಸಂಖ್ಯೆಯ ಸಿಬ್ಬಂದಿ ಲೋಕಸಭೆ ಮತ್ತು ರಾಜ್ಯ ಸಭೆಗಳಿಗೆ ಹೋಗಿ ಕಲಾಪ ಪ್ರಸಾರ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯ.

 

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನದೇ ವಾಹಿನಿಯ ಮೂಲಕ ಈ ಕಾರ್ಯವನ್ನು ನಿರ್ವಹಿಸುತ್ತಿದೆ. ವಿಧಾನ ಮಂಡಲದ ಕಲಾಪಗಳ ಪ್ರಸಾರಕ್ಕೆ ಸರ್ಕಾರಿ ವಾಹಿನಿ ಆರಂಭಿಸಿದರೂ `ಖಾಸಗಿ ವಾಹಿನಿಗಳಿಗೂ ಅವಕಾಶ ಕೊಡುತ್ತೇವೆ~ ಎಂಬ ಸ್ಪೀಕರ್ ಅವರ ಹೇಳಿಕೆಯನ್ನು ನಂಬಬಹುದೇ? ಇತ್ತೀಚಿನ ವರ್ಷಗಳಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುವ ಅವಧಿ ಕಡಿಮೆಯಾಗಿದೆ.  ಉಳಿದ ಅವಧಿಯಲ್ಲಿ ಈ ವಾಹಿನಿಯ ಸಿಬ್ಬಂದಿಗೆ ಕೆಲಸವೇ ಇರುವುದಿಲ್ಲ.  ವಾಹಿನಿ ನಿರ್ವಹಣೆಗೆ ನಿರಂತರವಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಪ್ರತ್ಯೇಕ ವಾಹಿನಿ ಆರಂಭಿಸಲು 25 ಕೋಟಿ ರೂಪಾಯಿಗಳನ್ನು ವೆಚ್ಚಮಾಡುವುದು ಸಮರ್ಥನೀಯವೇ?ಸ್ಪೀಕರ್ ಅವರು ಸರ್ಕಾರಿ ವಾಹಿನಿ ಆರಂಭಿಸುವ ಪ್ರಸ್ತಾಪವನ್ನು ಪರಿಶೀಲಿಸುವುದಕ್ಕಿಂತ ಅರ್ಥಪೂರ್ಣವಾಗಿ ಕಲಾಪ ನಡೆಯುವಂತೆ ನೋಡಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ಏನೇ ಇದ್ದರೂ ವಿಧಾನಮಂಡಲ ಕಲಾಪ ಪ್ರಸಾರಕ್ಕೆ ಮಾಧ್ಯಮಗಳಿಗೆ ಇರುವ ಅವಕಾಶವನ್ನು ಮೊಟಕು ಮಾಡಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry