ಶನಿವಾರ, ನವೆಂಬರ್ 23, 2019
18 °C
ಸ್ವಂತ ಕಟ್ಟಡಗಳಿಲ್ಲದ ಏಳು ಹೊಸ ಕಾಲೇಜುಗಳು

ಸರ್ಕಾರಿ ವೈದ್ಯ ಕಾಲೇಜುಗಳಿಗೆ ಮಾನ್ಯತೆ ಕಷ್ಟ!

Published:
Updated:

ಬೆಂಗಳೂರು: ಸ್ವಂತ ಕಟ್ಟಡಗಳಿಲ್ಲದ ರಾಜ್ಯದ ಏಳು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ  ಈ ವರ್ಷ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಮಾನ್ಯತೆ ನೀಡುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.ತುಮಕೂರು, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಗದಗ, ಚಾಮರಾಜನಗರ, ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ತಲಾ 150 ಸೀಟುಗಳಿಗೆ ಅನುಮತಿ ನೀಡುವಂತೆ ಕೋರಿ ಎಂಸಿಐಗೆ ಪತ್ರ ಬರೆದಿದೆ. ಆದರೆ, ಕಾಲೇಜುಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಇನ್ನೂ ಕಲ್ಪಿಸಿಲ್ಲ.ಎಂಸಿಐನ ಷರತ್ತುಗಳ ಪ್ರಕಾರ ಸ್ವಂತ ಕಟ್ಟಡ ಇದ್ದರೆ ಮಾತ್ರ ಕಾಲೇಜುಗಳಿಗೆ ಮಾನ್ಯತೆ ದೊರೆಯಲಿದೆ. ಆದರೆ, ಹೊಸದಾಗಿ ಆರಂಭಿಸಿರುವ ಏಳೂ ಕಾಲೇಜುಗಳಿಗೆ ಸ್ವಂತ ಕಟ್ಟಡಗಳು ಇಲ್ಲ. ಹೀಗಾಗಿ 2013-14ನೇ ಸಾಲಿನಲ್ಲಿ ಪ್ರವೇಶಕ್ಕೆ ಅನುಮತಿ ದೊರೆಯುವ ಸಾಧ್ಯತೆ ಕಡಿಮೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.ಸಡಿಲಿಕೆಗೆ ಮನವಿ: ಈ ಏಳೂ ಸರ್ಕಾರಿ ಕಾಲೇಜುಗಳಾಗಿದ್ದು, ಸ್ವಂತ ಕಟ್ಟಡಗಳನ್ನು ಒದಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷದ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಆದ್ದರಿಂದ ಸ್ವಂತ ಕಟ್ಟಡ ಹೊಂದಿರಬೇಕು ಎಂಬ ಷರತ್ತನ್ನು ಒಂದು ವರ್ಷದ ಮಟ್ಟಿಗೆ ಸಡಿಲಿಸುವಂತೆ ಎಂಸಿಐಗೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ.ಕೆ.ಎಚ್. ಗೋವಿಂದರಾಜ್, ನಿರ್ದೇಶಕ ಡಾ.ಜಿ.ಎಸ್. ವೆಂಕಟೇಶ್ ಅವರು ನವದೆಹಲಿಯಲ್ಲಿ ಎಂಸಿಐನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಹೊಸ ಕಾಲೇಜುಗಳನ್ನು ಪ್ರಾರಂಭಿಸಲು ಮಾಡಿರುವ ಸಿದ್ಧತೆ, ತಾತ್ಕಾಲಿಕ ಕಟ್ಟಡಗಳ ವ್ಯವಸ್ಥೆ, ಸ್ವಂತ ಕಟ್ಟಡ ನಿರ್ಮಾಣಕ್ಕೆ ಗುರುತಿಸಿರುವ ಜಮೀನು ಇತ್ಯಾದಿ ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, 2013-14ನೇ ಸಾಲಿನಿಂದಲೇ ಪ್ರವೇಶಕ್ಕೆ ಅನುಮತಿ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ವಿವರಿಸಿದರು.`ಷರತ್ತುಗಳನ್ನು ಎಂಸಿಐ ಸಡಿಲಿಸುವ ಸಾಧ್ಯತೆ ಕಡಿಮೆ. ಆದರೂ, ಸರ್ಕಾರದ ವತಿಯಿಂದ ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ಈ ವರ್ಷವೇ ಪ್ರವೇಶಕ್ಕೆ ಅನುಮತಿ ನೀಡಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟುಗಳು ಲಭ್ಯವಾಗಲಿವೆ. ಅನುಮತಿ ದೊರೆಯದೆ ಇದ್ದರೆ, 2014-15ನೇ ಸಾಲಿನ ವೇಳೆಗೆ ಸ್ವಂತ ಕಟ್ಟಡಗಳ ವ್ಯವಸ್ಥೆ ಮಾಡಲಾಗುವುದು' ಎಂದರು.ಈ ಏಳು ಕಾಲೇಜುಗಳಿಂದ ಒಟ್ಟು 1,050 ಸೀಟುಗಳು ಲಭ್ಯವಾಗಲಿವೆ. ಆದರೆ ಆರಂಭದಲ್ಲಿ ತಲಾ 100 ಸೀಟುಗಳಿಗೆ ಒಪ್ಪಿಗೆ ನೀಡಿದರೆ ಒಟ್ಟು 700 ಸೀಟುಗಳು ದೊರೆಯಲಿವೆ.ಎಂಸಿಐ ತಂಡ ಭೇಟಿ: ಹೊಸ ಕಾಲೇಜುಗಳ ಪ್ರಾರಂಭಕ್ಕೆ ಸರ್ಕಾರ ಮಾಡಿರುವ ಸಿದ್ಧತೆಗಳ ಬಗ್ಗೆ ಎಂಸಿಐ ತಂಡ ಇದೇ 15ರ ನಂತರ ಸ್ಥಳ ಪರಿಶೀಲನೆ ನಡೆಸಲಿದೆ. ಮಡಿಕೇರಿ, ಚಾಮರಾಜನಗರ, ಚಿತ್ರದುರ್ಗದಲ್ಲಿ ಸರ್ಕಾರಿ ಖಾಲಿ ಕಟ್ಟಡಗಳನ್ನು ಗುರುತಿಸಲಾಗಿದೆ.ಉಳಿದ ಕಡೆ ಖಾಸಗಿ ಕಟ್ಟಡಗಳನ್ನು ಗುರುತಿಸಲಾಗಿದೆ. ತಂಡವು ಅವುಗಳ ಪರಿಶೀಲನೆ ನಡೆಸಿ ಒಪ್ಪಿಗೆ ಸೂಚಿಸಿದರಷ್ಟೇ ಹೊಸ ಕಾಲೇಜುಗಳಲ್ಲಿ ದಾಖಲಾತಿ ನಡೆಯಲಿದೆ.ರೂ35 ಕೋಟಿ ಬಿಡುಗಡೆ: ಹೊಸ ಕಾಲೇಜುಗಳ ಆರಂಭಿಕ ಕೆಲಸಗಳಿಗೆ ಈಗಾಗಲೇ ರೂ35 ಕೋಟಿ ಬಿಡುಗಡೆ ಮಾಡಲಾಗಿದೆ. ಕೊಪ್ಪಳದಲ್ಲಿ ಕಾಲೇಜಿಗೆ ಅಗತ್ಯ  ಜಮೀನು ಖರೀದಿಸಲು ರೂ 7.5 ಕೋಟಿ ಬಿಡುಗಡೆಯಾಗಿದೆ. ಬಹುತೇಕ ಕಡೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಕಟ್ಟಡಗಳ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಲಾಗುತ್ತಿದೆ. ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.ನಿರ್ದೇಶಕರ ನೇಮಕ: ಈ ಏಳೂ ಕಾಲೇಜುಗಳಿಗೆ ನಿರ್ದೇಶಕರ ನೇಮಕಕ್ಕೆ ಮಾ.22ರಂದು ಸಂದರ್ಶನ ನಿಗದಿಯಾಗಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಕಾರಣ ಕೊನೆ ಗಳಿಗೆಯಲ್ಲಿ ಸಂದರ್ಶನ ಮುಂದೂಡಲಾಯಿತು. ಚುನಾವಣೆ ಮುಗಿದ ನಂತರ ನಿರ್ದೇಶಕರ ನೇಮಕ ಪ್ರಕ್ರಿಯೆ ಪುನಃ ಆರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.ಹೊಸ ಕಾಲೇಜುಗಳಿಗೆ ಎಂಸಿಐ ಈ ವರ್ಷ ಮಾನ್ಯತೆ ನೀಡದೆ ಇದ್ದರೂ, ನಿರ್ದೇಶಕರ ನೇಮಕವಾಗಲಿದೆ. ತ್ವರಿತವಾಗಿ ಕಟ್ಟಡಗಳ ನಿರ್ಮಾಣ, ಕಾಲೇಜುಗಳನ್ನು ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯಗಳ ವ್ಯವಸ್ಥೆ ಇತ್ಯಾದಿಗಳ ಮೇಲ್ವಿಚಾರಣೆ ಹೊಣೆಯನ್ನು ನಿರ್ದೇಶಕರಿಗೆ ವಹಿಸಲು ಉದ್ದೇಶಿಸಲಾಗಿದೆ.ಬೋಧಕ- ಬೋಧಕೇತರ ಸಿಬ್ಬಂದಿ ಹುದ್ದೆಗಳನ್ನು ಸೃಷ್ಟಿಸಲು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಎಂಸಿಐ ಈ ವರ್ಷವೇ ಮಾನ್ಯತೆ ನೀಡಿದರೆ, ಹಣಕಾಸು ಇಲಾಖೆ ತ್ವರಿತವಾಗಿ ಹುದ್ದೆಗಳನ್ನು ಮಂಜೂರು ಮಾಡಲಿದೆ. ಈ ವರ್ಷ ಮಾನ್ಯತೆ ನೀಡದಿದ್ದರೆ, ಹುದ್ದೆ ಭರ್ತಿ ವಿಳಂಬವಾಗಲಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)