ಶುಕ್ರವಾರ, ಅಕ್ಟೋಬರ್ 18, 2019
28 °C

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ: 2 ತಿಂಗಳ ಗಡುವು ನೀಡಿದ ಹೈಕೋರ್ಟ್

Published:
Updated:

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇನ್ನು ಎರಡು ತಿಂಗಳಲ್ಲಿ ಕಡ್ಡಾಯವಾಗಿ ಮೂಲ ಸೌಕರ್ಯ ಒದಗಿಸಬೇಕು ಎಂದು  ಹೈಕೋರ್ಟ್ ಸರ್ಕಾರಕ್ಕೆ ಮಂಗಳವಾರ ನಿರ್ದೇಶಿಸಿದೆ.ಆದುದರಿಂದ, ಮಾರ್ಚ್ 12ರ ಒಳಗೆ ರಾಜ್ಯದಲ್ಲಿನ 46,400 ಪ್ರಾಥಮಿಕ ಶಾಲೆಗಳ ಪೈಕಿ 41,556 ಶಾಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ, 989 ಬಾಲಕರ ಮತ್ತು 1,818 ಬಾಲಕಿಯರ ಶಾಲೆಗಳಿಗೆ ಶೌಚಾಲಯ ನಿರ್ಮಾಣ ಮಾಡುವ ಹಾಗೂ 4,278 ಪ್ರೌಢಶಾಲೆಗಳ ಪೈಕಿ 409 ಶಾಲೆಗಳಿಗೆ ಶೌಚಾಲಯ ನಿರ್ಮಿಸುವ ಜವಾಬ್ದಾರಿ ಈಗ ಸರ್ಕಾರದ ಮೇಲಿದೆ.ಇವೆಲ್ಲ ಮೂಲ ಸೌಕರ್ಯಗಳನ್ನು ಕಳೆದ ಡಿಸೆಂಬರ್ ಅಂತ್ಯದ ಒಳಗೇ ಒದಗಿಸುವುದಾಗಿ ಈ ಹಿಂದೆ ಸರ್ಕಾರ ಹೈಕೋರ್ಟ್ ಮುಂದೆ ವಾಗ್ದಾನ ಮಾಡಿತ್ತು. ಆದರೆ ತನ್ನ ಮಾತನ್ನು ಉಳಿಸಿಕೊಳ್ಳದೇ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾದ ನಂತರ ಈಗ ಎರಡು ತಿಂಗಳ ಕಾಲಾವಕಾಶ ಕೋರಿ ಶಿಕ್ಷಣ ಇಲಾಖೆಯ (ಪ್ರಾಥಮಿಕ ಮತ್ತು ಮಾಧ್ಯಮಿಕ) ಕಾರ್ಯದರ್ಶಿ ಕುಮಾರ ನಾಯ್ಕ ಅವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸಲು ಕೋರಿ ವಕೀಲ ಎ.ವಿ.ಅಮರನಾಥನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.ಸಂವಿಧಾನದ ಪ್ರಕಾರ 6ರಿಂದ 14 ವರ್ಷದ ವಯೋಮಾನದವರಿಗೆ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಈ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಆದರೆ ಶಾಲೆಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ ಎನ್ನುವುದು ಅರ್ಜಿದಾರ ವಕೀಲರ ಆರೋಪ.ಕೊನೆಗೂ ಎಚ್ಚೆತ್ತ ಇಲಾಖೆ: ಎಷ್ಟರಮಟ್ಟಿಗೆ ಸೌಕರ್ಯ ಕಲ್ಪಿಸಲಾಗಿದೆ ಎಂಬ ಬಗ್ಗೆ ಕೋರ್ಟ್ ನಿರ್ದೇಶನದ ಹೊರತಾಗಿಯೂ ಇದುವರೆಗೆ ಪ್ರಮಾಣ ಪತ್ರ ಸಲ್ಲಿಸದೆ ಕಳೆದ ಬಾರಿ ತರಾಟೆಗೆ ಒಳಗಾಗಿದ್ದ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳು ಕೊನೆಗೂ ಎಚ್ಚೆತ್ತುಕೊಂಡು ಮಂಗಳವಾರ ಅದನ್ನು ಸಲ್ಲಿಸಿದರು. ಅದರಲ್ಲಿ ಇಲ್ಲಿಯವರೆಗೆ ಒದಗಿಸಿರುವ ಮೂಲ ಸೌಕರ್ಯಗಳ ಕುರಿತು ಜಿಲ್ಲಾವಾರು ಅಂಕಿ ಅಂಶಗಳನ್ನು ಕೋರ್ಟ್ ಮುಂದಿಟ್ಟಿದ್ದಾರೆ.

ಪ್ರಮಾಣ ಪತ್ರದಂತೆ ನಡೆದುಕೊಳ್ಳುವಂತೆ ತಿಳಿಸಿದ ಪೀಠ, ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿತು.

ಕಾಯ್ದಿರಿಸಿದ ತೀರ್ಪು: ವಕೀಲ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ 1 ಮತ್ತು 3ನೇ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ರದ್ದತಿಗೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.ಮಂಗಳವಾರ ಸುದೀರ್ಘ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರು ತೀರ್ಪನ್ನು ಕಾಯ್ದಿರಿಸಿದರು.ನಗರದ ರಾಚೇನಹಳ್ಳಿ, ಎಚ್‌ಎಸ್‌ಆರ್ ಬಡಾವಣೆ, ನಾಗರಬಾವಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಇರುವ ಜಮೀನುಗಳನ್ನು ಯಡಿಯೂರಪ್ಪನವರು ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ (ಡಿನೋಟಿಫೈ ಮಾಡಿರುವ) ಆರೋಪ ಇದಾಗಿದೆ.

Post Comments (+)