ಸರ್ಕಾರಿ ಶಾಲೆಗಳ ಭೂ ನೋಂದಣಿ: 19ರಂದು ಸಭೆ

7
ಮಡಿಕೇರಿ ತಾಲ್ಲೂಕು ಪಂಚಾಯಿತಿ ತೀರ್ಮಾನ

ಸರ್ಕಾರಿ ಶಾಲೆಗಳ ಭೂ ನೋಂದಣಿ: 19ರಂದು ಸಭೆ

Published:
Updated:
ಸರ್ಕಾರಿ ಶಾಲೆಗಳ ಭೂ ನೋಂದಣಿ: 19ರಂದು ಸಭೆ

ಮಡಿಕೇರಿ: ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳ ಜಾಗದ ದಾಖಲಾತಿಗಳನ್ನು ಪರಿಶೀಲಿಸಲು ಹಾಗೂ ಶಾಲೆಯ ಹೆಸರಿನಲ್ಲಿ ಇಲ್ಲದ ಭೂಮಿಯ ದಾಖಲಾತಿಯನ್ನು ಶಾಲಾ ಮುಖ್ಯ ಶಿಕ್ಷಕರ ಆಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಡಿ.19 ರಂದು ಸಭೆ ನಡೆಸಲು ಮಡಿಕೇರಿ ತಾಲ್ಲೂಕು ಪಂಚಾಯಿತಿ ತೀರ್ಮಾನಿಸಿದೆ.ನಗರದ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೀನಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಸದಸ್ಯ ನೆರವಂಡ ಉಮೇಶ್ ಮಾತನಾಡಿ, ಶಾಲೆ ತೆರೆಯಲು ಹಲವೆಡೆ ದಾನಿಗಳು ಸ್ವಯಂ ಪ್ರೇರಿತರಾಗಿ ಸ್ವಂತ ಜಾಗವನ್ನು ನೀಡಿದ್ದಾರೆ. ಆದರೆ ಈ ಜಾಗದ ದಾಖಲಾತಿ ಗಳಲ್ಲಿ ಶಾಲೆಯ ಹೆಸರಾಗಲಿ ಅಥವಾ ಶಿಕ್ಷಣ ಇಲಾಖೆಯ ಹೆಸರಾಗಲಿ ಇದುವರೆಗೆ ನೋಂದಣಿಯಾಗಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ಸೂಚಿಸಿದ್ದರೂ, ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.ಶಾಲಾ ದಾಖಲಾತಿಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಈ ಹಿಂದೆ ನಡೆದ ಹಲವು ಸಭೆಗಳಲ್ಲಿ ನಿರ್ಣಯಿಸಿದ್ದರೂ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತ್ರ ಕೆಲಸ ಮಾಡಲು ಇಚ್ಛಾಶಕ್ಷಿ ಇಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರನ್ ಮಾತನಾಡಿ, ಶಾಲಾ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ದಾನವಾಗಿ ನೀಡಿರುವಂತಹ ತಾಲ್ಲೂಕಿನ ಎಲ್ಲಾ ಶಾಲೆಗಳ ದಾಖಲೆ ಯನ್ನು ವರ್ಗಾವಣೆ ಮಾಡಿಸುವ ನಿಟ್ಟಿನಲ್ಲಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ರುವುದಾಗಿ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ನೆರವಂಡ ಉಮೇಶ್, ಹಲವು ಸಭೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಆದರೆ ಕೆಲಸ ಮಾತ್ರ ಆಗುತ್ತಿಲ್ಲ. ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರನ್ನೊಳ ಗೊಂಡಂತೆ ಸಭೆ ಕರೆದು ಚರ್ಚಿಸಬೇಕೆಂದು ಅವರು ಒತ್ತಾಯಿಸಿದರು.ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜು ಮಾತನಾಡಿ, ಡಿ.19 ರಂದು ಸಭೆ ಕರೆಯಲಾಗುವುದು. ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಆಯಾ ಶಾಲೆಯ ದಾಖಲೆಗಳ ಸಮೇತ ಹಾಜರಾಗಬೇಕೆಂದು ಸೂಚಿಸಿದರು.ಸದಸ್ಯ ಸಾಬು ತಿಮ್ಮಯ್ಯ ಮಾತನಾಡಿ, ಶಾಲೆಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಹಲವು ಬಾರಿ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸದಸ್ಯೆ ಕವಿತಾ ಪ್ರಭಾಕರ್ ಮಾತನಾಡಿ, ಕರಿಕೆ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರೆತೆ ಇದ್ದು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದ್ದು, ನಿಯೋಜನೆ ಮೇರೆಗೆ ಶಿಕ್ಷಕರು ವಾರಕ್ಕೆ 3 ದಿನ ಬಂದು ಪಾಠ ಮಾಡುತ್ತಿದ್ದಾರೆ. ಇದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಖಾಯಂ ಶಿಕ್ಷಕರನ್ನು ನೇಮಕ ಮಾಡು ವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒತ್ತಾಯಿಸಿದರು.ಸದಸ್ಯ ನೆರವಂಡ ಉಮೇಶ್ ಮಾತನಾಡಿ, ಎಮ್ಮೆಮಾಡು ಸೇರಿದಂತೆ ತಾಲ್ಲೂಕಿನ  ವಿವಿಧ ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಬೇಕೆಂದರು.ಸದಸ್ಯ ಎಂ. ಸುರೇಶ್ ಮಾತನಾಡಿ, ಕರಡ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಶಿಕ್ಷಕಿಯನ್ನು ಈ ಹಿಂದಿನ ಡಿಡಿಪಿಐ ರಾಮಸ್ವಾಮಿ ಅವರು ಸಣ್ಣ ತಪ್ಪಿಗಾಗಿ ಅಮಾನತ್ತು ಮಾಡಿದ್ದಾರೆ. ಇದರಿಂದಾಗಿ ಶಿಕ್ಷಕಿ ತೊಂದರೆ ಪಡು ವಂತಾಗಿದ್ದು, ಈ ಬಗ್ಗೆ ಗಮನ ಹರಿಸಬೇಕೆಂದು ಹೇಳಿದರು.ಸದಸ್ಯ ನೆರವಂಡ ಉಮೇಶ್ ಮಾತನಾಡಿ, ಬಲಾಡ್ಯರು ಅಬಲೆಯರ ಮೇಲೆ ಈ ರೀತಿ ದೌರ್ಜನ್ಯ ನಡೆಸುವುದು ಬೇಡ. ಏನೇ ತಪ್ಪಾಗಿದ್ದರೂ ತನಿಖೆಯ ನಂತರ ಕ್ರಮ ಕೈಗೊಳ್ಳಬೇಕು. ಆದರೆ ಯಾವುದೇ ಕ್ರಮ ಜರುಗಿಸದೆ ಏಕಾಏಕಿ ಅಮಾನತು ಮಾಡಿರುವ ಕ್ರಮವನ್ನು ಅವರು ಖಂಡಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರನ್ ಮಾತನಾಡಿ, ಕರಡ ಶಾಲೆಯ ಶಿಕ್ಷಕಿಯನ್ನು ಅಮಾನತು ಮಾಡಿಲ್ಲ. ಮುಖ್ಯ ಶಿಕ್ಷಕಿ ಹುದ್ದೆಯಿಂದ ಸಹ ಶಿಕ್ಷಕಿ ದರ್ಜೆಗೆ ಇಳಿಸಲಾಗಿದೆ ಎಂದು ತಿಳಿಸಿದರು.ತಾಲ್ಲೂಕಿನಲ್ಲಿ ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರಿದ್ದಾರೆ. ಆದರೆ ಏಕೋಪಾಧ್ಯಾಯ ಶಾಲೆಗಳಿರು ವುದರಿಂದ ಶಿಕ್ಷಕರ ಕೊರತೆ ಎದುರಾಗಿದ್ದು, ನೂತನ  ನೇಮಕದ ನಂತರವೇ ಎಲ್ಲಾ ಶಾಲೆಗಳಿಗೂ ಶಿಕ್ಷಕರ ನೇಮಕಾತಿ ಸಾಧ್ಯ ಎಂದರು.ಪಡಿತರ ನೀಡಿ

ಸದಸ್ಯೆ ಕವಿತಾ  ಪ್ರಭಾಕರ್ ಮಾತನಾಡಿ, ಕರಿಕೆ ವ್ಯಾಪ್ತಿಯಲ್ಲಿ ಸುಮಾರು 234 ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲವಾಗಿದೆ. ಇವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಕೂಡ ನೀಡುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ತೊಂದರೆ ಪಡುವಂತಾಗಿದ್ದು, ಆಹಾರ ಇಲಾಖಾಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಸದಸ್ಯ ಸಾಬು ತಿಮ್ಮಯ್ಯ ಮಾತನಾಡಿ, ತಾಲ್ಲೂಕಿನ ಹಲವು ಭಾಗಗಳಲ್ಲಿ ಪಡಿತರ ಚೀಟಿ ಸಮಸ್ಯೆ ಉಂಟಾಗಿದ್ದು, ನೂತನ ಅರ್ಜಿ ಸಲ್ಲಿಕೆಗಾಗಿ ಆಹಾರ ಇಲಾಖಾಧಿಕಾಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಾತನಾಡಿ, ನೂತನ ಪಡಿತರ ಚೀಟಿ ವಿತರಣೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಎಪಿಎಲ್, ಎಪಿಎಲ್ ಕಾರ್ಡ್‌ದಾರರಿಗೆ ಬಿಪಿಎಲ್ ಪಡಿತರ ಚೀಟಿ ನೀಡಲಾಗಿದ್ದು, ಬಡ ಜನತೆಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು.ಆಹಾರ ಇಲಾಖೆಯ ಶೀರಸ್ತೆದಾರ ಕೃಷ್ಣಮೂರ್ತಿ ಮಾತನಾಡಿ, ಹಳೆ ಪಡಿತರ ಚೀಟಿ ಹೊಂದಿದ್ದ ಹಾಗೂ ನೂತನವಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಪಡಿತರ ನಿಲ್ಲಿಸುವಂತೆ ಸೂಚಿಸಿಲ್ಲ  ಎಂದು ತಿಳಿಸಿದರು.ನೂತನ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ಇನ್ನೂ ಕಾಲಾವಕಾಶದ ಬಗ್ಗೆ ಮಾಹಿತಿ ಬಂದಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗೆ ಈ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.ಸದಸ್ಯ ನೆರವಂಡ ಉಮೇಶ್ ಮಾತನಾಡಿ, ತಾಲ್ಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ನೀಡಲಾಗುವ ಪಡಿತರ ದಾಸ್ತಾನಿನ ಬಗ್ಗೆ ಪ್ರತಿ ತಿಂಗಳು ಮಾಹಿತಿ ನೀಡಬೇಕು ಎಂದು ಹೇಳಿದರು.ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಾಗ ದಿನಗೂಲಿ ಕಂಪ್ಯೂಟರ್ ಅಪರೇಟರ್‌ಗಳು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದು, ಇಲಾಖಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಯಲದಾಳು ಪದ್ಮಾವತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತೀಜಾ ಅಚ್ಚಪ್ಪ ಹಾಗೂ ಹಲವು ಇಲಾಖಾಧಿಕಾರಿಗಳು ಹಾಜರಿದ್ದರು.`ಎಚ್‌ಐವಿ: ಸುಳ್ಳು ಮಾಹಿತಿ'

ಜಿಲ್ಲೆಯಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ಕಡಿಮೆಯಾಗಿದೆ ಎಂಬ ಆರೋಗ್ಯ ಇಲಾಖೆಯ ಮಾಹಿತಿ ಸುಳ್ಳು ಎಂದು ಸದಸ್ಯ ನೆರವಂಡ ಉಮೇಶ್ ಆರೋಪಿಸಿದರು.

ಇತ್ತೀಚೆಗಷ್ಟೇ ಬಲ್ಲಮಾವಟಿಯಲ್ಲಿ ಎಚ್‌ಐವಿ ಪೀಡಿತ ವ್ಯಕ್ತಿ ನಿಧನ ಹೊಂದಿದ್ದಾರೆ. ತಾಲ್ಲೂಕಿನ ಕಕ್ಕಬ್ಬೆ ವ್ಯಾಪ್ತಿಯ ಕಾರ್ಮಿಕ ಕುಟುಂಬದಲ್ಲಿ ಗಂಡ ಹೆಂಡತಿ ಇಬ್ಬರಿಗೂ ಎಚ್‌ಐವಿ ಇದೆ. ಇವರಿಗೆ ಜನಿಸಿರುವ ಮಗುವಿನಲ್ಲೂ ಈ ರೋಗ ಪತ್ತೆಯಾಗಿದೆ. ಪುನಃ ಈಗ ಮಹಿಳೆ ಗರ್ಭವತಿಯಾಗಿದ್ದಾರೆ ಎಂದು ತಿಳಿಸಿದರು.ಈ ಬಗ್ಗೆ ವೈದ್ಯಾಧಿಕಾರಿಗಳು ಅರಿವು ಮೂಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಕೇವಲ ನಗರ ವ್ಯಾಪ್ತಿಯಲ್ಲಿ ಮಾತ್ರ ಈ ಕಾರ್ಯಕ್ರಮಗಳು ಹಾಗೂ ತಪಾಸಣೆ ನಡೆಸದೆ ಗ್ರಾಮೀಣ ಭಾಗದಲ್ಲೂ ಈ ಕಾರ್ಯ ನಡೆಯಬೇಕಿದೆ ಎಂದು ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry