ಸರ್ಕಾರಿ ಶಾಲೆಗೆ ಖಾಸಗಿ ಕಂಪನಿ ಅತಿಕ್ರಮಣ

ಗುರುವಾರ , ಜೂಲೈ 18, 2019
28 °C

ಸರ್ಕಾರಿ ಶಾಲೆಗೆ ಖಾಸಗಿ ಕಂಪನಿ ಅತಿಕ್ರಮಣ

Published:
Updated:

ಮಹದೇವಪುರ: ಸಮೀಪದ ನಲ್ಲೂರುಹಳ್ಳಿ ಗ್ರಾಮದ ಮರಿಯಮ್ಮನ ದಿನ್ನೆಯಲ್ಲಿ ನೂತನವಾಗಿ ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು  ಖಾಸಗಿ ಕಂಪೆನಿಯೊಂದು ಅನಧಿಕೃತವಾಗಿ ಆಕ್ರಮಿಸಿಕೊಂಡು ಕಚೇರಿಯನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ನಲ್ಲೂರುಹಳ್ಳಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಅಭಾವ ಹಾಗೂ ಮೈದಾನದ ಕೊರತೆ ಇದ್ದುದರಿಂದ ಮರಿಯಮ್ಮನ ದಿನ್ನೆಯಲ್ಲಿ 2006- 07ರ ಸಾಲಿನಲ್ಲಿ ಹೊಸದಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಲಾಯಿತು. ಆದರೆ ಇದುವರೆಗೂ ಆ ಶಾಲೆಯಲ್ಲಿ ಮಾತ್ರ ವಿದ್ಯಾ ರ್ಥಿಗಳಿಗೆ ಓದುವ ಭಾಗ್ಯ ದೊರೆತಿಲ್ಲ. ರಸ್ತೆ ಹಾಗೂ ಕಟ್ಟಡ ನಿರ್ಮಾಣ ಮಾಡುವ ಖಾಸಗಿ ಕಂಪನಿಯೊಂದು ಎಂಟು ತಿಂಗಳುಗಳಿಂದ ಹೊಸ ಶಾಲಾ ಕೊಠಡಿಗಳಲ್ಲಿ  ಬಿಡಾರ ಹೂಡಿದೆ. ಅಲ್ಲದೆ ಕಂಪೆನಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಶಾಲಾ ಆವರಣದಲ್ಲಿಯೇ ಐವತ್ತಕ್ಕೂ ಹೆಚ್ಚು ಟೆಂಟ್‌ಗಳನ್ನು ಹಾಕಿಕೊಂಡಿದ್ದಾರೆ. ಇನ್ನು ಶಾಲೆಯ ಮೈದಾನವು ಖಾಸಗಿ ವಾಹನಗಳ ನಿಲುಗಡೆ ತಾಣವಾಗಿ ಬದಲಾಗಿದೆ.ಕಳೆದ ಐದಾರು ವರ್ಷಗಳ ಹಿಂದೆಯೇ ನಲ್ಲೂರುಹಳ್ಳಿ ಸರ್ವೇ ಸಂಖ್ಯೆ 79ರಲ್ಲಿನ ಗೋಮಾಳ ಜಮೀನಿನಲ್ಲಿ ಎರಡು ಎಕರೆ ಭೂಪ್ರದೇಶವನ್ನು ಶಾಲೆಗಾಗಿ ಮೀಸಲಿಡಲಾಗಿತ್ತು. ಆ ಭೂಮಿಯಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಾಲೆ ಸುತ್ತಮುತ್ತ ಆವರಣ ಗೋಡೆಯನ್ನು ಸಹ ನಿರ್ಮಾಣ ಮಾಡಲಾಯಿತು.ಖಾಸಗಿ ಕಂಪೆನಿಯು ಶಾಲೆಯ ಬೀಗ ಮುರಿದು ಒಳ ಪ್ರವೇಶಿಸಿದ್ದು, ಒಂದು ಕೊಠಡಿಯನ್ನು ಕಂಪನಿಯ ಕಚೇರಿಯನ್ನಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಉಳಿದ ಕೊಠಡಿಗಳು ಕೆಲಸಗಾರರ ವಿಶ್ರಾಂತಿ ಕೊಠಡಿಗಳಾಗಿ ಬದಲಾಗಿವೆ. ಈ ಬಗ್ಗೆ ಸ್ಥಳೀಯರು ಜನವರಿ ತಿಂಗಳಲ್ಲಿ ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಿದ್ದರು. ಜೂನ್ ತಿಂಗಳಲ್ಲಿ ಕಂಪನಿಯ ಕೊಠಡಿಗಳನ್ನು ಖಾಲಿ ಮಾಡಿಕೊಡುತ್ತದೆ ಎಂದು ತಿಳಿಸಲಾಗಿತ್ತು.

ಈಗ ಮತ್ತೆ ಶೈಕ್ಷಣಿಕ ವರ್ಷ ಆರಂಭವಾಗಿದೆ. ನಲ್ಲೂರುಹಳ್ಳಿ ಗ್ರಾಮದಲ್ಲಿರುವ ಶಾಲೆಯಲ್ಲಿ ಪ್ರಸಕ್ತ ವರ್ಷ ಮಕ್ಕಳ ಸಂಖ್ಯೆಯು ಹೆಚ್ಚಾಗಿದೆ. ವ್ಯವಸ್ಥಿತವಾಗಿ ಕುಳಿತು ಕಲಿಯಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಮಕ್ಕಳಿಗೆ ಆಟವಾಡಲು ಅಗತ್ಯವಾದ ಕ್ರೀಡಾಂಗಣವೂ ಇಲ್ಲ.ಆದಷ್ಟು ಬೇಗನೆ ಖಾಸಗಿ ಕಂಪನಿಯ ಕಚೇರಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿರುವ ಸ್ಥಳೀಯರು, ಮರಿಯಮ್ಮನ ದಿನ್ನೆಯಲ್ಲಿ ನಿರ್ಮಿಸಿದ ಶಾಲೆಗೆ ನಲ್ಲೂರುಹಳ್ಳಿ ಶಾಲೆಯನ್ನು ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದ್ದಾರೆ.`ಖಾಸಗಿ ಕಂಪನಿಯವರು ಅನುಮತಿ ಪಡೆಯದೇ ಸರ್ಕಾರಿ ಶಾಲೆಯ ಕೊಠಡಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಅಕ್ರಮ ಚಟುವಟಿಕೆಯಾಗಿದೆ. ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು~ ಎಂದು `ಪ್ರಜಾವಾಣಿ~ಜತೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಂಡಯ್ಯ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry