ಸರ್ಕಾರಿ ಶಾಲೆಯಲ್ಲಿ ಕಲಿತು ಸಾಧನೆ ತೋರಿದ ದಿವ್ಯಾ

7

ಸರ್ಕಾರಿ ಶಾಲೆಯಲ್ಲಿ ಕಲಿತು ಸಾಧನೆ ತೋರಿದ ದಿವ್ಯಾ

Published:
Updated:
ಸರ್ಕಾರಿ ಶಾಲೆಯಲ್ಲಿ ಕಲಿತು ಸಾಧನೆ ತೋರಿದ ದಿವ್ಯಾ

ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ರಾಜ್ಯದ ಪ್ರತಿಭೆದಾವಣಗೆರೆ:
ಸಾಧನೆಗೆ ಅದೃಷ್ಟ ಎಂಬುದು ಗೊತ್ತಿಲ್ಲ; ಅಡ್ಡದಾರಿಗಳಂತೂ ಇಲ್ಲವೇ ಇಲ್ಲ. ಸತತ ಪರಿಶ್ರಮ ಹಾಗೂ ಗುರಿಯಷ್ಟೇ ಮುಖ್ಯ.- ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 606ನೇ ರ‌್ಯಾಂಕ್ ಗಳಿಸಿ ಸಾಧನೆ ತೋರಿರುವ ಕನ್ನಡತಿ ಎಸ್. ದಿವ್ಯಾ ಅವರ ಪ್ರತಿಕ್ರಿಯೆ ಇದು.ದಿವ್ಯಾ, ಬರದನಾಡು ಚಿತ್ರದುರ್ಗ ಜಿಲ್ಲೆಯ ಪ್ರತಿಭೆ. ತಂದೆ ಕುಮಾರಪಟ್ಟಣಂ ಎಸ್‌ಬಿಎಂನಲ್ಲಿ ವ್ಯವಸ್ಥಾಪಕರಾಗಿರುವ ಪಿ.ಬಿ. ಶಿವರಾಂ ಹಾಗೂ ಸಮಾಜಸೇವಕಿ, ~ಐ~ ಬ್ಯಾಂಕ್ ಅಧ್ಯಕ್ಷೆ ಗಾಯತ್ರಿ ಶಿವರಾಂ ದಂಪತಿಯ ಪುತ್ರಿ. ಎಸ್ಸೆಸ್ಸೆಲ್ಸಿ, ಪಿಯುಸಿವರೆಗೂ ಕ್ರಮವಾಗಿ ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ. 93 ಅಂಕ ಗಳಿಸಿ ಜಿಲ್ಲೆಯಲ್ಲಿಯೇ ಹೆಚ್ಚು ಅಂಕ ಗಳಿಸಿದ ಖ್ಯಾತಿ ಅವರದ್ದು.ಪಿಯುಸಿಯಲ್ಲಿ ಶೇ. 83 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಎನಿಸಿದ್ದರು. ನಂತರ ಬೆಂಗಳೂರಿನಲ್ಲಿ ಅಮೃತ ಸ್ಕೂಲ್ ಆಫ್ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಷಯದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಅಮೃತ ವಿದ್ಯಾಲಯಮಟ್ಟದಲ್ಲಿ 27ನೇ ರ‌್ಯಾಂಕ್ ಗಳಿಸಿದ ಸಾಧನೆ ಅವರದು.ತಾಯಿ (ಗಾಯತ್ರಿ) ಮಾಡುವ ಸಮಾಜ ಸೇವೆಯಿಂದ ಸ್ಫೂರ್ತಿ ಪಡೆದು, ನಾಗರಿಕ ಸೇವೆಯಲ್ಲಿ ತೊಗಡಿಕೊಳ್ಳಬೇಕು ಎಂಬ ಉದ್ದೇಶದಿಂದ 2010ರ ನವೆಂಬರ್‌ನಿಂದ ನವದೆಹಲಿಯಲ್ಲಿದ್ದುಕೊಂಡು ಯುಪಿಎಸ್ಸಿ ಪರೀಕ್ಷೆಗೆ ಓದಿಕೊಂಡಿದ್ದರು. ಇದರ ಫಲವೇ, 606ನೇ ರ‌್ಯಾಂಕ್ ಗಳಿಸಿದ್ದಾರೆ. ಭೂಗೂಳಶಾಸ್ತ್ರ ವಿಷಯಕ್ಕೆ ಮಾತ್ರ ಕೋಚಿಂಗ್ ಮೊರೆ ಹೋಗಿದ್ದಾರೆ.ಐಚ್ಛಿಕ ಕನ್ನಡ ವಿಷಯಕ್ಕೆ ಮಾತ್ರ, ಬೆಂಗಳೂರಿನಲ್ಲಿ ಕೆಲ ಕಾಲ, ನರಹಳ್ಳಿ ಬಾಲಸುಬ್ರಹ್ಮಣ್ಯಂ ಹಾಗೂ ಚಿತ್ರದುರ್ಗದಲ್ಲಿ ಕರಿಯಪ್ಪ ಮಾಳಿಗೆ ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ. ಬಿ.ಟೆಕ್ ಪದವಿ ಪಡೆದ ಅವರು, ಖಾಸಗಿ ಕಂಪೆನಿಗಳ ಕೆಲಸಕ್ಕೆ ಅರ್ಜಿ ಗುಜರಾಯಿಸಿದ್ದರೆ ಕೈತುಂಬಾ ಸಂಬಳ ಸಿಗುವ ಕೆಲಸ ಸಿಗುತ್ತಿತ್ತು. ಆದರೆ, ಅವರಿಲ್ಲಿರುವ ಸಮಾಜಸೇವೆ ಮಾಡಬೇಕು ಎಂಬ ಹಂಬಲದಿಂದ ಐಎಎಸ್ ಅಧಿಕಾರಿ ಆಗಬೇಕು ಎಂಬ ಗುರಿ ಹೊಂದಿದ್ದಾರೆ.~ನಾನು ಸರ್ಕಾರಿ ಶಾಲೆಯಲ್ಲಿ ಓದಿದವಳು. ಹೀಗಾಗಿ ಯಾವುದೇ ಕೋಚಿಂಗ್ ಪಡೆಯದೇ, ಮನೆಯಲ್ಲಿಯೇ ಓದಿಕೊಳ್ಳುತ್ತಿದ್ದೆ. ಇದು ಈಗಲೂ ಸಹಾಯವಾಯಿತು. ಓದಿದ್ದು ತಾಂತ್ರಿಕ ವಿಷಯವಾದರೂ, ಪರೀಕ್ಷೆಗೆ ಮಾನವಿಕ ವಿಷಯ ಆಯ್ಕೆ ಮಾಡಿಕೊಂಡೆ. ಹೀಗಾಗಿ, ಭೂಗೋಳಶಾಸ್ತ್ರಕ್ಕೆ ಮಾತ್ರ ಸ್ವಲ್ಪ ಕೋಚಿಂಗ್ ಮೊರೆ ಹೋಗಿದ್ದೇನೆ. ಚಿತ್ರದುರ್ಗದಲ್ಲಿ ಸೌಲಭ್ಯದ ಕೊರತೆಯಿಂದ ದೆಹಲಿಗೆ ಬಂದೆ. ಪೋಷಕರು ಪ್ರೋತ್ಸಾಹಿಸಿದರು. ನಿತ್ಯವೂ 10-12 ಗಂಟೆ ಓದಿಕೊಳ್ಳುತ್ತಿದ್ದೆ. 2 ದಿನಪತ್ರಿಕೆಗಳನ್ನು ನಿಯಮಿತವಾಗಿ ಓದಿಕೊಳ್ಳುತ್ತೇನೆ. ದಿನಪತ್ರಿಕೆಗಳಿಂದ ಇದರಿಂದ ಸಹಾಯವಾಯಿತು~ ಎಂದು ದಿವ್ಯಾ          `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.ನನ್ನ ತಾಯಿಯೇ ಮುಖ್ಯವಾಗಿ ಸ್ಫೂರ್ತಿ ಎನ್ನುವ ಅವರು, ಚಿಕ್ಕಿಂದಿನಿಂದಲೂ ಇತ್ತ ಮನಸ್ಸು ತುಡಿಯುತ್ತಿದೆ. ನೊಂದವರಿಗೆ ಸಹಾಯ ಮಾಡುವ ಸೇವೆ ದೊಡ್ಡದು ಎನಿಸುತ್ತದೆ. ಹೀಗಾಗಿ ನಾನು, 606ನೇ ರ‌್ಯಾಂಕ್‌ಗೆ ತೃಪ್ತಿಪಟ್ಟುಕೊಳ್ಳುತ್ತಿಲ್ಲ. ಈಗ, ನನಗೆ ಕಂದಾಯ ಅಥವಾ ಸುಂಕ ಇಲಾಖೆಯಲ್ಲಿ ಕೆಲಸ ಸಿಗಬಹುದು. ಆದರೆ, ಇಷ್ಟಕ್ಕೆ ತೃಪ್ತಿಪಡುವುದಿಲ್ಲ. ಹೀಗಾಗಿ ಮತ್ತೆ ಪರೀಕ್ಷೆ ಬರೆಯುತ್ತಿದ್ದೇನೆ. ಮೇ 20ರಿಂದ ಪ್ರಿಲಿಮ್ಸ ಪರೀಕ್ಷೆ ಇದೆ. ಇದಕ್ಕಾಗಿ 15 ಗಂಟೆ ಓದಿಕೊಳ್ಳುತ್ತಿದ್ದೇನೆ. ಐಎಎಸ್ ಅಧಿಕಾರಿ ಆಗಲೇಬೇಕು ಎಂಬ ಛಲವಿದೆ ಎಂದು ವಿಶ್ವಾಸದಿಂದ ಹೇಳುತ್ತಾರೆ ದಿವ್ಯಾ.ಸ್ಪರ್ಧಾತ್ಮಕ ಪರೀಕ್ಷೆಗೆ ಸತತ ಪರಿಶ್ರಮವೇ ಮುಖ್ಯ. ಅದರಿಂದ ಮಾತ್ರ ಗೆಲುವು ಪಡೆಯಲು ಸಾಧ್ಯ ಎಂದು ಪರೀಕ್ಷಾರ್ಥಿಗಳಿಗೆ ಸಲಹೆ ನೀಡುತ್ತಾರೆ ಅವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry