ಸರ್ಕಾರಿ ಶಾಲೆ ಕಡ್ಡಾಯವಾಗಲಿ

ಮಂಗಳವಾರ, ಜೂಲೈ 16, 2019
28 °C

ಸರ್ಕಾರಿ ಶಾಲೆ ಕಡ್ಡಾಯವಾಗಲಿ

Published:
Updated:

ಮೈಸೂರು:  ಮೂಲತಃ ಎಚ್.ಡಿ. ಕೋಟೆ ತಾಲ್ಲೂಕಿನ ಕಿತ್ತೂರು (ಈಗ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ) ಗ್ರಾಮದವರಾದ ಪಂಡಿತ ನಾಗರಾಜಯ್ಯ ಎಚ್.ಡಿ.ಕೋಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ಕನ್ನಡ ಶಿಕ್ಷಕ, ಅಧ್ಯಾಪಕ ಹಾಗೂ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಅವರು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರೊಂದಿಗೆ ನಡೆದ ಮಾತುಕತೆಯ ವಿವರ ಇಲ್ಲಿದೆ.ಪ್ರತಿ ತಾಲ್ಲೂಕಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯಬೇಕೆ? ಸ್ವರೂಪ ಹೇಗಿರಬೇಕು?

ಪ್ರತಿ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಈಗ ಮಾತ್ರ ತೀರ ಅಗತ್ಯ. ಕನ್ನಡಕ್ಕೆ ಈಗ ಉಳಿವಿನ ಪ್ರಶ್ನೆ. ಜನರು ಎಚ್ಚೆತ್ತುಕೊಳ್ಳಬೇಕು. ತಮಿಳುನಾಡಿನವರ ಭಾಷಾ ಅಭಿಮಾನ ನಮಗೆ ಮಾದರಿಯಾಗಬೇಕು. ಕನ್ನಡ ಬೇರೆ; ಕನ್ನಡತನ ಬೇರೆ. ನಮ್ಮಲ್ಲಿ ಕನ್ನಡತನ ಮರೆಯಾಗುತ್ತಿದೆ. ಕುವೆಂಪು ಅವರು `ಕನ್ನಡವೊಂದಿದ್ದರೆ ನೀನೆಮಗೆ ಕಲ್ಪತರು' ಎಂದು ಹೇಳಿದ್ದರು. ಅವರು ಹೇಳಿದಂತೆ `ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು' ಎನ್ನುವುದನ್ನು ಕನ್ನಡಿಗರು ಅರಿತುಕೊಳ್ಳಬೇಕು.ಕನ್ನಡ ಉಳಿಸಲು ಸಾಹಿತ್ಯ ಸಮ್ಮೇಳನ ಸಹಾಯಕವೇ?

ಖಂಡಿತ ಸಹಾಯವಾಗುತ್ತವೆ. ಎಚ್.ಡಿ. ಕೋಟೆಯಲ್ಲಿ ಭಾಷೆ ಸಮಸ್ಯೆಯೇನಿಲ್ಲ. ಅಲ್ಲಿಯ ಗಡಿಭಾಗದ ಭೂಪ್ರದೇಶ ಕೇರಳಿಗರ ಪಾಲಾಗುತ್ತಿದೆ. ಇಂಥ ಸಮಸ್ಯೆಗಳನ್ನು ಗುರುತಿಸಿ, ಚರ್ಚಿಸಬಹುದು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಜನ ಉತ್ಸಾಹ ತೋರುತ್ತಿಲ್ಲ; ಭಾಷೆಯ ಭವಿಷ್ಯವೇನು?

ತಾಯಿನುಡಿಯಲ್ಲಿ ಪ್ರಾಥಮಿಕ ಶಿಕ್ಷಣ ಎನ್ನುವುದು ಲೋಕನೀತಿ. ಉಳಿದೆಲ್ಲ ರಾಷ್ಟ್ರಗಳಲ್ಲಿ ತಾಯಿನುಡಿಯಲ್ಲೇ  ಕಲಿಕೆಯಿದ್ದರೆ, ನಮ್ಮಲ್ಲಿ ಮಾತ್ರ ಜನ ಈ ನೀತಿಯನ್ನು ಮರೆತಿದ್ದಾರೆ. ಇದು ನಮ್ಮ ದೌರ್ಭಾಗ್ಯ. ಗಾಂಧೀಜಿ ಬ್ರಿಟಿಷರನ್ನು ದೇಶದಿಂದ ಓಡಿಸಿದರು. ಆದರೆ, ಭಾಷಾ ದಾಸ್ಯ ಉಳಿದಿದೆ. `ದಿನಗೂಲಿಯಿಂದ ಹಿಡಿದು ಸರ್ಕಾರದ ಕಾರ್ಯದರ್ಶಿಯವರೆಗೆ ಎಲ್ಲ ಸರ್ಕಾರಿ ನೌಕರರ ಮಕ್ಕಳೂ ಸರ್ಕಾರಿ ಶಾಲೆಯಲ್ಲೇ ಓದಬೇಕು' ಎಂಬ ನಿಯಮ ಜಾರಿಗೊಳಿಸಬೇಕು. ರಾಜ್ಯದಲ್ಲಿ ಈಚೆಗೆ ಹೊಸ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಈ ಬಗ್ಗೆ ಪತ್ರ ಬರೆದಿದ್ದೇನೆ. ಕನ್ನಡ ಅಭಿವೃದ್ಧಿಯಲ್ಲಿ ಸರ್ಕಾರದ ಹಾಗೂ ಜನರ ಪಾತ್ರ?

ಕನ್ನಡ ಅಭಿವೃದ್ಧಿಯಲ್ಲಿ ಜನರು ಪಾತ್ರ ಅಮೂಲ್ಯ. ಜನರು ತಮ್ಮ ಪಾತ್ರ ಮರೆತಿರುವಾಗ ಸರ್ಕಾರ ಕ್ರಮಕ್ಕೆ ಮುಂದಾಗಬೇಕು. ಆಡಳಿತದಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯಗೊಳಿಸಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಆಡಳಿತದ ಎಲ್ಲ ಕಾರ್ಯಕಲಾಪಗಳೂ ಶುದ್ಧ ಕನ್ನಡದಲ್ಲೇ ನಡೆಯುತ್ತಿದ್ದವು. ನಂತರ ಅದು ಯಾವಾಗ ಬದಲಾಯಿತೋ?ಯುವಜನಾಂಗದಲ್ಲಿ ಸಾಹಿತ್ಯ ಅಭಿರುಚಿ ಹೆಚ್ಚಿಸಲು ಯಾವ ಕ್ರಮ ಅಗತ್ಯ?

ಯಾವುದಕ್ಕೂ ಮೂಲ ಕಾರಣ ಶಿಕ್ಷಣ. ಪಠ್ಯದಲ್ಲಿ ಕನ್ನಡ ನಾಡು-ನುಡಿಗಳ ಬಗ್ಗೆ ಅಭಿಮಾನದ ಕಾವ್ಯ ಹಾಗೂ ಸಾಹಿತ್ಯಗಳನ್ನು ಅಳವಡಿಸಬೇಕು. `ಕನ್ನಡವನುಳಿದೆನಗೆ ಅನ್ಯಜೀವನವಿಲ್ಲ, ಕನ್ನಡವೇ ಎನ್ನುಸಿರು ಪೆತ್ತೆನ್ನ ತಾಯೇ...' ಹಾಗೂ `ಹಚ್ಚೇವು ಕನ್ನಡದ ದೀಪ...' ಗಳಂಥ ಕನ್ನಡ ಅಭಿಮಾನ ಬಿಂಬಿಸುವ ಪದ್ಯಗಳನ್ನು ಪಠ್ಯದಲ್ಲಿ ಸೇರಿಸಬೇಕು.ವಿಧ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡ ಬಳಕೆ ಶುದ್ಧವಾಗಿಲ್ಲ ಎಂಬ ಆರೋಪವಿದೆ. ಈ ಮಾಧ್ಯಮಗಳು ಭಾಷೆಯ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಬಲ್ಲವು?

ವಿಧ್ಯುನ್ಮಾನ ಮಾಧ್ಯಮಗಳಲ್ಲಿ ಬಳಸಲಾಗುವ ಭಾಷೆ ಸಾರ್ವಜನಿಕರ ಮೇಲೆ ನೇರ ಪ್ರಭಾವ ಬೀರುತ್ತದೆ. ನಾನು `ಮೈಸೂರು ಆಕಾಶವಾಣಿ'ಯ ಪ್ರದೇಶ ಸಮಾಚಾರವನ್ನು ಎಷ್ಟೋ ವರ್ಷಗಳಿಂದ ಕೇಳುತ್ತಿದ್ದೇನೆ. ಅಲ್ಲಿ ಭಾಷೆ ಶುದ್ಧವಾಗಿದೆ. ಟಿವಿಯ ಬೇರೆ ಬೇರೆ ಚಾನೆಲ್‌ಗಳನ್ನು ನೋಡುವುದಿಲ್ಲ. ಆದರೆ, ಭಾಷೆ ಕಲುಷಿತವಾಗಿರುವ ಬಗ್ಗೆ ಕೇಳಿದ್ದೇನೆ. ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವೆ. ಇವು ಮಾಧ್ಯಮಗಳ  ಭಾಷೆ ಬಳಕೆಯನ್ನು ನಿಯಂತ್ರಿಸುವ ಕಾರ್ಯವನ್ನು ಮಾಡಬೇಕು.ಉದ್ಯೋಗದ ದೃಷ್ಟಿಯಿಂದ ಎಲ್ಲರೂ ಇಂಗ್ಲಿಷ್ ಭಾಷೆಗೆ ಮಾರುಹೋಗುತ್ತಿದ್ದಾರೆ. ಕನ್ನಡ ಭಾಷೆಗೂ ಇಷ್ಟೇ ಮಹತ್ವ ಬರಬೇಕಾದರೆ ಏನು ಮಾಡಬಹುದು?

ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಉದ್ಯೋಗ ಲಭಿಸುತ್ತದೆ ಎನ್ನುವುದು ತಪ್ಪು ತಿಳಿವಳಿಕೆ. ಮಾಧ್ಯಮ ಬೇರೆ; ಭಾಷೆಯೇ ಬೇರೆ. ಹಿಂದಿನ ತಲೆಮಾರಿನವರು ಕಲಿತಿದ್ದು ತಾಯ್ನುಡಿಯಲ್ಲಿ. ಅವರೆಲ್ಲ ಈಗ ಒಳ್ಳೆ ಹುದ್ದೆಯಲ್ಲಿಲ್ಲವೇ? ಇಂಗ್ಲಿಷ್ ಬರುವುದಿಲ್ಲವೇ? ಕನ್ನಡ ಮಾಧ್ಯಮದಲ್ಲಿ ಓದುವವರಿಗೆ ಸರ್ಕಾರ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು.ಕನ್ನಡಿಗರಿಗೆ ನಿಮ್ಮ ಸಂದೇಶವೇನು?

ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಜಾತ್ರೆಯಂತಾಗಬಾರದು. ಸಮ್ಮೇಳನದಲ್ಲಿ ಪಾಲ್ಗೊಂಡವರು ಕನ್ನಡದ ದೀಕ್ಷೆ ಪಡೆಯಬೇಕು. ಕನ್ನಡದ ಉಳಿವಿಗೆ ಶ್ರಮಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry