ಸರ್ಕಾರಿ ಶಾಲೆ ಗುಣಮಟ್ಟ ಪರೀಕ್ಷೆ

7

ಸರ್ಕಾರಿ ಶಾಲೆ ಗುಣಮಟ್ಟ ಪರೀಕ್ಷೆ

Published:
Updated:

ಚಾಮರಾಜನಗರ: ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ ಮೂಲಕ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೈಕ್ಷಣಿಕ ಗುಣಮಟ್ಟ ಪರೀಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ.ಶಿಕ್ಷಣ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನ ಹಾಗೂ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಪರೀಕ್ಷಿಸಿ ಅಭಿವೃದ್ಧಿಪಡಿಸುವುದು ಈ ಮೌಲ್ಯಾಂಕನದ ಮೂಲ ಉದ್ದೇಶ. ರಾಜ್ಯದ ಎಲ್ಲ ಶೈಕ್ಷಣಿಕ ವಲಯದ ವ್ಯಾಪ್ತಿಯಲ್ಲಿ 2 ಸರ್ಕಾರಿ ಪ್ರೌಢಶಾಲೆ ಹಾಗೂ 3 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ಅಧ್ಯಯನ ನಡೆಯಲಿದೆ. ಇದಕ್ಕಾಗಿ ಒಟ್ಟು 1,020 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.ಪ್ರಥಮ ಹಂತದಲ್ಲಿ ಶಾಲಾ ಮುಖ್ಯಶಿಕ್ಷಕರ ಮೂಲಕವೇ ಸ್ವಮೌಲ್ಯಾಂಕನ ನಡೆಯಲಿದೆ. ಎರಡನೇ ಹಂತದಲ್ಲಿ ಬಾಹ್ಯ ಮೌಲ್ಯಾಂಕನಕಾರರ ಮೂಲಕ ಶಾಲೆಗಳ ಸಮಗ್ರ ಮೌಲ್ಯಾಂಕನ ನಡೆಯಲಿದೆ. ಪ್ರತಿ ಜಿಲ್ಲೆಯಲ್ಲೂ ಶಾಲೆಗಳ ಗುಣಮಟ್ಟ ಪರೀಕ್ಷಿಸುವ ಈ ಪ್ರಕ್ರಿಯೆಯ ಜವಾಬ್ದಾರಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ವಹಿಸಲಾಗಿದೆ. ಜತೆಗೆ, ರಾಜ್ಯದಲ್ಲಿ ಪ್ರಥಮ ಬಾರಿಗೆ ಈ ಮಾದರಿಯ ಮೌಲ್ಯಾಂಕನ ನಡೆಯುತ್ತಿರುವುದು ವಿಶೇಷ.ಬಾಹ್ಯ ಮೌಲ್ಯಾಂಕನಕಾರರಾಗಿ ನಿವೃತ್ತ ಅಧಿಕಾರಿಗಳು, ನಿವೃತ್ತ ಶಿಕ್ಷಕರು, ಬಿ.ಇಡಿ ಪದವೀಧರರು ಕರ್ತವ್ಯ ನಿರ್ವಹಿಸಲಿದ್ದಾರೆ. ಈಗಾಗಲೇ, ಇವರಿಗೆ ಜಿಲ್ಲಾಮಟ್ಟದಲ್ಲಿ ಅರ್ಹತಾ ಪರೀಕ್ಷೆ ಕೂಡ ನಡೆಸಲಾಗಿದೆ. ಆಯ್ಕೆಯಾದವರಿಗೆ ನವೆಂಬರ್ ತಿಂಗಳಿನಲ್ಲಿ ಮೌಲ್ಯಾಂಕನ ನಡೆಸುವ ಕುರಿತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.ಮೌಲ್ಯಾಂಕನ ಹೇಗೆ? ಶೈಕ್ಷಣಿಕ ವಲಯದಡಿ ಆಯ್ಕೆಯಾಗುವ ಪ್ರತಿಯೊಂದು ಶಾಲೆಯ ಗುಣಮಟ್ಟದ ಪರೀಕ್ಷೆಗೆ 100 ಅಂಕ ನಿಗದಿಪಡಿಸಲಾಗಿದೆ. ಶಾಲೆಯಲ್ಲಿ ಕಲ್ಪಿಸಿರುವ ಮೂಲ ಸೌಕರ್ಯಕ್ಕೆ 20 ಅಂಕ ನಿಗದಿಯಾಗಿವೆ. ಶಾಲೆಯ ಮಕ್ಕಳ ಕಲಿಕೆಯ ಮಟ್ಟಕ್ಕೆ 60 ಅಂಕ ನಿಗದಿಪಡಿಸಲಾಗಿದೆ. ನಾಯಕತ್ವ- 10, ಸಮುದಾಯದ ಭಾಗವಹಿಸುವಿಕೆ- 5 ಹಾಗೂ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಶಿಕ್ಷಕರು ಅಳವಡಿಸಿಕೊಂಡಿರುವ ಹೊಸ ಬೋಧನಾ ವಿಧಾನಕ್ಕೆ 5 ಅಂಕ     ನೀಡಲಾಗುತ್ತದೆ.ಡಿಸೆಂಬರ್ ಮತ್ತು ಬರುವ ಜನವರಿಯಲ್ಲಿ ರಾಜ್ಯದ ವ್ಯಾಪ್ತಿ ಐದು ಹಂತದಲ್ಲಿ ಶಾಲೆಗಳ ಸಮಗ್ರ ಮೌಲ್ಯಾಂಕನ ನಡೆಯಲಿದೆ. ಬಾಹ್ಯ ಮೌಲ್ಯಾಂಕನಕಾರರು ಆಯ್ಕೆಯಾಗಿರುವ ಶಾಲೆಗಳಿಗೆ ಭೇಟಿ ನೀಡಿ ಪರಿಷತ್‌ನಿಂದ ನಿಗದಿಪಡಿಸಿರುವ ಮಾನದಂಡದ ಅನ್ವಯ ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲಿಸಲಿದ್ದಾರೆ.

ಬಳಿಕ ತಾವು ಸಿದ್ಧಪಡಿಸಿದ ವರದಿಯನ್ನು ಪರಿಷತ್‌ಗೆ ಸಲ್ಲಿಸಲಿದ್ದಾರೆ. ಮೌಲ್ಯಾಂಕನದ ಆಧಾರದ ಅನ್ವಯ ಶಾಲೆಗಳು ಉತ್ತಮ ಕಲಿಕಾ ವಾತಾವರಣ ಹೊಂದಿಲ್ಲದಿದ್ದರೆ ಅಂತಹ ಶಾಲೆಗಳಲ್ಲಿ ಸುವ್ಯವಸ್ಥಿತವಾದ ವಾತಾವರಣ ಸೃಷ್ಟಿಸಲು ಸರ್ಕಾರ ಒತ್ತು ನೀಡಲಿದೆ.~ಈಗಾಗಲೇ, ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್‌ನ ಮಾರ್ಗಸೂಚಿಯ ಅನ್ವಯ ಜಿಲ್ಲೆಯಲ್ಲೂ ಸಿದ್ಧತೆ ನಡೆಸಲಾಗಿದೆ. ಬ್ಲಾಕ್ ಮತ್ತು ಕ್ಲಸ್ಟರ್ ಹಂತದ ಸಭೆಗಳಲ್ಲಿ ಮುಖ್ಯಶಿಕ್ಷಕರು, ಶಿಕ್ಷಕರಿಗೆ ಮೌಲ್ಯಾಂಕನ ಪ್ರಕ್ರಿಯೆ  ಕುರಿತು ಮಾಹಿತಿ ನೀಡಲಾಗಿದೆ. ಬಾಹ್ಯ ಮೌಲ್ಯಾಂಕನಕಾರರಿಗೆ ಅರ್ಹತಾ ಪರೀಕ್ಷೆ ಕೂಡ ನಡೆಸಲಾಗಿದೆ~ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಭಾರ ಪ್ರಾಂಶುಪಾಲ ಬೆಳ್ಳಶೆಟ್ಟಿ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry