ಸರ್ಕಾರಿ ಶಾಲೆ: ಮಕ್ಕಳ ಹಕ್ಕು ಉಲ್ಲಂಘನೆ

7

ಸರ್ಕಾರಿ ಶಾಲೆ: ಮಕ್ಕಳ ಹಕ್ಕು ಉಲ್ಲಂಘನೆ

Published:
Updated:

ಲಿಂಗಸುಗೂರ: ಹುಟ್ಟಿದ ಪ್ರತಿಯೋರ್ವ ಮಗು ಶಿಕ್ಷಣ ಕಲಿಯಬೇಕಾದದ್ದು ಹಾಗೂ ಕಲಿಸಬೇಕಾದದ್ದು ಕಾನೂನು ಬದ್ಧ ಹಕ್ಕು. ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಗುರ್ತಿಸಿ ಶಾಲೆಗೆ ಕರೆ ತರುವುದು ಕೂಡ ಶಿಕ್ಷಕರ ಆದ್ಯ ಕರ್ತವ್ಯ. ಶೈಕ್ಷಣಿಕ ಪ್ರಗತಿಗೆ ಎಷ್ಟೆಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದರು ಕೂಡ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದಕ್ಕೆ ಕಡಿವಾಣ ಹಾಕುವವರೆ ಇಲ್ಲದಂತಾಗಿದೆ.ತಾಲ್ಲೂಕು ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ಭಾಗಶಃ ಪ್ರೌಢ ಶಾಲೆಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಶಾಲೆಗೆ ಬರುವ ಮಕ್ಕಳು ಶಾಲೆ ಆರಂಭಕ್ಕೆ ಮುಂಚೆ ಶಾಲಾ ಆವರಣ ಮತ್ತು ಕೊಠಡಿಗಳ ಕಸಗೂಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಶೌಚಾಲಯ ಸ್ವಚ್ಛತೆ, ಕುಡಿಯುವ ನೀರು ಒತ್ತು ತರುವುದು ಇತರೆ ಕೆಲಸಗಳು ಬಹುತೇಕ ಪಾಲಕರಿಗೆ ತಲೆನೋವಾಗಿ ಪರಿಣಮಿಸಿವೆ.ಮನೆಯಿಂದ ಶುಚಿಯಾದ ಶಾಲಾ ಸಮವಸ್ತ್ರ ಧರಿಸಿಕೊಂಡು ಬಂದ ಮಕ್ಕಳು ಗಂಟೆಗಟ್ಟಲೆ ಕಸಗೂಡಿಸಿ, ಶೌಚಾಲಯ ಸ್ವಚ್ಛಗೊಳಿಸಿ, ನೀರು ಮೈಯೆಲ್ಲಾ ಹಾಕಿಕೊಂಡು ಕೊಳೆಯಾದ ಸಮವಸ್ತ್ರದಲ್ಲಿಯೆ ಪಾಠ ಕೇಳಬೇಕಾದ ಸಂದರ್ಭಗಳೆ ಹೆಚ್ಚು. ಶಾಲಾ ಸುಧಾರಣ ಸಮಿತಿ ವತಿಯಿಂದ ಸರ್ಕಾರ ಶಾಲಾ ನಿರ್ವಹಣೆ ಮತ್ತು ಮೇಲುಸ್ತುವಾರಿಗೆ ನೀಡುವ ಸಹಾಯಧನ ಬಳಸಿಕೊಂಡು ಮೇಲಿನ ಕಾರ್ಯಗಳಿಗೆ ಬಳಸುವುದು ಕಡ್ಡಾಯವಾಗಿದ್ದರು ಕೂಡ ಮಕ್ಕಳ ದುರ್ಬಳಕೆ ಮುಂದುವರೆದಿದೆ.ಶಾಲಾ ಅವಧಿಯಲ್ಲಿ ಮಕ್ಕಳನ್ನು ಮೇಲ್ಕಾಣಿಸಿದ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪಾಲಕರು ಪ್ರಶ್ನಿಸಿದರೆ, ಮಕ್ಕಳಿಗೆ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದನ್ನು ಕಲಿಯಲಿ ಎಂದು ಶಿಕ್ಷಣ ತಜ್ಞರೆ ಹೇಳುತ್ತಾರೆ. ಅಂತೆಯೆ ತಾವು ಮಕ್ಕಳಿಗೆ ಕೆಲಸ ಮಾಡಿಸುತ್ತೇವೆ. ಅಲ್ಲದೆ, ಶಾಲೆಗೆ ಪರಿಚಾರಕರ ನೇಮಕ ಮಾಡದೆ ಹೋಗಿದ್ದರಿಂದ ಇಂತಹ ಕೆಲಸ ಮಾಡಿಸುವುದು ಅನಿವಾರ್ಯ ಎಂದು ಕೆಲ ಶಿಕ್ಷಕರು ಹೇಳಿಕೊಳ್ಳುತ್ತಿರುವುದು ಕೆಲ ಪಾಲಕರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ಮಧ್ಯೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಪೈಪೋಟಿ ನೀಡುವ ಸಂದರ್ಭದಲ್ಲಿ ಮಕ್ಕಳನ್ನು ಕೆಲಸಗಳಿಗೆ ಬಳಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು. ಶಾಲೆಯಲ್ಲಿ ಕೆಲಸಕ್ಕೆ ನಿಯೋಜಿಸುವುದಾದರೆ ತಮ್ಮ ಹೊಲ ಮನೆ ಕೆಲಸಕ್ಕೆ ಕಳುಹಿಸಿದರೆ ಹೆಚ್ಚು ಲಾಭದಾಯಕ ಎಂಬುದು ಪಾಲಕರ ಅಂಬೋಣ. ಕೆಲ ಶಾಲೆಗಳಲ್ಲಿ ಜಾತಿ ಆಧಾರಿತ ಕೆಲಸ ನೀಡುತ್ತಿರುವುದು ಮಕ್ಕಳಲ್ಲಿ ದ್ವೇಷ ಭಾವನೆಗಳನ್ನು ಹೆಚ್ಚಿಸುವುದಕ್ಕೆ ಪ್ರೋತ್ಸಾಹಿಸಿದಂತಾಗಿದೆ.ಈ ಕುರಿತಂತೆ ಕೆಲ ಶಾಲೆಗಳಿಗೆ ಪ್ರಜಾವಾಣಿ ಭೇಟಿ ನೀಡಿ ಮಕ್ಕಳನ್ನು ಸಂಪರ್ಕಿಸಿದಾಗ ಪಾಳೆ ಪ್ರಕಾರ ಶಾಲಾ ಆವರಣ, ಶೌಚಾಲಯ ಸ್ವಚ್ಛಗೊಳಿಸುವುದು ಕಡ್ಡಾಯ ಮಾಡಿರುವ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬಂದವು. ಕೆಲಸ ಮಾಡದೆ ಹೋದರೆ ಕಠಿಣ ಶಿಕ್ಷೆಗೆ ಒಳಪಡಿಸುತ್ತಾರೆ ಎಂದು ಮಕ್ಕಳು ಭಯದಿಂದ ಹೇಳಿಕೊಂಡರು. ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕಾದ ಶಾಲೆಗಳಲ್ಲಿ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದಕ್ಕೆ ಶಿಕ್ಷಣ ಇಲಾಖೆ ಕಡಿವಾಣ ಹಾಕಬೇಕು ಎಂಬುದು ಮಕ್ಕಳ ಅಭಿಪ್ರಯಾವಾಗಿದೆ.ಹಕ್ಕುಗಳ ಉಲ್ಲಂಘನೆ: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಹಂತದಲ್ಲಿ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಹೊರತು ಪಡಿಸಿ ಇತರೆ ಕೆಲಸಗಳಿಗೆ ಬಳಕೆ ಮಾಡುವುದು ಮಕ್ಕಳ ಹಕ್ಕುಗಳ ಉಲ್ಲಂಘಟನೆಯೆ ಸರಿ. ಅದರಲ್ಲೂ ಕಸಗೂಡಿಸುವ, ಶೌಚಾಲಯ ಸ್ವಚ್ಛತೆ, ಇತರೆ ಖಾಸಗಿ ಕೆಲಸಗಳಿಗೆ ಬಳಕೆ ಮಾಡುವುದು ಅಪರಾಧ. ಅಂತಹ ಉಲ್ಲಂಘನೆಗಳ ಪ್ರಕರಣಗಳು ತಮ್ಮ ಗಮನಕ್ಕೂ ಬಂದಿವೆ. ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಪೊಲೀಸ್ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಬಿ.ಎ. ನಂದಿಕೋಲಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry