ಗುರುವಾರ , ಜೂನ್ 24, 2021
29 °C

ಸರ್ಕಾರಿ ಶಾಲೆ ಮುಚ್ಚಬೇಡಿ: ಸ್ದ್ದಿದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಸರ್ಕಾರಿ ಶಾಲೆಗಳಿಗೆ ಸವಲತ್ತು ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ, ಬದಲಿಗೆ ಮಕ್ಕಳ ಸಂಖ್ಯೆ ಕಡಿಮೆ ಎಂಬ ನೆಪದಲ್ಲಿ ಶಾಲೆ ಮುಚ್ಚುವ ಮಾತನಾಡಬೇಡಿ~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಿವಿಮಾತು ಹೇಳಿದರು.ನಗರದಲ್ಲಿ ಭಾನುವಾರ ಘಂಟಿಕೇರಿಯ ದಿ ಕರ್ನಾಟಕ ನ್ಯಾಷನಲ್ ಹೈಸ್ಕೂಲ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.`ಕೆಳವರ್ಗದವರು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಗ್ರಾಮೀಣ ಪ್ರದೇಶದ ಜನತೆ ಹೆಚ್ಚಾಗಿ ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಶಾಲೆ ಮುಚ್ಚಿದರೆ ಅವರಿಗೆ ತೊಂದರೆಯಾಗಲಿದೆ ಬದಲಿಗೆ ಸೂಕ್ತ ಸೌಲಭ್ಯ ಕಲ್ಪಿಸಿ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧಿಸುವ ಮನೋಭಾವ ಬೆಳೆಸಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕು~ ಎಂದು ಹೇಳಿದರು.ಖಾಸಗಿ ಶಾಲೆಗಳಲ್ಲಿ ಗಣಿತ, ಇಂಗ್ಲಿಷ್ ವಿಷಯಗಳಿಗೆ ಸಂಬಂಧಿಸಿದ ತಜ್ಞರು ಬೋಧಿಸಿದರೆ ಸರ್ಕಾರಿ ಶಾಲೆಯಲ್ಲಿ ಒಬ್ಬರೇ ಶಿಕ್ಷಕರು ಎಲ್ಲಾ ವಿಷಯಗಳನ್ನು ಹೇಳಬೇಕಿದೆ. ಇದರಿಂದ ಇಂಗ್ಲಿಷ್ ಹಾಗೂ ಗಣಿತ ವಿಷಯದಲ್ಲಿ ಮಕ್ಕಳು ಹಿಂದುಳಿಯುತ್ತಿದ್ದು, ಬಹುತೇಕ ಶಿಕ್ಷಣ ಕುಂಠಿತಗೊಳ್ಳಲು ಇದೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.`ಪ್ರತಿಭೆ ಅನುವಂಶೀಯತೆ ಅಲ್ಲ. ಯಾರೊಬ್ಬರ ಸೊತ್ತು ಅಲ್ಲ. ನಾವು ಹೇಗೆ ಮಕ್ಕಳನ್ನು ರೂಪಿಸುತ್ತೇವೆ ಎಂಬುದರ ಮೇಲೆ ಅವರು ಪ್ರತಿಭಾವಂತರಾಗುತ್ತಾರೆ. ಉತ್ತಮ ವಾತಾವರಣ ನೀಡಿ ಮಕ್ಕಳನ್ನು ಪ್ರತಿಭಾವಂತರಾಗಿಸಲು ಸಾಧ್ಯ. ಎಲ್ಲರಿಗೂ ಆ ಶಕ್ತಿ ಇದೆ~ ಎಂದರು.`ಈ ಹಿಂದೆ ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ತಾವು ಹಣಕಾಸು ಮಂತ್ರಿಯಾಗಿದ್ದು, ಆಗ 1.10 ಲಕ್ಷ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಯಿತು. ಇದರಿಂದ ಶಿಕ್ಷಣ ಕ್ಷೇತ್ರಕ್ಕೆ ಮಾಡುತ್ತಿದ್ದ ವೆಚ್ಚ ದ್ವಿಗುಣಗೊಂಡರೂ ಸರ್ಕಾರ ಹಿಂದೇಟು ಹಾಕಲಿಲ್ಲ. ಈಗ ಆರ್ಥಿಕ ಶಿಸ್ತಿನ ನೆಪದಲ್ಲಿ ಶಿಕ್ಷಕರ ನೇಮಕಾತಿ ನಿಲ್ಲಿಸಿರುವುದು ಸಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.`ಶಾಲೆಗೆ ಸೇರಿಸಿಕೊಳ್ಳುವಾಗ ಶೇ 90ರಷ್ಟು ಅಂಕ ಗಳಿಸಿದವರಿಗೆ ಆದ್ಯತೆ ನೀಡಿ ಅವರು ಶೇ 95 ಅಂಕ ಗಳಿಸುವಂತೆ ರೂಪಿಸುವುದು ದೊಡ್ಡ ಮಾತಲ್ಲ. ಬದಲಿಗೆ ಶೇ 40ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಶೇ 90 ಅಂಕ ಗಳಿಸುವಂತೆ ಮಾಡುವುದು ದೊಡ್ಡ ಸಾಧನೆ~ ಎಂದು ಹೇಳಿದ ಅವರು, `ಬಹುತೇಕ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರನ್ನು ಹೊಂದಿರುವ ಘಂಟಿಕೇರಿಯಲ್ಲಿರುವ ಕರ್ನಾಟಕ ನ್ಯಾಷನಲ್ ಹೈಸ್ಕೂಲ್ ಎರಡನೇ ವರ್ಗಕ್ಕೆ ಸೇರುತ್ತದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಚಿವ ಜಗದೀಶ ಶೆಟ್ಟರ, ಸಮಾಜದಲ್ಲಿ ಪರಿವರ್ತನೆ ಶಿಕ್ಷಣದಿಂದ ಮಾತ್ರ ಸಾಧ್ಯ. ಶೋಷಿತ ಸಮುದಾಯಗಳಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಳಗೊಂಡರೆ ಅವರು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.`ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸುವುದು ಕೀಳರಿಮೆಯೆಂದು ಭಾವಿಸಬಾರದು. ಕನ್ನಡ ಮಾಧ್ಯಮ ಎಂದು ಅಸಡ್ಡೆ ಮಾಡಿಕೊಳ್ಳದೆ ಅಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು~ ಎಂದು ಸಲಹೆ  ನೀಡಿದರು.`ಸಾಮಾನ್ಯ ಶಿಕ್ಷಣದ ಜೊತೆಗೆ ವೃತ್ತಿಪರ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನು ತಾಂತ್ರಿಕವಾಗಿ ಕುಶಲರಾಗಿ ರೂಪಿಸಿ ಬದುಕಿಗೆ ಭದ್ರತೆ ಒದಗಿಸಬೇಕು~ ಎಂದು ಸಲಹೆ ನೀಡಿದರು.ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಹಾಗೂ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸಚಿವ ಜಗದೀಶ ಶೆಟ್ಟರ ಸನ್ಮಾನಿಸಿದರು.ಮೂರು ಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ಎನ್‌ಡಬ್ಲುಕೆಆರ್‌ಟಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಪಾಲಿಕೆ ಸದಸ್ಯೆ ಲಕ್ಷ್ಮೀಬಾಯಿ ಬಿಜವಾಡ ಮತ್ತಿತರರು ಹಾಜರಿದ್ದರು.  `ಸೈಕಾಲಜಿ - ಫಿಸ್ಕಾಲಜಿ~

ತಮ್ಮೂರಿನ ಸರ್ಕಾರಿ ಶಾಲೆಯ ಶಿಕ್ಷಕ ಸೈಕಾಲಜಿ ಪದವನ್ನು ಫಿಸ್ಕಾಲಜಿ ಎಂದು ಹೇಳಿಕೊಟ್ಟ ಕಾರಣ ತಾವು ಕಾಲೇಜು ಮೆಟ್ಟಿಲು ಹತ್ತುವವರೆಗೂ ಫಿಸ್ಕಾಲಜಿ ಎಂದು ಹೇಳುತ್ತಿದ್ದುದ್ದಾಗಿ ಹೇಳಿದ ಸಿದ್ದರಾಮಯ್ಯ, ಸರ್ಕಾರಿ ಶಾಲೆಗಳಲ್ಲಿ ವಿಷಯ ತಜ್ಞರು ಇಲ್ಲದೆ ಎಲ್ಲಾ ವಿಷಯಗಳನ್ನು ಒಬ್ಬರೇ ಬೋಧಿಸುವುದರಿಂದ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದರು.`ಮೊದಲು ವಕೀಲರಾಗಿ ಕೆಲಸ ಮಾಡಿದ್ದರೂ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮಕ್ಕಳಿಗೆ ವಕೀಲರಾಗಿ ಎಂದು ಹೇಳಲು ಆಗುವುದಿಲ್ಲ~ ಎಂದು ಜಗದೀಶ ಶೆಟ್ಟರ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ `ನಾವು ಕಲ್ಲು ಹೊಡಿದಿಲ್ಲ ಬಿಡಿ~ ಎಂದು ಚಟಾಕಿ ಹಾರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.