ಸರ್ಕಾರಿ ಶಾಲೆ ಹಾದಿಯಲ್ಲಿ ಹುಲಿ, ಸೀಳುನಾಯಿ...

7

ಸರ್ಕಾರಿ ಶಾಲೆ ಹಾದಿಯಲ್ಲಿ ಹುಲಿ, ಸೀಳುನಾಯಿ...

Published:
Updated:

ಕಾರವಾರ: ಶಾಲೆಗೆ ಹೋಗಲು ಆತ ಪ್ರತಿದಿನ 20 ಕಿ.ಮೀ ಸೈಕಲ್ ತುಳಿಯಬೇಕು. ಅದೂ ಸಮತಟ್ಟಾದ ರಸ್ತೆಯಲ್ಲ. ಗುಂಡಿಗಳಿಂದ ತುಂಬಿದ, ಬೆಟ್ಟ-ಗುಡ್ಡಗಳಿಂದ ಹಾದು ಹೋಗಿರುವ ರಸ್ತೆಯಲ್ಲಿ. ಇಲ್ಲಿ ಕನಿಷ್ಠ 7-8 ಬಾರಿಯಾದರೂ ಸೈಕಲ್ ಇಳಿದು, ದೂಡಿಕೊಂಡು ಹೋಗಬೇಕು. ಮನೆಯಿಂದ ಮುಖ್ಯರಸ್ತೆ ಸೇರುವುದಕ್ಕೇ ಸುಮಾರು 4 ಕಿ.ಮೀ. ನಡೆಯಬೇಕು!ಇದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸ್ವಕ್ಷೇತ್ರ ಶಿರಸಿ ತಾಲ್ಲೂಕಿನ ದಕ್ಷಿಣ ತುದಿಗೆ ಇರುವ ಕಟ್ಟಕಡೆಯ ಹಳ್ಳಿ ದೋರಣಗೇರಿ ಮತ್ತು ಕಕ್ಕಳ್ಳಿಯ ಮಧ್ಯೆ ಇರುವ ಕಾಳಿಮನೆಯ ಮಂಜುನಾಥ ಹೆಗಡೆ ಪ್ರತಿನಿತ್ಯ ವಾನಳ್ಳಿ ಸರ್ಕಾರಿ ಪ್ರೌಢಶಾಲೆಗೆ ಹೋಗಲು ಮಾಡಬೇಕಾದ ಸಾಹಸ.ವಾನಳ್ಳಿಯಿಂದ ಯಲ್ಲಾಪುರಕ್ಕೆ ಹೋಗುವ ಮಾರ್ಗದಲ್ಲಿ `ಪ್ರಜಾವಾಣಿ~ ಪ್ರತಿನಿಧಿ ಎದುರಾದಾಗ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಬಾಲಕ ಹಳ್ಳಿಯ ಜನರು ಪಟ್ಟಣಕ್ಕೆ ಹೋಗಲು, ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪಡುತ್ತಿರುವ ಕಷ್ಟಗಳನ್ನು ಎಳೆಎಳೆಯಾಗಿ ವಿವರಿಸಿದ.`ಮನೆಯಿಂದ ಬೆಳಿಗ್ಗೆ 6.45ಕ್ಕೆ ಹೊರಟರೆ ಶಾಲೆ ತಲುಪುವ ವೇಳೆಗೆ 8.30 ಆಗಿರುತ್ತದೆ. ಮುಖ್ಯರಸ್ತೆ ಸೇರುವುದಕ್ಕೇ 4 ಕಿ.ಮೀ. ನಡೆಯಬೇಕು. ಕಾಡಿನೊಳಗೆ ಹಾದು ಈ ದಾರಿಯಲ್ಲಿ ಬರುವಾಗ ಎಷ್ಟೋ ಸಂದರ್ಭಗಳಲ್ಲಿ ಹುಲಿ, ಸೀಳುನಾಯಿ, ಕರಡಿ, ಕಡವೆ, ಹಂದಿಗಳು ಎದುರಾಗುತ್ತವೆ.ಎಷ್ಟೋ ಸಲ ಅವು ಬೆನ್ನಟ್ಟಿ ನಾನು ತಪ್ಪಿಸಿಕೊಂಡ ಸಂದರ್ಭವೂ ಉಂಟು. ಕೆಲವೊಂದು ಸಂದರ್ಭದಲ್ಲಿ ಜೊತೆಗೆ ಯಾರಾದರೂ ಇರುತ್ತಾರೆ. ಇಲ್ಲದಿದ್ದರೆ ಒಬ್ಬನೇ ಹೋಗುತ್ತೇನೆ~ ಎಂದು ಭಯಾನಕ ಕ್ಷಣಗಳನ್ನು ಮಂಜುನಾಥ ಮೆಲುಕು ಹಾಕುತ್ತಾನೆ.ಮುಖ್ಯರಸ್ತೆ ಸ್ಥಿತಿಯೂ ಭಯಾನಕವಾಗಿದೆ. ಗುಡ್ಡ ಕಡಿದು ರಸ್ತೆ ಮಾಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸದಿರುವುದರಿಂದ ಮಳೆಗಾಲದಲ್ಲಿ ಗುಡ್ಡದಿಂದ ಹರಿಯುವ ನೀರಿನ ರಭಸಕ್ಕೆ ರಸ್ತೆಯ ಡಾಂಬರು ಕಿತ್ತುಹೋಗಿ, ದೊಡ್ಡದೊಡ್ಡ ಗುಂಡಿಗಳು ಬಿದ್ದಿವೆ. ಸೈಕಲ್ ಒತ್ತಟ್ಟಿಗಿರಲಿ ನಡೆಯಲೂ ಆ ರಸ್ತೆ ಯೋಗ್ಯವಾಗಿಲ್ಲ.ಆದರೆ ಕಲಿಯಬೇಕು ಎನ್ನುವ ಛಲದಿಂದ ಈತ ಹರಸಾಹಸದಿಂದ ಶಾಲೆಗೆ ಹೋಗುತ್ತಿದ್ದಾನೆ.

ಶಿರಸಿಯಿಂದ ಕಕ್ಕಳ್ಳಿವರೆಗೆ ಬಸ್ ಸೌಲಭ್ಯ ಇದೆ. ಆದರೆ ಆ ಬಸ್ ನಂಬಿದರೆ ಶಾಲೆಗೆ ಹೋಗಲು ಸಾಧ್ಯವಿಲ್ಲ. ಬಂದರೆ ಬಂತು, ಇಲ್ಲದಿದ್ದರೆ ಇಲ್ಲ.ವಿದ್ಯಾರ್ಥಿಗಳು ಶಾಲೆಯ ಸಮಯಕ್ಕೆ ಸರಿಯಾಗಿ ತಲುಪುವ ಹಾಗೆ ಬಸ್ ವ್ಯವಸ್ಥೆ ಇಲ್ಲ. ಇಲ್ಲಿಗೆ ಬರುವ ಬಸ್‌ಗಳೂ ಹಳೆಯದಾಗಿರುವುದರಿಂದ ಮಾರ್ಗದ ಮಧ್ಯೆ ಕೆಟ್ಟು ನಿಲ್ಲುವುದು ಸಾಮಾನ್ಯ. ಈ ಕಾರಣದಿಂದಾಗಿ ಬಸ್ ಮೇಲೆ ಅವಲಂಬಿತರು ಕಡಿಮೆ. ತುರ್ತು ಸಂದರ್ಭದಲ್ಲಿ ಸ್ವಂತ ಮತ್ತು ಬಾಡಿಗೆ ವಾಹನ ಈ ಹಳ್ಳಿಯ ಜನರಿಗೆ ಆಧಾರ.ವಾನಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾನ್‌ಮಕ್ಕಿ, ಗೌಡನಗದ್ದೆ, ಜುಮ್ಮನಕಾನ್, ಬಿಳಿಪಾನ್, ಗಜನಮನೆ, ತೋಟಿಮನೆ, ಅಸ್ಥಾಳ, ಕಾನ್‌ಬಾಗಿಲು ಮತ್ತು ಶಿರಸಗಾಂವ್ ಹಳ್ಳಿಯ ವಿದ್ಯಾರ್ಥಿಗಳೂ ಹರಸಾಹಸಪಟ್ಟೇ ಶಾಲೆಗೆ ಹೋಗುತ್ತಿದ್ದಾರೆ.`ಕಕ್ಕಳ್ಳಿಯಿಂದ ಕಾಳಿಮನೆವರೆಗೆ ರಸ್ತೆ ಮಾಡಿದರೆ ಸುಮಾರು 10-15 ಮನೆಗಳಿಗೆ ಅನುಕೂಲವಾಗಲಿದೆ. ಚುನಾವಣೆಯ ಸಂದರ್ಭದಲ್ಲಿ ಮತ ಕೇಳಲು ಬಂದ ಜನಪ್ರತಿನಿಧಿಗಳು ಬಂದ ಮನೆಗೇ ಮೂರ‌್ನಾಲ್ಕು ಸಲ ಬರುತ್ತಾರೆ. ಆ ನಂತರ ನಮ್ಮ ಗೋಳು ಕೇಳುವವರು ಯಾರೂ ಇಲ್ಲ. ಬಂದವರೆಲ್ಲೂ ರಸ್ತೆ ಮಾಡಿಕೊಡುವುದಾಗಿ ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಭರವಸೆ ಈಡೇರಿಲ್ಲ~ ಎನ್ನುತ್ತಾರೆ ಈ ಭಾಗದ ಗ್ರಾಮಸ್ಥರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry