ಸೋಮವಾರ, ಡಿಸೆಂಬರ್ 9, 2019
22 °C

ಸರ್ಕಾರಿ ಶಿಕ್ಷಕರೇಕೆ ಹೀಗೆ ?

Published:
Updated:
ಸರ್ಕಾರಿ ಶಿಕ್ಷಕರೇಕೆ ಹೀಗೆ ?

ಮೊನ್ನೆ ಶಿವಮೊಗ್ಗದಿಂದ ಮೈಸೂರಿಗೆ ಹೋಗಲು ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಮುಂದಿನ ಸೀಟಿನಲ್ಲಿದ್ದ ಮಹಿಳೆಯೊಬ್ಬರು ತಮ್ಮ ಪಕ್ಕದಲ್ಲಿದ್ದ ಇನ್ನೊಬ್ಬ ಮಹಿಳೆಯ ಬಳಿ ತಾವು ಸರ್ಕಾರಿ ಶಾಲೆಯ ಶಿಕ್ಷಕಿಯೇ ಎಂದು ಪ್ರಶ್ನಿಸಿದರು. ಅದಕ್ಕೆ ಆಕೆ ‘ಇಲ್ಲಾ ನಾನು ಒಂದು ಖಾಸಗಿ ಕಂಪನಿಯೊಂದರಲ್ಲಿ ಕ್ಲರ್ಕ್ ಆಗಿದ್ದೇನೆ, ಏಕೆ’ ಎಂದು ಕೇಳಿದರು. ಅದಕ್ಕೆ ಆ ಮಹಿಳೆ ‘ಯಾಕಿಲ್ಲ ಸೀರೆಯುಟ್ಟ ನಿಮ್ಮನ್ನು ಶಾಲಾ ಶಿಕ್ಷಕಿಯಂದುಕೊಂಡೆ’ ಎಂದಳು. ನಂತರ ಪುನಃ ಮಾತನಾಡಿದ ಆಕೆ ‘ನಿಮಗೆ ಮಕ್ಕಳೆಷ್ಟು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ’ ಎಂದು ಪ್ರಶ್ನಿಸಿದಳು. ತನ್ನ ಇಬ್ಬರೂ ಮಕ್ಕಳನ್ನು ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದೇನೆಂದು ಈಕೆ ಹೇಳಿದರು. ಅಲ್ಲಿ ಪಾಠ ಹೇಗೆ ಮಾಡುತ್ತಾರೆಂದು ಆಕೆ ವಿಚಾರಿಸಿದಾಗ ತುಂಬಾ ಚೆನ್ನಾಗಿ ಮಾಡುತ್ತಾರೆ ಎಂದ ಆಕೆ, ‘ನೀವೇಕೆ ಈ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ’ ಎಂದು ಕೇಳಿದಾಗ , ಆ ವಿಷಯದ ಬಗ್ಗೆ ತೀರಾ ನೊಂದುಕೊಂಡಂತಿದ್ದ ಈ ಮಹಿಳೆ ಹೇಳಿದ್ದು ಕೇಳಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನಗೆ ತುಂಬಾ ಆಶ್ಚರ್ಯವಾಯಿತು. ಅಷ್ಟಕ್ಕೂ ಆ ಮಹಿಳೆ ಕೊಟ್ಟ ಉತ್ತರ ಇದು.....‘ನಮ್ಮ ಇಬ್ಬರು ಹುಡುಗಿಯರಲ್ಲಿ ಒಬ್ಬಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೇವೆ. ಮತ್ತೊಬ್ಬಳು ಖಾಸಗಿ ಶಾಲೆಯೊಂದರಲ್ಲಿ ಎಲ್‌ಕೆಜಿ ಓದುತ್ತಿದ್ದಾಳೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ನನ್ನ ದೊಡ್ಡ ಮಗಳು ಮೂರನೇ ತರಗತಿಯಲ್ಲಿ ಓದುತ್ತಿದ್ದರೂ, ಖಾಸಗಿ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿರುವ ನನ್ನ 2ನೇ ಮಗಳಷ್ಟೂ ಆಕೆಗೆ ಓದಲು-ಬರೆಯಲು ಬರುವುದಿಲ್ಲ.ಅವರ ಶಾಲಾ ಶಿಕ್ಷಕಿಯನ್ನು ಕೇಳಿದರೆ ನಾವೇನು ಮಾಡುವುದಕ್ಕೆ ಆಗುತ್ತದೆ. ಎಷ್ಟೂಂತ ಹೇಳಿಕೊಡುವುದಕ್ಕಾಗುತ್ತೆ ಅಂದರಂತೆ. ಮುಂದಿನ ವರ್ಷ ಅವಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಯಾವುದಾದರೂ ಸಣ್ಣದಾದರೂ ಸರಿ ಖಾಸಗಿ ಶಾಲೆಗೆ ಸೇರಿಸುತ್ತೇನೆಂದರು ಆಕೆ.ಅವಿದ್ಯಾವಂತರಾದ ನಾವು ನಮ್ಮ ಮಕ್ಕಳಾದರೂ ಚೆನ್ನಾಗಿ ಓದಲೆಂದು ಶಾಲೆಗೆ ಸೇರಿಸಿದರೆ ನನ್ನ ಮಗಳಿಗೆ ಕನ್ನಡ ಕೂಡ ಏನೂ ಬರೆಯಲು, ಓದಲು ಬರುತ್ತಿಲ್ಲ. ಅದಕ್ಕಾಗಿ ಅವಳನ್ನು ಕಷ್ಟವಾದರೂ ಸರಿ ಖಾಸಗಿ ಶಾಲೆಗೆ ಸೇರಿಸುತ್ತೇನೆಂದು ನೊಂದುಕೊಂಡರು.ನಂತರ ಭದ್ರಾವತಿಯಲ್ಲಿ ಆಕೆ ಇಳಿದುಹೋದರು. ಅಲ್ಲಿಂದ ಮುಂದೆ ಮೈಸೂರು ತಲುಪುವವರೆಗೂ ಆ ಮಹಿಳೆ ಹೇಳಿದ್ದನ್ನೇ ಮೆಲುಕು ಹಾಕುತ್ತಿದ್ದ ನನಗೆ  ಅನ್ನಿಸಿದ್ದಿಷ್ಟು.ಇಂದಿನ ದಿನಗಳಲ್ಲಿ ಯಾವೊಬ್ಬ ವಿದ್ಯಾವಂತ ಪೋಷಕರೂ ತಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುವುದನ್ನು ಇಷ್ಟಪಡಲಾರರು.ತಾವೆಷ್ಟೇ ಆರ್ಥಿಕವಾಗಿ ಸಬಲರಾಗಿರಲಿ ಅಥವಾ ದುರ್ಬಲರಾಗಿರಲಿ ತಮ್ಮ ಆದಾಯಕ್ಕೆ ತಕ್ಕಂತೆ ಅಥವಾ ಕೆಲವೊಮ್ಮೆ ಅದನ್ನೂ ಮೀರಿ ತಮಗೆ ಸೂಕ್ತವೆನಿಸುವ ಖಾಸಗಿ ಶಾಲೆಗಳಿಗೇ ಸೇರಿಸುತ್ತಾರೆ. ಪೋಷಕರ ಈ ನಿಲುವಿಗೆ ಕಾರಣಗಳು ಹಲವಾರು. ಅವುಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾದ ತರಬೇತಿ ಇರುವುದಿಲ್ಲವೆನ್ನುವುದೂ ಒಂದು.ಮಕ್ಕಳನ್ನು ಶಾಲೆಯೆಡೆ ಸೆಳೆಯಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ ಮಾತ್ರಕ್ಕೆ, ಚಿಣ್ಣರಿಗೋಸ್ಕರ ಮರಳಿ ಬಾ ಶಾಲೆಗೆ, ಚಿಣ್ಣರ ಯೋಜನೆ, ಸಮುದಾಯದತ್ತ ಶಾಲೆ, ಪ್ರತಿಭಾ ಕಾರಂಜಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿದ ಮಾತ್ರಕ್ಕೆ, ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಉಚಿತ ಬ್ಯಾಗ್‌ಗಳು ಹಾಗೂ ಬಿಸಿಯೂಟ ಯೋಜನೆ ಪ್ರಾರಂಭಿಸಿದ ಮಾತ್ರಕ್ಕೆ ತಕ್ಕಮಟ್ಟಿಗೆ ವಿದ್ಯಾಭ್ಯಾಸ ಮಾಡಿದ ಪೋಷಕರ್ಯಾರೂ ಸರ್ಕಾರ ರೂಪಿಸಿದ ಈ ಯಾವ ಯೋಜನೆಗಳಿಗೂ ಮರುಳಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲಾರರು. ಒಂದೊಮ್ಮೆ ಸೇರಿಸಿದರೂ ಅದು ಕೇವಲ 1 ಅಥವಾ 2 ವರ್ಷ ಮಾತ್ರ. ಮತ್ತೆ ಪುನಃ ಸರ್ಕಾರಿ ಶಾಲೆ ಬಿಡಿಸಿ ಯಾವುದಾದರೂ ತಮ್ಮ ಆದಾಯಕ್ಕೆ ತಕ್ಕ ಖಾಸಗಿ ಶಾಲೆಗೇ ಸೇರಿಸುತ್ತಾರೆ. ಅದಕ್ಕೆ ಮುಖ್ಯ ಕಾರಣ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರುವ ಬಹುತೇಕ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗಿಂತ ಕಲಿಕೆಯಲ್ಲಿ ಹಿಂದುಳಿದಿರುವುದು.ಇದಕ್ಕೇನು ಕಾರಣ? ಇಂದಿನ ಶಿಕ್ಷಕರು ತಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಅವರಿಗೆ ಅರ್ಥವಾಗುವಂತೆ ಪಾಠ ಮಾಡುವುದಾಗಲೀ, ಅಕ್ಷರಗಳನ್ನು ತಪ್ಪಿಲ್ಲದಂತೆ ದುಂಡಾಗಿ ಬರೆಯುವುದನ್ನು ನಿರಂತರ ಅಭ್ಯಾಸ ಮಾಡಿಸುವುದಾಗಲೀ ಮಾಡುತ್ತಿಲ್ಲ.ಕೆಲವು ಮಕ್ಕಳು 1,2,3 ರಿಂದ 5ನೇ ತರಗತಿಯವರೆಗೆ ಉತ್ತೀರ್ಣರಾಗಿ ಬಂದಿದ್ದರೂ ಅವರುಗಳು ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಓದುತ್ತಿರುವ ಮಕ್ಕಳಿಗೆ ಬರೆಸುವ ಸಣ್ಣ ಸಣ್ಣ ಪದಗಳನ್ನು ತಪ್ಪಿಲ್ಲದಂತೆ ಬರೆಯಲಾರರು. ಇನ್ನು ಅಕ್ಷರವಂತೂ ಆ ಶಿಕ್ಷಕರಿಗೆ ಪ್ರೀತಿ. ಅವರೇನು ಹೇಳಿಕೊಡುತ್ತಾರೋ -ಇವರೇನು ಕಲಿಯುತ್ತಾರೋ ಅದು ಸರ್ಕಾರಕ್ಕೆ ಪ್ರೀತಿ.ಕೆಲವು ಶಾಲೆಗಳಲ್ಲಿ ಒಂದೇ ತರಗತಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಮಕ್ಕಳಿರುವುದೂ ಒಂದು ಕಾರಣವೆನ್ನುತ್ತಾರೆ ಶಿಕ್ಷಕರೊಬ್ಬರು.ಆದರೆ ಈ ಮಾತನ್ನು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಸಂಖ್ಯಾಬಲ ಕಡಿಮೆ ಇರುವ ಕೆಲವು ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಪಾಠಗಳೇ ನಡೆಯುತ್ತಿಲ್ಲ ಎಂಬ ದೂರುಗಳೂ ಇವೆ. ಶಾಲೆಯವೇಳಾಪಟ್ಟಿಯಂತೆ ತರಗತಿಗೆ ಬಂದ ಶಿಕ್ಷಕಕಿಯರು ಪಾಠ ಮಾಡುವ ಸಮಯದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಲೋ, ಇಲ್ಲವೇ ತರಗತಿಯಿಂದ ಹೊರಗೆ ಬಂದು ಇನ್ನಿತರರೊಡನೆ ಅನವಶ್ಯಕ ಮಾತನಾಡುತ್ತಲೋ ಕಾಲ ಕಳೆಯುತ್ತಾರೆನ್ನುವುದು ಪೋಷಕರ ಆರೋಪ.ಅಷ್ಟಕ್ಕೂ ಸರ್ಕಾರಿ ಶಾಲೆ ಶಿಕ್ಷಕರೇನೂ ದಡ್ಡರಲ್ಲ ಹಾಗೂ ಖಾಸಗಿ ಶಾಲೆ ಶಿಕ್ಷಕರೇನು ಅತೀ ಜಾಣರಲ್ಲ. ನಿಜಕ್ಕೂ ಹೇಳಬೇಕೆಂದರೆ ಸರ್ಕಾರಿ ಶಿಕ್ಷಕರೇ ಅತೀ ಬುದ್ಧಿವಂತರು. ಏಕೆಂದರೆ ಸರ್ಕಾರಿ ಶಾಲೆ ಶಿಕ್ಷಕರ ಹುದ್ದೆಗಾಗಿ ನಡೆಸುವ ಪರೀಕ್ಷೆಯಲ್ಲಿ ರ್ಯಾಂಕ್ ಬಂದವರು, ಮೆರಿಟ್ ಅಭ್ಯರ್ಥಿಗಳು ಸರ್ಕಾರಿ ಶಿಕ್ಷಕರು, ಉಳಿದವರು ಖಾಸಗಿ ಶಾಲೆ ಶಿಕ್ಷಕರು.

ಸರ್ಕಾರಿ ಶಿಕ್ಷಕರು ಹೆಚ್ಚು ಸಮರ್ಥರು

ಅಂದ ಮೇಲೆ ಸರ್ಕಾರಿ ಶಿಕ್ಷಕರು ಹೆಚ್ಚು ಸಮರ್ಥರು, ಆದರೂ ಹೀಗೇಕೆ? ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳನ್ನು ಪರಿಪೂರ್ಣರಾಗಿಸುವುದು ಸಾಧ್ಯವಿಲ್ಲ ನಿಜ. ಆದರೆ ತಳಪಾಯವೇ ಭದ್ರವಾಗಿಲ್ಲದಿದ್ದರೆ ಮುಂದೆ ಮನೆ ಭದ್ರವಾಗುವುದೆಂತು?

ಹಾಗೇ ಪ್ರಾಥಮಿಕ ಮಟ್ಟದಲ್ಲಿ ಕನಿಷ್ಠ ಕನ್ನಡ ಕಾಗುಣಿತ, ಸರಳ ಗಣಿತ, ಇಂಗ್ಲಿಷ್ ಎಬಿಸಿಡಿ ಹಾಗೂ ಸಣ್ಣ ಪುಟ್ಟ ವಾಕ್ಯಗಳನ್ನು ಉಚ್ಚರಿಸಲಾಗದ ಮಕ್ಕಳು ಮುಂದೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಕಲಿಯುವುದೇನು? ಇಂಥವರಿಗೆ ಉನ್ನತ ಶಿಕ್ಷಣ ಗಗನ ಕುಸುಮವಾಗಲಾರದೆ?ಈ ಮಧ್ಯೆ 1ರಿಂದ 7ನೇ ತರಗತಿಯವರೆಗೆ ಯಾವುದೇ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದೆಂದು ನಿಯಮವಿದೆ. ಇವೆಲ್ಲವುಗಳಿಂದ ಸರಿಯಾಗಿ ವಿದ್ಯೆ ಕಲಿಯದ ಮಕ್ಕಳು ಮುಂದೆ ದೇಶದ ಭವಿಷ್ಯ ಉತ್ತಮಗೊಳಿಸುವ ಪ್ರಜೆಯಾಗುವ ಮಾತೆಲ್ಲಿ?

ಪ್ರಾಥಮಿಕ -ಮಾಧ್ಯಮಿಕ ಮಟ್ಟದಲ್ಲಿ ಸರಿಯಾಗಿ ತಮ್ಮ ಪಠ್ಯಗಳಲ್ಲಿರುವ ಪಾಠಗಳನ್ನೂ ಓದಲು ಬಾರದ ಮಕ್ಕಳು ಪ್ರೌಢಶಾಲೆ ತಲುಪುತ್ತಾರೆ. ಅಲ್ಲಿ ಶುರುವಾಗುತ್ತದೆ ಅಲ್ಲಿನ ಶಿಕ್ಷಕರಿಗೆ ಪೀಕಲಾಟ. ಕಾರಣ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಯ ಶಿಕ್ಷಕರಿಗೆ ಶಿಕ್ಷೆ.ಏನೂ ಓದಲಿಕ್ಕೆ ಬಾರದ, ಹೇಳಿದ್ದನ್ನು ಗ್ರಹಿಸಲಾರದ ವಿದ್ಯಾರ್ಥಿಗಳನ್ನು ಏಕಾಏಕಿ ಪ್ರೌಢಶಾಲಾ ಹಂತದಲ್ಲಿ ಕಡಿಮೆ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಗೆ ತರಬೇತುಗೊಳಿಸುವುದು ಪ್ರೌಢಶಾಲಾ ಶಿಕ್ಷಕರಿಗೆ ಸವಾಲೇ ಸರಿ.ಆದರೆ ಹಿಂದೆ ಸರ್ಕಾರಿ ಶಾಲೆಗಳು ಹೀಗಿರಲಿಲ್ಲ. ಸರ್ಕಾರಿ ಶಾಲಾ ಶಿಕ್ಷಕರೂ ಹೀಗಿರಲಿಲ್ಲ. ಉತ್ತಮ ಶಿಕ್ಷಕರಿದ್ದರು. ಹಾಗೆ ನೋಡಿದರೆ ಆಗ ಸರ್ಕಾರಿ ಶಾಲೆಗಳಿಗೆ ಸರ್ಕಾರ ನೀಡುತ್ತಿದ್ದ ಸವಲತ್ತುಗಳು ಈಗಿನದಕ್ಕೆ ಹೋಲಿಸಿದರೆ ಕಡಿಮೆ ಎಂದೇ ಹೇಳಬೇಕು. ಶಿಕ್ಷಕರಿಗೂ ಅಷ್ಟೆ, ಕಡಿಮೆ ಸಂಬಳವಿತ್ತು.ಆದರೂ ಪ್ರತಿಯೊಬ್ಬ ಶಿಕ್ಷಕರೂ ತಮ್ಮ ಶಾಲಾ ಮಕ್ಕಳನ್ನು  ನೀತಿವಂತ,ಬುದ್ಧಿವಂತರನ್ನಾಗಿ ಮಾಡುವಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದ್ದರು.ಇಂದಿನ ಹಲವಾರು ಸಾಹಿತಿಗಳು, ಸರ್ಕಾರಿ ನೌಕರರು, ಅತ್ಯುನ್ನತ ಹುದ್ದೆಗಳಲ್ಲಿರುವ ಬಹುತೇಕರು ಸರ್ಕಾರಿ ಶಾಲೆಗಳಲ್ಲಿ ಓದಿದವರೇ. ಆದರೆ ಇತ್ತೀಚೆಗೆ ಕೆಲವು ಶಿಕ್ಷಕರ ಉದಾಸೀನದಿಂದಾಗಿ ಹಾಗೂ ಕೆಲವು ಪೋಷಕರ ಪ್ರತಿಷ್ಠೆಗಳಿಂದಾಗಿ ಸರ್ಕಾರಿ ಶಾಲೆಗಳೆಂದರೆ ದಡ್ಡರ ಕೊಂಪೆ ಎಂಬಂತಾಗಿದೆ. ಆದರೆ ಎಲ್ಲಾ ಸರ್ಕಾರಿ ಶಾಲೆಗಳೂ ಹೀಗಿಲ್ಲ. ಈಗಲೂ ಉತ್ತಮ ವಿದ್ಯಾಭ್ಯಾಸ ನೀಡುತ್ತಿರುವ ಶಾಲೆಗಳಿವೆ, ಶಿಕ್ಷಕರೂ ಇದ್ದಾರೆ. ಎಲ್ಲ ಸರ್ಕಾರಿ ಶಾಲಾ ಶಿಕ್ಷಕರು ತಾವು ಕಲಿತ ವಿದ್ಯೆಯನ್ನು ನಿರ್ವಂಚನೆಯಿಂದ ತಮ್ಮ ಶಿಷ್ಯರಿಗೆ ಧಾರೆಯೆರೆದರೆ, ಸರ್ಕಾರಿ ಶಾಲಾ ಮಕ್ಕಳನ್ನೂ ಬುದ್ಧಿವಂತರನ್ನಾಗಿ ಮಾಡಿ ಆ ಮೂಲಕ ದೇಶದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಕಾರಣಕರ್ತರಾದರೆ ಬಹುಶಃ ಪೋಷಕರೂ ಕೂಡ ತಮ್ಮ ಪ್ರತಿಷ್ಠೆ ಬದಿಗಿಟ್ಟು ಸರ್ಕಾರಿ ಶಾಲೆಗಳೆಡೆಗೆ ಮನಸ್ಸು ಮಾಡಿಯಾರು!

ಪ್ರತಿಕ್ರಿಯಿಸಿ (+)