ಸರ್ಕಾರಿ ಶಿಕ್ಷಕರ ಟ್ಯೂಟೋರಿಯಲ್ ತಡೆಗೆ ಒತ್ತಾಯ

7

ಸರ್ಕಾರಿ ಶಿಕ್ಷಕರ ಟ್ಯೂಟೋರಿಯಲ್ ತಡೆಗೆ ಒತ್ತಾಯ

Published:
Updated:

ಹಟ್ಟಿ ಚಿನ್ನದ ಗಣಿ:  ಪಕ್ಕದ ಮಾನವಿ ತಾಲ್ಲೂಕಿನ ಚಿಂಚರಕಿ ಹಾಗೂ ಲಿಂಗಸಗೂರು ತಾಲ್ಲೂಕಿನ ವಂದಲಿ ಹೊಸೂರು  ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕದ್ವಯರು ಹಟ್ಟಿಯಲ್ಲಿ ಟ್ಯೂಟೋರಿಯಲ್ ನಡೆಸುತ್ತಿದ್ದಾರೆ. ಕ್ರಮ ಜರುಗಿಸುವಂತೆ ಒತ್ತಾಯಿಸಿ ಎಂದು ಸ್ಥಳೀಯ ಕರ್ನಾಟಕ ರಕ್ಷಣ ವೇದಿಕೆ(ಪ್ರವೀಣ ಶೆಟ್ಟಿ ಬಣ) ರಾಯಚೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ದೂರು ಸಲ್ಲಿಸಿದೆ.ಸರ್ಕಾರಿ ಶಾಲೆಯ ಶಿಕ್ಷಕರು ಖಾಸಗಿಯಾಗಿ ಟ್ಯೂಶನ್ ತರಗತಿಗಳು ನಡೆಸ ಬಾರದೆಂಬ ನಿಯಮ ಇದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಸರ್ಕಾರದ ಈ ಯೋಜನೆಗಳನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಈ ಶಿಕ್ಷಕರದ್ದಾಗಿದೆ.

 

ಆದರೆ ಮಾನವಿ ತಾಲ್ಲೂಕಿನ ಚಿಂಚರಕಿ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಚಂದ್ರಬಾಬು ಹಾಗೂ ಲಿಂಗಸಗೂರು ತಾಲ್ಲೂಕಿನ ವಂದಲಿ ಹೊಸೂರು ಶಾಲೆಯ ಶಿಕ್ಷಕ ರವಿ ಕುಮಾರ ಇಲಾಖೆಯ ನಿಯಮವನ್ನು ಉಲ್ಲಂಘಿಸಿ ಹಟ್ಟಿಯ ಖಾಸಗಿ ಶಾಲೆಯೊಂದರ ಕೊಠಡಿಗಳಲ್ಲಿ ಬೇರೆ ಬೇರೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಟ್ಯೂಶನ್ ತರಗತಿ ನಡೆಸುತ್ತಿದ್ದಾರೆ. ಈ ಮಕ್ಕಳಿಂದ ಪ್ರತಿ ತಿಂಗಳು 200 ರೂಪಾಯಿ ಬೋಧನಾ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಈ ರೀತಿಯಾಗಿ ಸರ್ಕಾರಕ್ಕೆ ದ್ರೋಹ ಮಾಡುತ್ತಿರುವ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಕರವೇ ಮುಖಂಡರು ಜಿಲ್ಲಾ ಮತ್ತು ತಾಲ್ಲೂಕು ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry