ಸೋಮವಾರ, ಜೂನ್ 14, 2021
27 °C

ಸರ್ಕಾರಿ ಶಿಕ್ಷಣ ದುರ್ಬಲಕ್ಕೆ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: `ಸರ್ಕಾರಿ ಶಿಕ್ಷಣವನ್ನು ದುರ್ಬಲಗೊಳಿಸಲು ರಾಜ್ಯದಲ್ಲಿ ವ್ಯವಸ್ಥಿತ ಖಾಸಗಿ ಸಂಸ್ಥೆಗಳ ಹುನ್ನಾರ, ಷಡ್ಯಂತ್ರ ನಡೆದಿದೆ~ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಬಸವರಾಜ ಗುರಿಕಾರ ಆರೋಪ ಮಾಡಿದರು.ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಬಾಲಕಿಯರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲ್ಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟದಿಂದ ಕೂಡಿರಲಿ ಎಂಬ ಕಾರಣಕ್ಕೆ ತಮ್ಮ ಸಂಘದಿಂದ ಶಿಕ್ಷಣ ಸಬಲೀಕರಣಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗಿದೆ ಎಂದರು.ರಾಜ್ಯದಲ್ಲಿ ಒಟ್ಟು ಎರಡು ಲಕ್ಷ ಶಿಕ್ಷಕರಿದ್ದು, ಕೇವಲ 19 ಸಾವಿರ ಮುಖ್ಯಗುರುಗಳಿದ್ದಾರೆ. 340 ಶಿಕ್ಷಣ ಸಮನ್ವಯ ಅಧಿಕಾರಿಗಳಿದ್ದಾರೆ. ಈ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಬೇಕಿದೆ ಎಂದು ಗುರಿಕಾರ ವಿವರಿಸಿದರು. ಈ ಹಿಂದಿನ ಯಾವ ಸರ್ಕಾರ, ಮುಖ್ಯಮಂತ್ರಿಗಳು ಮಾಡದ ಕೆಲಸವನ್ನು ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಿದ್ದಾರೆ. ರೂ, 6800 ಇದ್ದ ಶಿಕ್ಷಕರ ಮೂಲ ವೇತನವನ್ನು ರೂ, 13,500ಕ್ಕೆ ಏರಿಸಿದ ಕೀರ್ತಿ ಮಾಜಿ ಸಿ.ಎಂ.ಗೆ ಸಲ್ಲುತ್ತದೆ ಎಂದು ಗುಣಗಾನ ಮಾಡಿದರು.ಶಿಕ್ಷಕರ ಸಮಸ್ಯೆ ಅರಿತು ನಮ್ಮ ಸಂಘ ಕಳೆದ ವರ್ಷ ಸರ್ಕಾರಕ್ಕೆ 19 ಬೇಡಿಕೆ ಇಟ್ಟಿತ್ತು. ಅವುಗಳಲ್ಲಿ ಪರಿಹಾರ ಬೋಧನೆ, ಕ್ಲಸ್ಟರ್ ಹಂತ ರದ್ದು, ಬೇರೆ ಜಿಲ್ಲೆಯಿಂದ ವರ್ಗವಾಗಿ ಬಂದವರಿಗೆ ಆರ್ಥಿಕ ಯೋಜನೆ, ಸಂಯುಕ್ತ ಶಾಲಾ ವ್ಯವಸ್ಥೆ ರದ್ದಿನಂತ ಹಲವು ಮುಖ್ಯ ಬೇಡಿಕೆ ಇದ್ದವು ಎಂದರು.ಈಗಿರುವ ನಿವೃತ್ತಿ ವೇತನದ ವಿಧಾನ `ಸಿಎಫ್‌ಸಿ~ (ಕಾಂಟ್ರಿಬ್ಯೂಟರಿ ಫೆನ್ಷನ್ ಸ್ಕೀಮ್) ಕೈಬಿಡಬೇಕು. ಶಿಕ್ಷಕ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡುವ ಈ ಯೋಜನೆಯಿಂದ ಸರ್ಕಾರಕ್ಕೂ ಶೋಭೆ ತರುವಂತದ್ದಲ್ಲ ಎಂದು ಗುರಿಕಾರ ಆಗ್ರಹಿಸಿದರು. ಕಾರ್ಯಕ್ರಮು ಉದ್ಘಾಟಿಸಿದ ಸಂಸದ ಎಸ್. ಶಿವರಾಮನಗೌಡ, ಅಧ್ಯಕ್ಷತೆ ವಹಿಸಿದ್ದ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ, ಶಿಕ್ಷಕರ ತಾಲ್ಲೂಕು ಸಂಘದ ಅಧ್ಯಕ್ಷ ಶರಣೇಗೌಡ ಪೊ.ಪಾ ಮಾತನಾಡಿದರು.

 

`ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣದ ಪಾತ್ರ~ದ ಬಗ್ಗೆ ಬಿಜಾಪುರ-ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮಿ, `ಶಿಕ್ಷಣದಲ್ಲಿ ಸಾರ್ವತ್ರಿಕರಣದ ಹೊಸ ಸವಾಲು~ ಎಂಬ ವಿಷಯದ ಮೇಲೆ ಡಾ. ಪ್ರಶಾಂತ ಉಪನ್ಯಾಸ ನೀಡಿದರು. ಕೊಟ್ಟೂರು ಸ್ವಾಮೀಜಿ, ಚೈತನ್ಯಾನಂದ ಸ್ವಾಮಿ ಸಾನಿಧ್ಯ ವಹಿಸಿದ್ದರು. ವೆಂಕಟೇಶ ತಂಗಡಗಿ, ಹೇಮಾವತಿ ಲಂಕೇಶ, ವಿ.ಎಂ. ನಾರಾಯಣ ಸ್ವಾಮಿ, ಮಂಟೇಲಿಂಗಾಚಾರ ಡಿ.ಬಿ. ನೀರಲಕೇರಿ ಇತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.