ಸರ್ಕಾರಿ ಸೌಧದಲ್ಲಿ ಕಡತಗಳ ರಾಶಿ

7
ಅಧಿಕಾರಿಗಳಿಗೆ ತಲೆನೋವಾದ ವಿಲೇವಾರಿ

ಸರ್ಕಾರಿ ಸೌಧದಲ್ಲಿ ಕಡತಗಳ ರಾಶಿ

Published:
Updated:

ಬೆಂಗಳೂರು: ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಈಗ ಕಡತಗಳ ಸಮಸ್ಯೆ ಆರಂಭವಾಗಿದೆ. ರಾಶಿ ರಾಶಿಯಾಗಿ ಬಿದ್ದಿರುವ ಕಡತಗಳು ಕೆಲವು ಇಲಾಖೆಗಳ ಮುಖ್ಯಸ್ಥರ ಪಾಲಿಗೆ ತಲೆನೋವಾಗಿ ಪರಿಣಮಿಸಿವೆ.ಸರ್ಕಾರಿ ಕಡತಗಳ ಸಂರಕ್ಷಣೆಯ ಹೊಣೆಗಾರಿಕೆ ಹೊಂದಿರುವ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಸ್ಥಳಾವಕಾಶದ ಕೊರತೆಯ ಸಮಸ್ಯೆ ಎದುರಾಗಿದೆ. ಈ ಕಾರಣಕ್ಕಾಗಿ `ಸಿ' ವರ್ಗದ ಕಡತಗಳನ್ನು ಇಲಾಖೆಯು ಸಂಬಂಧಿಸಿದ ಇಲಾಖೆಗಳಿಗೆ ವಾಪಸು ಕಳಿಸುತ್ತಿದೆ, ಪರಿಣಾಮವಾಗಿ ಹಲವು ಇಲಾಖೆಗಳು ಇಕ್ಕಟ್ಟಿಗೆ ಸಿಲುಕಿವೆ.ಮುಕ್ತಾಯಗೊಳಿಸಿದ ಕಡತಗಳು ಮತ್ತೆ ಅದೇ ಇಲಾಖೆಗಳಿಗೆ ಹಿಂದಿರುಗಿ ಬರುತ್ತಿವೆ. ಇದರಿಂದಾಗಿ ವಿವಿಧ ಇಲಾಖೆಗಳಲ್ಲಿ ಹಳೆಯ ಕಡತಗಳ ರಾಶಿ ಬೆಳೆಯುತ್ತಲೇ ಇದೆ. ಭೂದಾಖಲೆಗಳು ಸೇರಿದಂತೆ ಪ್ರಮುಖ ಕಡತಗಳು ನಾಪತ್ತೆಯಾಗುವ ಆತಂಕವೂ ಎದುರಾಗಿದೆ.ಸರ್ಕಾರದ ಕಡತಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಕಡತಗಳು ಮುಕ್ತಾಯಗೊಂಡ ಬಳಿಕ ಅವುಗಳನ್ನು ಪತ್ರಾಗಾರ ಇಲಾಖೆಗೆ ರವಾನಿಸಲಾಗುತ್ತದೆ. `ಎ' (ಇವು ಐತಿಹಾಸಿಕ ಕಡತಗಳು) ವರ್ಗದ ಕಡತಗಳನ್ನು ಶಾಶ್ವತವಾಗಿ ಸಂರಕ್ಷಿಸಲಾಗುತ್ತದೆ. `ಬಿ' ವರ್ಗದ ಕಡತಗಳನ್ನು 30 ವರ್ಷಗಳವರೆಗೆ ಸಂರಕ್ಷಿಸಿ ಇಡಲಾಗುತ್ತದೆ. `ಸಿ' ವರ್ಗದ ಕಡತಗಳನ್ನು ಹತ್ತು ವರ್ಷಗಳವರೆಗೆ ರಕ್ಷಿಸಿ ಇಡಲಾಗುವುದು.ರಾಜ್ಯ ಸರ್ಕಾರದಲ್ಲಿ 34 ಇಲಾಖೆಗಳಿವೆ. ಪ್ರತಿ ಇಲಾಖೆಯೂ ಹಲವು ವಿಭಾಗಗಳನ್ನು ಹೊಂದಿರುತ್ತದೆ. ಪ್ರತಿ ಇಲಾಖೆಯಲ್ಲೂ ವರ್ಷಕ್ಕೆ ಸುಮಾರು 1,000 ಕಡತಗಳು ಸೃಷ್ಟಿಯಾಗುತ್ತವೆ. ಮುಕ್ತಾಯಗೊಂಡ ಕಡತಗಳನ್ನು ಸಂರಕ್ಷಿಸಿ ಇಡುವುದು ಆಯಾ ಇಲಾಖೆಗಳ ಮುಖ್ಯಸ್ಥರ ಜವಾಬ್ದಾರಿಯಲ್ಲ ಎನ್ನುತ್ತವೆ ಮೂಲಗಳು.ಎಲ್ಲ ಇಲಾಖೆಗಳೂ `ಸಿ' ವರ್ಗದ ಕಡತಗಳ ಪ್ರಾಮುಖ್ಯ ಕುರಿತು     ಆಗಾಗ ಪರಿಶೀಲನೆ ನಡೆಸಬೇಕು. ಅವುಗಳಲ್ಲಿ ಹೆಚ್ಚು ಮಹತ್ವದ ಕಡತಗಳನ್ನು `ಬಿ' ವರ್ಗಕ್ಕೆ ಸೇರಿಸುವಂತೆ ಶಿಫಾರಸು ಮಾಡಬೇಕು. ಉಳಿದ ಕಡತಗಳನ್ನು ನಾಶ ಮಾಡಲು ಕ್ರಮ ಕೈಗೊಳ್ಳಬೇಕಾಗುತ್ತದೆ.`ಸಿ' ವರ್ಗದ ಕಡತಗಳನ್ನು ಹತ್ತು ವರ್ಷಗಳ ಕಾಲ ಸಂರಕ್ಷಿಸಿ ಇಡುವ ನಿರ್ಧಾರವನ್ನು ರಾಜ್ಯ ಸರ್ಕಾರ 2007ರಲ್ಲಿ ಕೈಗೊಂಡಿತು. ಬಳಿಕ ಈ ವರ್ಗದ ಕಡತಗಳ ಸಂಖ್ಯೆ ದುಪ್ಪಟ್ಟಾಗಿದೆ. ಅಂದಾಜಿನ ಪ್ರಕಾರ ಈಗ ಆರು ಲಕ್ಷ `ಸಿ' ವರ್ಗದ ಕಡತಗಳು, ಐದು ಲಕ್ಷದಷ್ಟು `ಬಿ' ವರ್ಗದ ಕಡತಗಳು ಮತ್ತು ಎರಡು ಲಕ್ಷದಷ್ಟು `ಎ' ವರ್ಗದ ಕಡತಗಳು ಇವೆ.ಅವುಗಳ ಜೊತೆಯಲ್ಲೇ ಐತಿಹಾಸಿಕ ಮಹತ್ವವುಳ್ಳ ಸುಮಾರು 17 ಲಕ್ಷ ದಾಖಲೆಗಳನ್ನು ವಿಧಾನಸೌಧ ಮತ್ತು ವಿಕಾಸಸೌಧಗಳ ತಳಮಹಡಿಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಕಡತಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಅವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎನ್ನುತ್ತವೆ ಮೂಲಗಳು.ರಾಜ್ಯ ಪತ್ರಾಗಾರ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿದೆ. ಡಿಸೆಂಬರ್ 6ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಿ.ಬಸವರಾಜು, `ಸಿ' ವರ್ಗದ ಕಡತಗಳನ್ನು ಮತ್ತೊಮ್ಮೆ ಪರಿಶೀಲಿಸಿ ಮಹತ್ವವಿಲ್ಲದ ಕಡತಗಳನ್ನು ವಿಲೇವಾರಿ ಮಾಡುವಂತೆ ಎಲ್ಲ ಇಲಾಖೆಗಳಿಗೂ ನಿರ್ದೇಶನ ನೀಡಲು ಕೋರಿದ್ದಾರೆ. ಸ್ಥಳಾವಕಾಶದ ಕೊರತೆಯ ಕಾರಣದಿಂದ ಕಡತಗಳನ್ನು ಸ್ವೀಕರಿಸಿ, ಹಿಂಬರಹ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಪತ್ರದಲ್ಲಿ ವಿವರಿಸಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿದ ಬಸವರಾಜು, `ಕಡತಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ನಾವು ಸಮಸ್ಯೆ ಎದುರಿಸುತ್ತಿದ್ದೇವೆ. ಅದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಗಮನಕ್ಕೆ ತರಲಾಗಿದೆ. ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬಹುದು ಎಂಬ ವಿಶ್ವಾಸವಿದೆ' ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry