ಸರ್ಕಾರಿ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ?

7

ಸರ್ಕಾರಿ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ?

Published:
Updated:

ಬೆಂಗಳೂರು: ಪಿಂಚಣಿ, ವೃದ್ಧಾಪ್ಯ, ವಿಧವಾ ವೇತನ, ವಿದ್ಯಾರ್ಥಿ ವೇತನ, ಅಂಗವಿಕಲರ ವೇತನ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯ ಕೂಲಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಇನ್ನು ಮುಂದೆ `ಆಧಾರ್~ ಕಡ್ಡಾಯ ಮಾಡುವ ಉದ್ದೇಶ ಸರ್ಕಾರಕ್ಕಿದೆ.ರಾಜ್ಯದಲ್ಲಿ `ಆಧಾರ್~ ಗುರುತಿನ ಚೀಟಿಯ ಎರಡನೇ ಹಂತದ ನೋಂದಣಿಗೆ ನವೆಂಬರ್ ಮೊದಲ ವಾರದಲ್ಲಿ ಚಾಲನೆ ನೀಡಲು ಸಿದ್ಧತೆಗಳು ನಡೆದಿವೆ. ಇದರ ಬೆನ್ನಿಗೇ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಗುರುತಿನ ಚೀಟಿಯನ್ನು ಕಡ್ಡಾಯ ಮಾಡಲು ಚಿಂತಿಸಲಾಗುತ್ತಿದೆ ಎಂದು ಇ-ಆಡಳಿತ ಇಲಾಖೆಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಮತ್ತು ಇ- ಆಡಳಿತ ಇಲಾಖೆ ಆಧಾರ್ ನೋಂದಣಿಗೆ ಬೇಕಾದ ಸಿದ್ಧತೆಯಲ್ಲಿ ತೊಡಗಿವೆ. ಮುಂದಿನ ತಿಂಗಳ ಮೊದಲ ವಾರ 22 ಜಿಲ್ಲೆಗಳಲ್ಲಿ ನೋಂದಣಿ ಕಾರ್ಯ ಆರಂಭವಾಗಲಿದೆ ಎಂದು ಪ್ರಾಧಿಕಾರದ ಉಪ ಮಹಾನಿರ್ದೇಶಕ ಅಶೋಕ ದಳವಾಯಿ ತಿಳಿಸಿದರು.ಇ- ಆಡಳಿತ ಇಲಾಖೆ ಈಗಾಗಲೇ ಟೆಂಡರ್ ಮೂಲಕ ಜಿಲ್ಲಾ ಮಟ್ಟದ ಏಜೆನ್ಸಿಗಳನ್ನು ಗುರುತಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅಧ್ಯಕ್ಷತೆಯಲ್ಲಿ ಇದೇ 17ರಂದು ನಡೆಯುವ ಆಧಾರ್ ಅನುಷ್ಠಾನ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದು ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ವಿವರಿಸಿದರು.ಈ ಬಾರಿ ಹೊಸ ಸಾಫ್ಟ್‌ವೇರ್ ಸಿದ್ಧಪಡಿಸಲಾಗಿದೆ. ದಿನಕ್ಕೆ ಹತ್ತು ಲಕ್ಷ ಜನರ ನೋಂದಣಿಗೆ ಅವಕಾಶವಿದೆ. ಪ್ರತಿಯೊಂದು ಜಿಲ್ಲೆಗೂ ಪ್ರತ್ಯೇಕ ಏಜೆನ್ಸಿಗಳನ್ನು ಗುರುತಿಸಲಾಗಿದೆ. ಗುಣಮಟ್ಟ ಹಾಗೂ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಮಾಹಿತಿ ಗೋಪ್ಯವಾಗಿ ಇಡಲಾಗುತ್ತದೆ. ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು  ಸ್ಪಷ್ಟಪಡಿಸಿದರು.ಪ್ರಾಯೋಗಿಕವಾಗಿ ಈ ಯೋಜನೆಯನ್ನು ಮೊದಲು ಮೈಸೂರು, ತುಮಕೂರು ಜಿಲ್ಲೆಯಲ್ಲಿ ಆರಂಭಿಸಲಾಗಿತ್ತು. ಮೈಸೂರಿನಲ್ಲಿ ಶೇ 95ರಷ್ಟು, ತುಮಕೂರಿನಲ್ಲಿ ಶೇ 93ರಷ್ಟು ನೋಂದಣಿ ಕಾರ್ಯ ಪೂರ್ಣಗೊಂಡಿದೆ. ರಾಜ್ಯದಲ್ಲಿ ಇದುವರೆಗೆ 1.24 ಕೋಟಿ ಆಧಾರ್ ಕಾರ್ಡುಗಳನ್ನು ವಿತರಿಸಲಾಗಿದೆ. ನೋಂದಣಿ ಮಾಡಿಸಿದ ಸುಮಾರು 11 ಲಕ್ಷ ಜನರಿಗೆ ಶೀಘ್ರ ವಿತರಿಸಲಾಗುವುದು ಎಂದರು.ಇ - ಆಡಳಿತ ಇಲಾಖೆ 22 ಜಿಲ್ಲೆಗಳಲ್ಲಿ ಏಜೆನ್ಸಿಗಳ ಮೂಲಕ ನೋಂದಣಿ ಕಾರ್ಯದಲ್ಲಿ ತೊಡಗಲಿದೆ. ಆರು ಜಿಲ್ಲೆಗಳಲ್ಲಿ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದವರು ನೋಂದಣಿ ಮಾಡಿಸಲಿದ್ದಾರೆ. ಎರಡು ಜಿಲ್ಲೆಗಳನ್ನು ಮೊದಲ ಹಂತದಲ್ಲೇ ತೆಗೆದುಕೊಳ್ಳಲಾಗಿತ್ತು. ಈಗ ಆರಂಭಿಸುತ್ತಿರುವ ಎರಡನೇ ಹಂತದ ನೋಂದಣಿ ಕಾರ್ಯ ಒಂದು ವರ್ಷಕ್ಕೂ ಮೊದಲೇ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಮೊದಲಿಗೆ ಜಿಲ್ಲಾ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ. ಬಳಿಕ ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ. ಅಲ್ಲದೆ ಸಂಬಂಧಪಟ್ಟ ಏಜೆನ್ಸಿಯ ಪ್ರತಿನಿಧಿಗಳು ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ನೋಂದಣಿ ಮಾಡಿಸಲಿದ್ದಾರೆ. ಆಯಾ ನಗರ, ಪಟ್ಟಣಗಳ ಜನಸಂಖ್ಯೆ ಆಧರಿಸಿ ನೋಂದಣಿ ಕೇಂದ್ರಗಳ ಸಂಖ್ಯೆಯನ್ನು ಏಜೆನ್ಸಿಗಳು ನಿರ್ಧರಿಸಲಿವೆ ಎಂದು ಅವರು ತಿಳಿಸಿದರು.ಐಚ್ಛಿಕ: ಆಧಾರ್ ನೋಂದಣಿ ಕಡ್ಡಾಯವಲ್ಲ, ಇದು ಐಚ್ಛಿಕ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅದೇ ರೀತಿ ಆಧಾರ್ ನೋಂದಣಿ ಸಂದರ್ಭದಲ್ಲಿ ಬ್ಯಾಂಕ್ ಖಾತೆಯ ಸಂಖ್ಯೆ ನೀಡುವುದು ಕಡ್ಡಾಯವಲ್ಲ. ಸಾರ್ವಜನಿಕರಿಗೆ ಇಷ್ಟವಿದ್ದರೆ ಕೊಡಬಹುದು, ಒತ್ತಾಯ ಮಾಡುವುದಿಲ್ಲ ಎಂದು ದಳವಾಯಿ ಹೇಳಿದರು.`ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಗುರುತಿನ ಚೀಟಿ ಮೂಲಕ ವಿಶಿಷ್ಟ ಸಂಖ್ಯೆಯೊಂದನ್ನು ನೀಡುವುದು ಈ ಯೋಜನೆಯ ಗುರಿ. ಅದೇ ರೀತಿ ಸರ್ಕಾರದ ಎಲ್ಲ ಸೌಲಭ್ಯಗಳು `ಆಧಾರ್~ ಮೂಲಕವೇ ತಲುಪಬೇಕು ಎಂಬ ಆಶಯವನ್ನು ಕೇಂದ್ರ ಸರ್ಕಾರ ಹೊಂದಿದೆ. ಆದರೆ ಇದನ್ನು ಕಡ್ಡಾಯ ಮಾಡುವುದು, ಬಿಡುವುದು ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳ ವಿವೇಚನೆಗೆ ಬಿಟ್ಟ ವಿಷಯ~ ಎಂದರು. ನೋಂದಣಿ ಸಂದರ್ಭದಲ್ಲಿ ಹೆಸರು, ವಿಳಾಸ, ಜನ್ಮದಿನಾಂಕ, ಲಿಂಗ ಇತ್ಯಾದಿ ಮಾಹಿತಿ ನೀಡಬೇಕಾಗುತ್ತದೆ.

 

ಬ್ಯಾಂಕ್ ಖಾತೆಯ ಸಂಖ್ಯೆ ನೀಡಿದರೆ ಸರ್ಕಾರದ ವಿವಿಧ ಸೌಲಭ್ಯಗಳಡಿ ದೊರೆಯುವ ನೆರವನ್ನು ವರ್ಗಾಯಿಸಲು ಅನುಕೂಲವಾಗುತ್ತದೆ. ವಿದ್ಯಾರ್ಥಿ ವೇತನ, ಪಿಂಚಣಿ, ವೃದ್ಧಾಪ್ಯ ವೇತನ ಇತ್ಯಾದಿಗಳನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಲು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೈಸೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ವಿತರಣೆಯನ್ನು ಪ್ರಾಯೋಗಿಕವಾಗಿ ಆಧಾರ್‌ಗೆ ಜೋಡಣೆ ಮಾಡಿದೆ. ಮುಂದೆ ಇದೇ ರೀತಿ ಬೇರೆ ಸಂಸ್ಥೆ, ಕಂಪೆನಿಗಳು ಮಾಡಬಹುದಾಗಿದೆ ಎಂದರು.ಮೂರು ತಿಂಗಳು: ನೋಂದಣಿ ಮಾಡಿಸಿದ 90 ದಿನಗಳ ನಂತರ ಆಧಾರ್ ಕಾರ್ಡ್ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ನೋಂದಣಿಗಾಗಿ ಕಾಯಂ ಕೇಂದ್ರಗಳನ್ನು ತೆರೆಯಲಾಗುತ್ತದೆ. ವಿಳಾಸ ಬದಲಾವಣೆಯಾದರೆ, ಮುಂಚೆ ನೀಡಿರುವ ಮಾಹಿತಿಯಲ್ಲಿ ಏನಾದರೂ ಬದಲಾವಣೆ ಇದ್ದರೆ, ಹೆಸರು ಬಿಟ್ಟು ಹೋಗಿದ್ದರೆ ಆ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಸಬಹುದು ಎಂದು ತಿಳಿಸಿದರು.ಕಣ್ಣುಗಳೇ ಪಾಸ್‌ವರ್ಡ್ ಆದಾಗ...

ನ್ಯೂಯಾರ್ಕ್ (ಪಿಟಿಐ): ಕಣ್ಣು ಮಿಟುಕಿಸಿದರೆ ಸಾಕು.. ಕಂಪ್ಯೂಟರ್ ಕಾರ್ಯನಿರ್ವಹಣೆಗೆ ಸಿದ್ಧವಾಗುತ್ತದೆ..!

ಕಣ್ಣು ಮಿಟುಕಿಸಿದರೆ ಸಾಕು, ಕಚೇರಿಯ ಬಾಗಿಲು ತೆರೆದುಕೊಳ್ಳುತ್ತದೆ... ಹೀಗೆ ಪಾಸ್‌ವರ್ಡ್‌ನಿಂದ ಬೀಗ ಹಾಕಿರುವ ಗಣಕೀಕೃತ ವ್ಯವಸ್ಥೆಗಳೆಲ್ಲಾ ದೃಷ್ಟಿ ಆಧಾರಿತವಾಗಿ ಚಾಲನೆಯಾಗುತ್ತವೆ...!ಇದೇನಿದು ಯಕ್ಷಿಣಿ ಎಂದಿರಾ ? ಖಂಡಿತಾ ಅಲ್ಲ, ಸ್ಯಾನ್ ಮಾರ್ಕೊದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿರುವ ಕಂಪ್ಯೂಟರ್ ವಿಜ್ಞಾನಿ ಒಲೇಗ ಕೊಮೊಗೊರ್ಟೆಸೆವ್ ಎಂಬವರು `ಕಣ್ಣಿನ ಸಂಜ್ಞೆ~ಯನ್ನು ಪಾಸ್‌ವರ್ಡ್ ಆಗಿ ಉಪಯೋಗಿಸುವ ಹೊಸ ಬಯೋಮೆಟ್ರಿಕ್ ವಿಧಾನವೊಂದನ್ನು ಆವಿಷ್ಕರಿಸುತ್ತಿದ್ದಾರೆ. ಈ ಆವಿಷ್ಕಾರಕ್ಕೆ ಪ್ರೇರಣೆಯಾಗಿರುವುದು ಭಾರತದಲ್ಲಿ `ಆಧಾರ್~ (ವಿಶೇಷ ಗುರುತಿನ ಸಂಖ್ಯೆ-ಯುಐಡಿ) ನೀಡುವಾಗ ವ್ಯಕ್ತಿಗಳ ಕಣ್ಣನ್ನು ಸ್ಕಾನ್ ಮಾಡಿದ್ದರಲ್ಲಾ, ಆ ವಿಧಾನ...!`ಜಗತ್ತನ್ನು ಇಬ್ಬರು ವ್ಯಕ್ತಿಗಳು ಒಂದೇ ದೃಷ್ಟಿಯಲ್ಲಿ ನೋಡುವುದು ಅಸಾಧ್ಯ~. ಇದೇ ಸಿದ್ಧಾಂತ ಮೇಲೆ `ದೃಷ್ಟಿ ಪಾಸ್‌ವರ್ಡ್~ ಬಯೋಮೆಟ್ರಿಕ್ ಆವಿಷ್ಕರಿಸಲು ಈ ವಿಜ್ಞಾನಿ ಮುಂದಾಗಿದ್ದಾರೆ.ಒಬ್ಬರು ಒಂದು ಚಿತ್ರವನ್ನು ಒಂದು ದೃಷ್ಟಿಕೋನದಿಂದ ನೋಡುತ್ತಿದ್ದರೆ, ಮತ್ತೊಬ್ಬರು ತನ್ನ ಆಸಕ್ತಿಗೆ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ದೃಷ್ಟಿ ಬದಲಾಯಿಸುತ್ತಾನೆ~ ಎಂದು ಸಂಶೋಧಕರು ತಾವು ಗುರುತಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ.ಒಂದು ಪಕ್ಷ ಇಬ್ಬರು ವ್ಯಕ್ತಿಗಳು ಒಂದೇ ದೃಷ್ಟಿಕೋನದಲ್ಲಿ ನೋಡಿದ್ದರೂ, ದೃಷ್ಟಿ ಮಾತ್ರ ಬೇರೆ ಬೇರೆ ಆಗಿರುತ್ತದೆ ಎಂದು ಸಂಶೋಧನೆ ಕುರಿತು `ಲೈವ್‌ಸೈನ್ಸ್~ನಲ್ಲಿ ಪ್ರಕಟಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. `ನಾವು ಈಗಾಗಲೇ ಇಂಥ ಹಲವು ವ್ಯತ್ಯಾಸಗಳನ್ನು ಗಮನಿಸಿದ್ದೇವೆ. ಹಾಗಾಗಿ ಇದೊಂದು ಹೊಸ ಬಯೋಮೆಟ್ರಿಕ್ ವಿಧಾನ ಎಂದು ಎನಿಸುತ್ತಿದೆ~ ಎಂದು ಕೊಮೊಗೊರ್ಟೆಸೆವ್ `ಟೆಕ್ ನ್ಯೂಸ್~ ಡೇಲಿ ಪತ್ರಿಕೆಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry