ಶುಕ್ರವಾರ, ನವೆಂಬರ್ 22, 2019
27 °C

ಸರ್ಕಾರಿ ಸೌಲಭ್ಯ ಪಡೆಯಲು ಗ್ರಾಮೀಣ ದಲಿತರಿಗೆ ಸಲಹೆ

Published:
Updated:

ಕೂಡಲಸಂಗಮ: ದಲಿತರಿಗೆ ಸರ್ಕಾರ ನೀಡಿರುವ ಸೌಲಭ್ಯಗಳನ್ನು ನಗರ ಪ್ರದೇಶದಲ್ಲಿರುವ ದಲಿತರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ದಲಿತರು ಈ ಸೌಲಭ್ಯ ಪಡೆಯುವಲ್ಲಿ ಬಹುತೇಕ ವಿಫಲರಾಗಿದ್ದಾರೆ. ಮಠಾಧೀಶರು ಗ್ರಾಮೀಣ ಭಾಗದಲ್ಲಿರುವ ದಲಿತರಲ್ಲಿ ಕ್ರೀಯಾಶೀಲತೆಯನ್ನು ಬೆಳೆಸುವಂತಹ ಕಾರ್ಯವನ್ನು ಮಾಡಬೇಕು ಎಂದು ಎಂದು ಕೂಡಲಸಂಗಮ ಸಾರಂಗಮಠದ ಅಭಿನವ ಜಾತವೇದಮುನಿ ಶಿವಾ ಚಾರ್ಯ ಸ್ವಾಮೀಜಿ ಹೇಳಿದರು.ಅವರು ಕೂಡಲಸಂಗಮದ ಅಂಬೇಡ್ಕರ್ ಕಾಲೊನಿಯಲ್ಲಿ ಜೈ ಭೀಮ್ ಯುವಕ ಸಂಘದ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 122ನೇ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿಯ ದಲಿತರು ಸರಕಾರ ನೀಡುವ ಸೌಲಭ್ಯ ಪಡೆಯುವುದರ ಮೂಲಕ ಉನ್ನತ ಮಟ್ಟದ ಜೀವನ ರೂಪಿಸಿಕೊಳ್ಳಬಹುದು. ಇದರಿಂದ ಅವರ ಜೀವನ ಮಟ್ಟ ಸುಧಾರಣೆ ಹೊಂದುತ್ತದೆ. ಅಂಬೇಡ್ಕರ್ ಅವರು ನಡೆಸಿದ ಹೋರಾಟದ ಫಲವಾಗಿ ದಲಿತರು ಸೌಲಭ್ಯ ಪಡೆದಿದ್ದಾರೆ. ಅದು ಎಲ್ಲರನ್ನು ತಲುಪಬೇಕು ಎಂದು ಹೇಳಿದರು.ದಲಿತರು  ಶಿಕ್ಷಣ ಪಡೆಯಬೇಕು. ಸಮರ್ಪಕ ಶಿಕ್ಷಣದಿಂದ ಉತ್ತಮ ವ್ಯಕ್ತಿತ  ರೂಪಿಸಿಕೊಳ್ಳಬೇಕು ಎಂದರು. ಹಿರಿಯ ಮುಖಂಡ ವೀರಣ್ಣ ಶಿವಯೋಗಿ ಮಾತನಾಡಿ ಸಂಘಟನೆ, ಹೋರಾಟಕ್ಕಿಂತ ಶಿಕ್ಷಣ ಪಡೆಯಿರಿ. ಶಿಕ್ಷಣದಿಂದ ಜೀವನಮಟ್ಟ ಅಭಿವೃದ್ಧಿಯಾಗುವುದು. ಇಂದು ಬಹುತೇಕ ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವಂತಹ ಕಾರ್ಯಮಾಡುತ್ತಿಲ್ಲ ಎಂದರು.ರಾಜ್ಯ ಲೆಕ್ಕಪತ್ರ ಇಲಾಖೆಯ ಎ.ಎಂ. ಅತ್ತಾರ ಮಾತನಾಡಿ ಕಷ್ಟದ ಜೀವನದ ನಡುವೆ ಅಂಬೇಡ್ಕರ್ ಅವರು ಮಾಡಿದ ಸಾಧನೆ ಅದ್ಭುತವಾದುದು.  ಅವರು ಭಾರತಕ್ಕೆ ನೀಡಿದ ಸಂವಿಧಾನ ವಿಶೇಷವಾದುದು. ಸಂಪ್ರದಾಯಿಕ ಸಮಾಜದ ಜಾತಿ ಪದ್ಧತಿಯನ್ನು ಮುರಿಯುವಲ್ಲಿ, ದಲಿತರ ಪ್ರಗತಿಗೆ ಶಿಕ್ಷಣ, ಸಂಘಟನೆ, ಹೋರಾಟದ ಮಾರ್ಗ ಪ್ರಚುರ ಪಡಿಸಿದ ಅವರ ಬದುಕು ತೆರೆದಿಟ್ಟ ಪುಸ್ತಕ  ಎಂದರು.ಸಮಾರಂಭದಲ್ಲಿ ವಕೀಲ ಕೆ.ಬಸಣ್ಣ, ನಿವೃತ್ತ ಶಿಕ್ಷಕ ಪಿ.ಆರ್.ಪಾಟೀಲ, ಬಿ.ಎಸ್.ಗೌಡರ, ಜಿ.ಜಿ.ಬಾಗೇವಾಡಿ, ಗಿರೀಶಗೌಡ ಪಾಟೀಲ,ಅಶೋಕ ಹಂಡ್ರಗಲ್, ಶಿವಕುಮಾರ ಕಾನಾಳ, ಶರಣಪ್ಪ ಗಾಣಗೇರ, ಎಲ್.ಪಿ.ನಾಯಕ, ಅಶೋಕ ವಾಲಿಕಾರ,ಬಸವರಾಜ ಗೌಡರ, ಸಿದ್ದು ಸಾರಂಗಮಠ, ಲಕ್ಷ್ಮಣ ಮೂಲಿಮನಿ, ಸಿದ್ದು ತುರಡಗಿ, ಪರಶುರಾಮ ದೊಡಮನಿ, ಸಂಗಪ್ಪ ಚಲವಾದಿ, ಹನಮಂತ ತಳವಾರ, ಬಸವರಾಜ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)