ಸರ್ಕಾರಿ ಸೌಲಭ್ಯ ಸದ್ಬಳಕೆ ಅಗತ್ಯ: ಮಲ್ಲಿಕಾ

7

ಸರ್ಕಾರಿ ಸೌಲಭ್ಯ ಸದ್ಬಳಕೆ ಅಗತ್ಯ: ಮಲ್ಲಿಕಾ

Published:
Updated:

ಪುತ್ತೂರು: `ಬೃಹತ್ ಪಟ್ಟಣಗಳು ಅಭಿವೃದ್ಧಿ ಹೊಂದಿದ ಮಾತ್ರಕ್ಕೆ ದೇಶದ ಅಭಿವೃದ್ಧಿ ಆಗುವುದಿಲ್ಲ. ಸರ್ಕಾರಿ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪುವುದರೊಂದಿಗೆ ಸದ್ಬಳಕೆಯಾದರೆ ಮಾತ್ರ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಾಣಲು ಸಾಧ್ಯ' ಎಂದು ಶಾಸಕಿ ಮಲ್ಲಿಕಾ ಪ್ರಸಾದ್ ಹೇಳಿದರು.ಕೇಂದ್ರ ವಾರ್ತಾ ಇಲಾಖೆಯ ವತಿಯಿಂದ ಪುತ್ತೂರಿನ ಪುರಭವನದಲ್ಲಿ ಮಂಗಳವಾರ ಸಂಜೆ ಆರಂಭಗೊಂಡು ಮೂರು ದಿನಗಳ ಕಾಲ ನಡೆಯಲಿರುವ `ಭಾರತ್ ನಿರ್ಮಾಣ' ಸಾರ್ವಜನಿಕ ಮಾಹಿತಿ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ಅಧಿಕಾರಿಗಳ ದುರ್ನಡತೆಯಿಂದಾಗಿ ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಲಭ್ಯಗಳು ಲಭಿಸುತ್ತಿಲ್ಲ' ಎಂದ ಅವರು, `ರಾಜಕೀಯ ರಹಿತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ಜನತೆಗೆ ತಲುಪಿಸುವ ಕೆಲಸವಾಗಬೇಕು' ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ  ಶಶಿಪ್ರಭಾ ಸಂಪ್ಯ ಉದ್ಘಾಟಿಸಿದರು. ಯೋಜನೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಕ್ರಮ ಎಂದು ಶ್ಲಾಘಿಸಿದರು.ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್. ವಿಜಯ ಪ್ರಕಾಶ್ ಮಾತನಾಡಿ, ಪ್ರತಿಯೊಂದು ಯೋಜನೆಯ ಪೂರ್ಣ ಪ್ರಮಾಣದ ಸವಲತ್ತುಗಳು ಮಧ್ಯವರ್ತಿಗಳಿಲ್ಲದೆ ಕಟ್ಟಕಡೆಯ ಫಲಾನುಭವಿಗಳಿಗೆ ತಲುಪುವಂತಾಗಬೇಕು.  ಫಲಾನುಭವಿಗಳು ಅಲೆದಾಡುವ ಸಂಸ್ಕೃತಿಯಿಂದ ವಿಮುಕ್ತಿ ಪಡೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸಬೇಕು' ಎಂದರು.ಪುರಸಭಾ ಅಧ್ಯಕ್ಷೆ ಕಮಲಾ ಆನಂದ್, ಜಿಲ್ಲಾಧಿಕಾರಿ ಎನ್ .ಪ್ರಕಾಶ್ ಮಾತನಾಡಿದರು.

ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ಎಂ.ನಾಗೇಂದ್ರ ಸ್ವಾಮಿ ಮಾತನಾಡಿ, `ಭಾರತ್ ನಿರ್ಮಾಣದ ಕುರಿತು ಮಾಹಿತಿ ನೀಡಿದರು. `ಯೋಜನೆಗಳು ಬಹಳಷ್ಟಿದ್ದರೂ ಜನತೆಗೆ ಸರಿಯಾದ ಪ್ರಮಾಣದಲ್ಲಿ ಯೋಜನೆಗಳು ತಲುಪಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ. ಇದು ವಿಪರ್ಯಾಸ' ಎಂದ ಅವರು, `ಭ್ರಷ್ಟಾಚಾರ, ಬೇಜವಾಬ್ದಾರಿತನ  ಮತ್ತು ಮಾಹಿತಿಯ ಕೊರತೆಯೇ ಇದಕ್ಕೆ ಕಾರಣ' ಎಂದರು.ವಾರ್ತಾ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಸ್.ವೆಂಕಟೇಶ್ವರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬಾಬು ಮಾದೋಡಿ, ಪುರಸಭಾ ಉಪಾಧ್ಯಕ್ಷ ವಿನಯ ಭಂಡಾರಿ, ಪುತ್ತೂರು ಉಪವಿಭಾಗಾಧಿಕಾರಿ ಎಚ್.ಪ್ರಸನ್ನ, ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳಾದ ಎನ್.ಡಿ.ಪ್ರಸಾದ್, ಜಿತು ನಿಡ್ಲೆ ಮತ್ತಿತರರು ಇದ್ದರು.ವಸ್ತು ಪ್ರದರ್ಶನ: ವಸ್ತು ಪ್ರದರ್ಶನದಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭಾರತೀಯ ದೂರ ಸಂಪರ್ಕ ನಿಗಮ ಹಾಗೂ ಜಲಾನಯನ ಅಭಿವೃದ್ದಿ ಇಲಾಖೆಗಳ ಮಳಿಗೆಗಳಿದ್ದವು.ಇಲ್ಲಿ ಭಿತ್ತಿ ಪತ್ರ ಹಾಗೂ ದೃಶ್ಯ ಆಧಾರಿತ ಪ್ರದರ್ಶನದ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಲಾಗುತ್ತಿತ್ತು. ಭಾರತ ಸರ್ಕಾರದ ಕ್ಷೇತ್ರ ಪ್ರದರ್ಶನ ಕಾರ್ಯಾಲಯದ ಜಾಹೀರಾತು ಮತ್ತು ಪ್ರಚಾರ ನಿರ್ದೇಶನಾಲಯ ಬೆಂಗಳೂರು ಇವರಿಂದ ಸರ್ಕಾರಿ ಯೋಜನೆಗಳ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಸ್ತು ಪ್ರದರ್ಶನ ಮಳಿಗೆಯಲ್ಲಿದ್ದ ಪುತ್ತೂರು ತಾಲ್ಲೂಕಿನ ಮಿತ್ತಡ್ಕ  ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ತಯಾರಿಸಿದ ಪರಿಸರ ಸ್ನೇಹಿ ನೀರು ಮೇಲೆತ್ತುವ ಯಂತ್ರ ನೋಡುಗರ ಗಮನ ಸೆಳೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry