ಗುರುವಾರ , ಮೇ 26, 2022
30 °C

ಸರ್ಕಾರಿ ಹಣದಲ್ಲಿ ಬಿಜೆಪಿ ಜಾತ್ರೆ: ಮಟಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನ ಬಿಜೆಪಿ ಪಕ್ಷದ ಸಾಧನಾ ಸಮಾವೇಶವಾಗುತ್ತಿದೆ. ಬ್ಯಾನರ್‌ಗಳಲ್ಲಿ ನಾಡಿಗಾಗಿ ದುಡಿದವರಿಗಿಂತ ಮುಖ್ಯಮಂತ್ರಿಗಳದ್ದೇ ದೊಡ್ಡ ಭಾವಚಿತ್ರ ಹಾಕಲಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಜೆಡಿ (ಎಸ್) ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಟಗಾರ ಆಗ್ರಹಿಸಿದರು. ಸಮ್ಮೇಳನಕ್ಕೆ ಎಂಟು ದಿನ ಬಾಕಿ ಇದ್ದರೂ ಪಾಲ್ಗೊಳ್ಳುವ ಗಣ್ಯರ ಪಟ್ಟಿ ಅಂತಿಮವಾಗಿಲ್ಲ. ಸಮ್ಮೇಳನ ನಡೆಸಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದರೆ, ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.‘ಸಮಿತಿಗಳಲ್ಲಿಯೂ ನಾಡಿಗಾಗಿ ಹೋರಾಡಿದ ಧೀಮಂತರನ್ನು ದೂರವಿಡಲಾಗಿದೆ. ಜೆಡಿ(ಎಸ್) ಹಾಗೂ ಕಾಂಗ್ರೆಸ್‌ನವರನ್ನು ದೂರವಿಟ್ಟು, ಸರ್ಕಾರಿ ಹಣದಲ್ಲಿ ಬಿಜೆಪಿ ಜಾತ್ರೆಯನ್ನಾಗಿ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು. ‘ಸಮ್ಮೇಳನ ಪ್ರಚಾರಾರ್ಥ ಹೊರಡಿಸಿರುವ ಫಲಕಗಳಲ್ಲಿಯೂ ಜಿಲ್ಲೆಯ ಕನ್ನಡ ಹೋರಾಟಗಾರರನ್ನು ಕಡೆಗಣಿಸಲಾಗಿದೆ. ಅವರ ಭಾವಚಿತ್ರಗಳನ್ನು ಫಲಕಗಳಲ್ಲಿ ಬಳಸಿಕೊಳ್ಳಬೇಕು ಹಾಗೂ ಅವರಿಗೆ ಆಹ್ವಾನ ನೀಡಬೇಕು’ ಎಂದು ಅವರು ಆಗ್ರಹಿಸಿದರು.‘ಕನ್ನಡಕ್ಕಾಗಿ ಹೋರಾಟ ಮಾಡಿದವರ ಮೇಲೆ ಹಲವು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಬೇಕು. ಇಲ್ಲದಿದ್ದರೆ ಪಕ್ಷದ ವಿರೋಧ ಎದುರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು. ‘ಬೆಳಗಾವಿಯಲ್ಲಿ ಸಮ್ಮೇಳನ ಆಯೋಜನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದರು. ಆದರೆ ಅದನ್ನು ತನ್ನ ಪಕ್ಷದ ಸಾಧನೆ ಎಂಬಂತೆ ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಭೂಹಗರಣದ ಗಮನವನ್ನು ಬೇರೆಡೆಗೆ ಸೆಳೆಯಲು ತರಾತುರಿಯಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ’ ಎಂದು ಅವರು ದೂರಿದರು.‘ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯಬೇಕು ಎಂದು ಫಜಲ್ ಅಲಿ ಆಯೋಗದ ಮುಂದೆ ವಾದ ಮಾಡಿದ ಮುಸ್ಲಿಂ ಕುಟುಂಬಗಳಾದ ಮಾಡಿವಾಲೆ, ಇನಾಮದಾರ, ಮುಜಾವರ, ಖತೀಬ ಮುಂತಾದ ಕುಟುಂಬಗಳನ್ನು ನಿರ್ಲಕ್ಷಿಸಿ, ಸಮ್ಮೇಳನ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ’ ಎಂದು ಅವರು ಪ್ರಶ್ನಿಸಿದರು.‘ಸಮ್ಮೇಳನ ನೆಪದಲ್ಲಿ ಡಬ್ಬಾ ಅಂಗಡಿಗಳ ತೆರವಿನಲ್ಲಿಯೂ ರಾಜಕೀಯ ಮಾಡಲಾಗುತ್ತಿದೆ. ಸ್ವಾರ್ಥ ಸಾಧನೆಗಾಗಿ ಸಾವಿರಾರು ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಲಾಗುತ್ತಿದೆ’ ಎಂದು ಅವರು ಟೀಕಿಸಿದರು. ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ವಿಜಯಕುಮಾರ ಇನಾಮದಾರ, ಫೈಜುಲ್ಲಾ ಮಾಡಿವಾಲೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.