ಸರ್ಕಾರೇತರ ಸಂಸ್ಥೆಗಳಿಗೆ ಕಡಿವಾಣ ಹಾಕಿ

7

ಸರ್ಕಾರೇತರ ಸಂಸ್ಥೆಗಳಿಗೆ ಕಡಿವಾಣ ಹಾಕಿ

Published:
Updated:

ಶಿವಮೊಗ್ಗ: ಬಿಸಿಯೂಟ ಯೋಜನೆಯಲ್ಲಿ ಸರ್ಕಾರೇತರ ಸಂಸ್ಥೆಗಳು  ಮೂಗು ತೂರಿಸುವುದಕ್ಕೆ ಅವಕಾಶ ನೀಡದೆ, ಈಗಾಗಲೇ ಬಿಸಿಯೂಟ ತಯಾರಿಕೆಯಲ್ಲಿ ತೊಡಗಿರುವ ಎನ್‌ಜಿಓಗಳಿಂದ ಯೋಜನೆ ಹಿಂಪಡೆಯುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಶಾಸಕ ವೈ.ಎಸ್.ವಿ.ದತ್ತ ಆಗ್ರಹಿಸಿದರು.ನಗರದ ಸಂತ ಥಾಮಸ್ ಸಮುದಾಯ ಭವನದಲ್ಲಿ ಭಾನುವಾರ ಸಿಐಟಿಯು ಹಮ್ಮಿಕೊಂಡಿರುವ ಮೂರು ದಿನಗಳ `ಅಕ್ಷರ ದಾಸೋಹ ನೌಕರರ 3ನೇ ರಾಜ್ಯ ಸಮ್ಮೇಳನ'ದಲ್ಲಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡಲು ಅಧಿಕಾರಿ ವರ್ಗವಿದೆ. ವ್ಯವಸ್ಥೆ ಬೇರು ಮಟ್ಟದವರೆಗೂ ಉತ್ತಮವಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಜನರಿಗೆ ಯೋಜನೆ ರೂಪದಲ್ಲಿ ವಿತರಿಸಲು ಎನ್‌ಜಿಓಗಳ ಅವಶ್ಯಕತೆ ಇಲ್ಲ. ಎನ್‌ಜಿಒಗಳಿಂದ ಕೆಳಸ್ತರದವರೆಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವೂ ಇಲ್ಲ.ಆದ್ದರಿಂದ ಕೂಡಲೇ ಖಾಸಗೀಕರಣ ಪ್ರಕ್ರಿಯೆ ಬಗ್ಗೆ ಆಲೋಚನೆ ಬಿಟ್ಟು, ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಸರ್ಕಾರ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಅವರು ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸದೇ ಇರುವ ನಿರ್ಧಾರ ಪ್ರಕಟಿಸಬೇಕು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಈ ಸಮ್ಮೇಳನದಲ್ಲಿ ವ್ಯಕ್ತವಾಗಿರುವ ವಿಚಾರಗಳಿಗೆ ಪೂರಕ ಮಾಹಿತಿಯನ್ನು ಉನ್ನತ ಅಧಿಕಾರಿಗಳಿಂದ ಪಡೆದು, ಸಚಿವ ಸಂಪುಟದಲ್ಲಿ ಚರ್ಚಿಸಬೇಕು ಎಂದು ಆಗ್ರಹಿಸಿದರು.ಅಕ್ಷರ ದಾಸೋಹ ಯೋಜನೆ ಜಾರಿ ಆಗಿ 12 ವರ್ಷಗಳು ಕಳೆದಿವೆ. ಇದಕ್ಕಾಗಿ ಸರ್ಕಾರ ಇದೂವರೆಗೆ ಸುಮಾರು ರೂ. 1ಸಾವಿರ ಕೋಟಿ ಹಣ ವೆಚ್ಚ ಮಾಡಿದೆ. ಆದರೆ, ಪ್ರತಿ ಮಗುವಿಗೆ ತಗಲಿರುವ ವೆಚ್ಚ ಮತ್ತು ಬಿಸಿಯೂಟ ತಯಾರಕರಿಗೆ ನೀಡಿರುವ ವೇತನ ಇವೆರೆಡರ ಮೊತ್ತಕ್ಕೂ, ಖರ್ಚಾಗಿರುವ ರೂ, 1ಸಾವಿರ ಕೋಟಿ ಹಣಕ್ಕೂ ಲೆಕ್ಕದಲ್ಲಿ ಹೆಚ್ಚಿನ ವ್ಯತ್ಯಾಸವಿದೆ. ಯೋಜನೆಯ ಸಿಂಹಪಾಲು ಹಣ ಖಾಸಗಿಯವರ ಜೇಬು ಸೇರಿದೆ. ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದರು.ಮಾಜಿಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಕಾಂಗ್ರೆಸ್ ಖಾಸಗೀಕರಣದ ಜನಕ ಪಕ್ಷವಾದರೆ, ಬಿಜೆಪಿ ಖಾಸಗೀಕರಣದ ಪೋಷಕ ಪಕ್ಷ ಎಂದು ಲೇವಡಿ ಮಾಡಿದರು. ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಅಕ್ಷರ ದಾಸೋಹ ನೌಕರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಸಮಾಲೋಚನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಸಿಪಿಐ ರಾಜ್ಯ ಸಮಿತಿ ಕಾರ್ಯದರ್ಶಿ ವಿ.ಲೋಕೇಶ್, ಅಕ್ಷರ ದಾಸೋಹ ನೌಕರರ ಸಂಘಟನೆ ಅಖಿಲ ಭಾರತ ಮುಖ್ಯಸ್ಥೆ ಎ.ಆರ್.ಸಿಂಧು, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಮತ್ತಿತರರು ಉಪಸ್ಥಿತರಿದ್ದರು.ಇಸ್ಕಾನ್: ಇಲ್ಲಿ ಅಕ್ಷಯ ಪಾತ್ರೆ; ಅಲ್ಲಿ ಭಿಕ್ಷಾ ಪಾತ್ರೆ!

ಇಸ್ಕಾನ್ ಸಂಸ್ಥೆಯ ಸ್ವರೂಪವೇ ಗೊತ್ತಾಗುತ್ತಿಲ್ಲ. ಅದೊಂದು ಧಾರ್ಮಿಕ ಸಂಸ್ಥೆಯೇ ? ಸಾಮಾಜಿಕ ಸಂಸ್ಥೆಯೇ ? ಅಥವಾ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವ ಸಂಸ್ಥೆಯೇ ? ಯಾವುದೂ ತಿಳಿಯುತ್ತಿಲ್ಲ. ಅಕ್ಷಯ ಪಾತ್ರೆ ಹೆಸರಿನಲ್ಲಿ ಬಿಸಿಯೂಟ ತಯಾರಿಸುತ್ತಿರುವ ಇಸ್ಕಾನ್, ವಿದೇಶದಲ್ಲಿ ಭಾರತೀಯ ಮಕ್ಕಳನ್ನು ಬಡವರಂತೆ ಚಿತ್ರಿಸಿರುವ ಚಿತ್ರಗಳನ್ನು ತೋರಿಸಿ ದೇಣಿಗೆ ಬೇಡುತ್ತಿದೆ. ಇದಕ್ಕೆ ಸರ್ಕಾರದ ಅನುಮತಿಯನ್ನೂ ಪಡೆದಿಲ್ಲ. ಆ ಹಣವನ್ನು ಉತ್ತಮ ಉದ್ದೇಶಳಿಗೆ ಬಳಸುತ್ತಲೂ ಇಲ್ಲ ಎಂದು ಶಾಸಕ ದತ್ತ ಆಕ್ರೋಶ ವ್ಯಕ್ತಪಡಿಸಿದರು.  ಇಂತಹ ಸಂಸ್ಥೆಗೆ ಬಿಸಿಯೂಟ ಯೋಜನೆ ನೀಡಬೇಕೆ ಎಂದು ಪ್ರಶ್ನಿಸಿದ ಅವರು, `ಇಸ್ಕಾನ್  ಸಂಸ್ಥೆಯದ್ದು ಇಲ್ಲಿ ಅಕ್ಷಯ ಪಾತ್ರೆ, ಅಲ್ಲಿ ಭಿಕ್ಷಾ ಪಾತ್ರೆ ಸ್ಥಿತಿ' ಎಂದು ವ್ಯಂಗ್ಯ ಮಾಡಿದರು.ಅಡುಗೆಯಲ್ಲಿ ಇಲ್ಲ ಈರುಳ್ಳಿ,ಬೆಳ್ಳುಳ್ಳಿ!

ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆ ಮಾಡಲು ಬಿಸಿಯೂಟ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಇಸ್ಕಾನ್ ಮತ್ತು ಇತರ ಎನ್‌ಜಿಒಗಳು ತಯಾರಿಸುವ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನೇ ಬಳಸುವುದಿಲ್ಲ ಎಂದು ದೂರಿದರು.ಇತ್ತೀಚೆಗೆ ಸರ್ಕಾರ ಅನುಷ್ಠಾನಕ್ಕೆ ತಂದ `ಕ್ಷೀರಭಾಗ್ಯ' ಯೋಜನೆಯನ್ನು ರಾಜ್ಯದಲ್ಲಿ ಬಿಸಿಯೂಟ ನೀಡುತ್ತಿರುವ ಸುಮಾರು 90ಕ್ಕೂ ಹೆಚ್ಚು ಎನ್‌ಜಿಓಗಳು 1ತಿಂಗಳು ತಡವಾಗಿ ಜಾರಿಗೆ ತಂದವು. ಕಾರ್ಯನಿರ್ವಹಣೆಯಲ್ಲಿ ಎನ್‌ಜಿಒಗಳು ಉತ್ತಮ ಗುಣಮಟ್ಟ ಹೊಂದಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry