ಸರ್ಕಾರ ಒಪ್ಪಿದರೆ ಸರ್ಕಾರಿ ವಾಹಿನಿ ಸ್ಥಾಪನೆ - ಕೆ.ಜಿ. ಬೋಪಯ್ಯ

7

ಸರ್ಕಾರ ಒಪ್ಪಿದರೆ ಸರ್ಕಾರಿ ವಾಹಿನಿ ಸ್ಥಾಪನೆ - ಕೆ.ಜಿ. ಬೋಪಯ್ಯ

Published:
Updated:

ಬೆಂಗಳೂರು: `ರಾಜ್ಯ ಸರ್ಕಾರ ಒಪ್ಪಿದರೆ ಲೋಕಸಭೆ ಮಾದರಿಯಲ್ಲಿ ರಾಜ್ಯ ವಿಧಾನಸಭೆ ಮತ್ತು ಪರಿಷತ್ತಿನ ಕಾರ್ಯಕಲಾಪಗಳನ್ನೂ ಸರ್ಕಾರಿ ವಾಹಿನಿ (ಚಾನೆಲ್) ಮೂಲಕವೇ ಪ್ರಸಾರ ಮಾಡಲಾಗುವುದು~ ಎಂದು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಬುಧವಾರ ಇಲ್ಲಿ ತಿಳಿಸಿದರು.`ನಾಲ್ಕೈದು ವರ್ಷಗಳ ಹಿಂದೆಯೇ ಈ ರೀತಿಯ ವ್ಯವಸ್ಥೆ ಜಾರಿಗೆ ಲೋಕಸಭೆ ಸಚಿವಾಲಯ ದೇಶದ ಎಲ್ಲ ರಾಜ್ಯಗಳಿಗೂ ಪತ್ರ ಬರೆದು ಸಲಹೆ ಮಾಡಿತ್ತು. ಅದರ ಆಧಾರದ ಮೇಲೆಯೇ ರಾಜ್ಯ ವಿಧಾನ ಮಂಡಲದ ಸಚಿವಾಲಯ ಸಮಿತಿಯನ್ನೂ ರಚಿಸಿತ್ತು. ಈ ಸಮಿತಿ ಕೊಟ್ಟಿರುವ ವರದಿ ಪ್ರಕಾರ ಪ್ರತ್ಯೇಕ ಚಾನೆಲ್ ಸ್ಥಾಪನೆಗೆ 25 ಕೋಟಿ ರೂಪಾಯಿ ಬೇಕಾಗುತ್ತದೆ. ಇದನ್ನು ಸರ್ಕಾರ ಕೊಡಲು ಒಪ್ಪಿದರೆ ಅದು ಜಾರಿಗೆ ಬರುತ್ತದೆ. ಇಲ್ಲದಿದ್ದರೆ, ಖಾಸಗಿ ಚಾನೆಲ್‌ಗಳಿಗೂ ಪ್ರವೇಶ ಅವಕಾಶ ಇರುವ ಈಗಿನ ವ್ಯವಸ್ಥೆಯೇ ಮುಂದುವರಿಯಲಿದೆ~ ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು.`ಸದನದಲ್ಲಿ ಬ್ಲೂಫಿಲಂ ನೋಡಿದ ಪ್ರಕರಣ ಬೆಳಕಿಗೆ ಬಂದ ಕಾರಣಕ್ಕೆ ಖಾಸಗಿ ಚಾನೆಲ್‌ಗಳಿಗೆ ನಿರ್ಬಂಧ ಹೇರಲಾಗುತ್ತಿದೆ ಎನ್ನುವುದು ಸುಳ್ಳು. ಈ ರೀತಿಯ ಪ್ರಸ್ತಾವ ನಾಲ್ಕೈದು ವರ್ಷಗಳಿಂದಲೇ ಇದ್ದು, ಅದರ ಜಾರಿಗೆ ಸರ್ಕಾರ ಮುಂದಾದರೆ ಅದನ್ನು ಸಹಜವಾಗಿಯೇ ಒಪ್ಪಬೇಕಾಗುತ್ತದೆ~ ಎಂದು ಅವರು ಹೇಳಿದರು.ನಿಯಮ ಬದಲಿಗೆ ಕ್ರಮ: ವಿಧಾನಮಂಡಲದ ಅಧಿವೇಶನ ನಡೆಸುವ ಸಂಬಂಧ ರೂಪಿಸಿಕೊಂಡಿರುವ ನಿಯಮಾವಳಿಗಳನ್ನು ಬದಲಿಸುವ ಅಗತ್ಯ ಇದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಲು ಸಮಿತಿಯನ್ನೂ ರಚಿಸಲಾಗಿದೆ. ಹಲವು ವರ್ಷಗಳ ಹಿಂದೆಯೇ ಸಮಿತಿ ರಚಿಸಿದ್ದರೂ ನಿಯಮಗಳನ್ನು ಬದಲಿಸುವ ಕೆಲಸ ಇನ್ನೂ ಆಗಿಲ್ಲ. ಈಗ ಅದಕ್ಕೆ ಸ್ವಲ್ಪ ಚುರುಕು ಮುಟ್ಟಿಸಲಾಗುವುದು ಎಂದು ಹೇಳಿದರು.`ಇತ್ತೀಚಿನ ಎಲ್ಲ ವಿದ್ಯಮಾನಗಳನ್ನೂ ಗಮನದಲ್ಲಿ ಇಟ್ಟುಕೊಂಡು ಕೆಲವು ಕಟ್ಟುಪಾಡುಗಳನ್ನು ಹಾಕಿಕೊಳ್ಳಬೇಕಾಗಿದೆ. ತಾಂತ್ರಿಕವಾಗಿಯೂ ಬಹಳಷ್ಟು ಸುಧಾರಣೆಯಾಗಿದ್ದು, ಅವೆಲ್ಲಕ್ಕೂ ಹೊಂದಿಕೊಳ್ಳುವ ಹಾಗೆ ನಿಯಮಗಳನ್ನು ರೂಪಿಸಬೇಕಾಗಿದೆ. ಹಳೇ ನಿಯಮಗಳನ್ನೇ ಇಟ್ಟುಕೊಂಡು ಸದನ ನಡೆಸುವುದು ಕಷ್ಟ~ ಎಂದರು.ಸಾಮರ್ಥ್ಯ ಹೆಚ್ಚಳ: 2ಜಿ ಮತ್ತು 3ಜಿ ತರಂಗಾಂತರ ವ್ಯವಸ್ಥೆ ಜಾರಿಯಾದ ನಂತರ ವಿಧಾನಸಭೆಯಲ್ಲಿ ಅಳವಡಿಸಿರುವ `ಜಾಮರ್~ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಜಾಮರ್ ಇದ್ದರೂ ಮೊಬೈಲ್ ಫೋನ್‌ಗಳು ಸದ್ದು ಮಾಡುತ್ತಿವೆ. ಹೀಗಾಗಿ ಜಾಮರ್‌ನ ಸಾಮರ್ಥ್ಯ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಕುರಿತ ಕಡತಕ್ಕೂ ಸಹಿ ಮಾಡಲಾಗಿದೆ ಎಂದರು.ಬ್ಲೂಫಿಲಂ ಪ್ರಕರಣ: ಬ್ಲೂ ಫಿಲಂ ಪ್ರಕರಣ ಕುರಿತ ತಮ್ಮ ನೋಟಿಸ್‌ಗೆ ಉತ್ತರ ನೀಡಲು ಮೂವರು ಶಾಸಕರಿಗೂ ಗುರುವಾರದವರೆಗೆ ಸಮಯಾವಕಾಶ ನೀಡಲಾಗಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ವಿವರಣೆ ನೀಡದಿದ್ದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು.ಈ ಪ್ರಕರಣ ಕುರಿತು ತನಿಖೆ ಮಾಡಲು ಸದನದ ವಿಚಾರಣಾ ಸಮಿತಿಯನ್ನು ಗುರುವಾರ ರಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬ್ಲೂಫಿಲಂ ಪ್ರಕರಣ ಕುರಿತು ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.`ಬ್ಲೂ ಫಿಲಂ~ ವಿವಾದ : 27ಕ್ಕೆ ವಿಚಾರಣೆ


ಸದನದಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದ ವಿವಾದದಲ್ಲಿ ಸಿಲುಕಿರುವ ಮಾಜಿ ಸಚಿವರಾದ ಲಕ್ಷ್ಮಣ ಸವದಿ ಹಾಗೂ ಸಿ.ಸಿ.ಪಾಟೀಲ್ ಮತ್ತು ಅವರಿಗೆ ಈ ಅಶ್ಲೀಲ ದೃಶ್ಯ ರವಾನೆ ಮಾಡಿರುವ ಆರೋಪ ಹೊತ್ತ ಕೃಷ್ಣ ಪಾಲೆಮಾರ್ ಅವರ ವಿರುದ್ಧ ತನಿಖೆ ನಡೆಸಲು ವಿಧಾನಸೌಧ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.ಇವರ ವಿರುದ್ಧ ತನಿಖೆ ನಡೆಸುವಂತೆ ನಗರದ 8ನೇ ಎಸಿಎಂಎಂ ಕೋರ್ಟ್ ಈ ಪೊಲೀಸರಿಗೆ ಆದೇಶಿಸಿತ್ತು. ಆದರೆ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಕೋರ್ಟಿಗೆ ವರದಿ ನೀಡಿದ್ದಾರೆ. ವಕೀಲ ಧರ್ಮಪಾಲ ಗೌಡ ಅವರು ಸಲ್ಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿತ್ತು.

 

ಆದರೆ ಈ ದೂರು ದಾಖಲು ಮಾಡುವ ಮುನ್ನ ದೂರುದಾರರು ಸ್ಪೀಕರ್ ಅವರ ಅನುಮತಿ ಪಡೆದಿಲ್ಲ ಎನ್ನುವುದು ಪೊಲೀಸರ ವಾದ. ಈ ಸಂಬಂಧ ಅವರು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದರ ವಿಚಾರಣೆ ಇದೇ 27ರಂದು ಕೋರ್ಟ್ ಮುಂದೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry