ಸರ್ಕಾರ ತರಾಟೆಗೆ: ಆರಾಧನಾ ಹಣ ವಾಪಸ್ ಪಡೆಯಲು ಆಗ್ರಹ

7

ಸರ್ಕಾರ ತರಾಟೆಗೆ: ಆರಾಧನಾ ಹಣ ವಾಪಸ್ ಪಡೆಯಲು ಆಗ್ರಹ

Published:
Updated:

ಬೆಂಗಳೂರು: ಆರಾಧನಾ ಯೋಜನೆಯಡಿ ವಿವಿಧ ಕ್ಷೇತ್ರಗಳ ದೇವಸ್ಥಾನಗಳಿಗೆ ಹಣ ಬಿಡುಗಡೆ ಮಾಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಪ್ರತಿಪಕ್ಷಗಳ ಸದಸ್ಯರು ವಿಧಾನಸಭೆಯಲ್ಲಿ ಬುಧವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಸದಸ್ಯರೊಬ್ಬರ ಆಕ್ಷೇಪಾರ್ಹ ಮಾತು ಜೆಡಿಎಸ್ ಸದಸ್ಯರನ್ನು ಕೆರಳಿಸಿ ಧರಣಿಗೆ ದಾರಿ ತೆಗೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಬಿ.ರಮಾನಾಥ ರೈ ಅವರು `ಆರಾಧನಾ ಯೋಜನೆಯಡಿ ನಮ್ಮ ಕ್ಷೇತ್ರಕ್ಕೆ ಕೇವಲ ರೂ 40, 50 ಸಾವಿರ ಹಣ ನೀಡುತ್ತಿದ್ದು, ಇದರಿಂದ ಸ್ಥಳೀಯರಲ್ಲಿ ಅಸಮಾಧಾನ ಹೆಚ್ಚಾಗಿದೆ. ಈ ಹಣ ಕೊಡುವುದಕ್ಕಿಂತ ವಾಪಸು ಪಡೆದು, ಇಡೀ ಯೋಜನೆಯನ್ನೇ ರದ್ದು ಮಾಡಿ~ ಎಂದು ಆಕ್ಷೇಪಿಸಿದರು.

ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಸದಸ್ಯರು ಧ್ವನಿಗೂಡಿಸಿ ಸರ್ಕಾರದ ವಿರುದ್ಧ ತಿರುಗಿಬಿದ್ದರು. ತಮ್ಮ ಕ್ಷೇತ್ರಗಳಿಗೂ ಈ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದು, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕೋಟಿಗಟ್ಟಲೆ ಹಣ ನೀಡಲಾಗುತ್ತಿದೆ ಎಂದು ದೂರಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, `ನನ್ನ ಕ್ಷೇತ್ರದಲ್ಲೂ ಶಾಸಕರಲ್ಲದ ವ್ಯಕ್ತಿಯೊಬ್ಬ ಆರಾಧನಾ ಯೋಜನೆಯಡಿ ಹಣ ಬಿಡುಗಡೆ ಮಾಡಿಸಿರುವುದಾಗಿ ಹೇಳಿಕೊಂಡು ಸರ್ಕಾರಿ ಆದೇಶದ ಪ್ರತಿಗಳನ್ನು ಹಿಡಿದು ತಿರುಗಾಡುತ್ತಿದ್ದಾನೆ. ನಾನೇ ಆಚಾರ್ಯ ಅವರಿಗೆ ಪತ್ರ ಬರೆದು, ಹಣ ಬಿಡುಗಡೆಗೆ ಮನವಿ ಮಾಡಿದ್ದೆ. ಬಿಜೆಪಿಗೆ ಬೇಕಾದವರು ಶಾಸಕರಲ್ಲದಿದ್ದರೂ ಹಣ ಬಿಡುಗಡೆ ಮಾಡುವ ಪ್ರವೃತ್ತಿ ಇದ್ದು, ಅದನ್ನು ನಿಲ್ಲಿಸಬೇಕು~ ಎಂದು ಆಗ್ರಹಪಡಿಸಿದರು.

ತಾರತಮ್ಯ ಸರಿಪಡಿಸಬೇಕಾದರೆ, ಇದುವರೆಗೂ ಬಿಡುಗಡೆ ಮಾಡಿರುವ ಹಣವನ್ನು ವಾಪಸ್ ಪಡೆದು, ಎಲ್ಲ ಕ್ಷೇತ್ರಗಳಿಗೂ ಸಮಾನವಾಗಿ ಮರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಪಕ್ಷದ ಸದಸ್ಯರಿಂದಲೂ ಬೆಂಬಲ ವ್ಯಕ್ತವಾಯಿತು.

ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ ಮಾತನಾಡಿ, `ಹಣ ಕೊಡುವಲ್ಲಿ ತಾರತಮ್ಯ ಆಗಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು. ಬೇಡಿಕೆ ಹೆಚ್ಚಿರುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು~ ಎಂದರು.

ಈ ಉತ್ತರದಿಂದ ಯಾರಿಗೂ ಸಮಾಧಾನವಾಗಲಿಲ್ಲ. ಆಗ ಬಿಜೆಪಿಯ ನೆಹರು ಓಲೇಕಾರ್ ಮಾತನಾಡಿ, `ಪ್ರತಿಪಕ್ಷದವರು ಆಡಳಿತ ನಡೆಸಿದಾಗಲೂ ತಾರತಮ್ಯ ಮಾಡಿದ್ದಾರೆ. ಅವರು ಕೂಡ ತಮ್ಮ ಕ್ಷೇತ್ರಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡಿಸಿಕೊಂಡಿದ್ದರು~ ಎಂದರು.

ಇದಕ್ಕೆ ಜೆಡಿಎಸ್‌ನ ಸಾ.ರಾ. ಮಹೇಶ್ ಆಕ್ಷೇಪ ವ್ಯಕ್ತಪಡಿಸಿದರು. ಆಗ ಓಲೇಕಾರ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಸ್ಪೀಕರ್ ಮುಂದೆ ತೆರಳಿ ಧರಣಿ ನಡೆಸಿದರು.  ಓಲೇಕಾರ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ನಂತರ ಧರಣಿ ವಾಪಸ್ ಪಡೆದರು.

ಶಿಕ್ಷಕರ 15,912 ಹುದ್ದೆ ಖಾಲಿ: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಒಟ್ಟು 15,912 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ವಿಧಾನಸಭೆಗೆ ತಿಳಿಸಿದರು.

ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಅವರ ಪ್ರಶ್ನೆಗೆ ಅವರು ಉತ್ತರಿಸಿದರು. `ನಿವೃತ್ತಿಯಿಂದಲೇ ಪ್ರಾಥಮಿಕ ಶಾಲೆಗಳ 8,151 ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ. ಸರ್ವ ಶಿಕ್ಷಣ ಯೋಜನೆಯಡಿಯಲ್ಲಿ 3010 ಹುದ್ದೆ ಖಾಲಿ ಇವೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ 2409; ಆರ್.ಎಂ.ಎಸ್.ಎ ಯೋಜನೆಯಡಿ 1824 ಹುದ್ದೆ ಖಾಲಿ ಇವೆ. ಇವುಗಳ ಭರ್ತಿಗೆ ಹಣಕಾಸು ಇಲಾಖೆಯ ಒಪ್ಪಿಗೆ ಇನ್ನೂ ಸಿಕ್ಕಿಲ್ಲ~ ಎಂದು ಕಾಗೇರಿ ವಿವರಿಸಿದರು.

ಗೋಶಾಲೆ ಮುಚ್ಚಲ್ಲ: ರಾಜ್ಯದಲ್ಲಿ ಒಟ್ಟು 23 ಗೋಶಾಲೆಗಳನ್ನು ಸ್ಥಾಪಿಸಿದ್ದು, ಅವುಗಳಿಂದ 13,270 ರಾಸುಗಳಿಗೆ ಅನುಕೂಲವಾಗುತ್ತಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಂಡಿದ್ದು, ಮುಚ್ಚುವ ಉದ್ದೇಶ ಇಲ್ಲ ಎಂದು ಪಶುಸಂಗೋಪನೆ ಸಚಿವ ರೇವೂನಾಯಕ ಬೆಳಮಗಿ ವಿಧಾನಸಭೆಗೆ ತಿಳಿಸಿದರು.

ಕಾಂಗ್ರೆಸ್‌ನ ರಾಜಶೇಖರ್ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಅವರು ಹುಮ್ನಾಬಾದ್‌ನಲ್ಲಿ ಗೋಶಾಲೆ ತೆರೆಯುವ ಉದ್ದೇಶ ಇಲ್ಲ ಎಂದರು. ಸಚಿವ ಎಸ್.ಸುರೇಶ್‌ಕುಮಾರ್ ಮಾತನಾಡಿ, `ಗೋಶಾಲೆಗಳಿಗೆ ಬರ ಇಲ್ಲದಂತೆ ನೋಡಿಕೊಳ್ಳಲಾಗುವುದು. ಮುಖ್ಯಮಂತ್ರಿ ಸೂಚನೆ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ~ ಎಂದರು.

ಸಭಾ ನಾಯಕರಾಗಿ ಆಚಾರ್ಯ ಮುಂದುವರಿಕೆ: ಉನ್ನತ ಶಿಕ್ಷಣ ಹಾಗೂ ಮುಜರಾಯಿ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ವಿಧಾನ ಪರಿಷತ್ತಿನ ಸಭಾ ನಾಯಕರಾಗಿ ಮುಂದುವರಿ ಯಲಿದ್ದಾರೆ ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಬುಧವಾರ ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದರು.

ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಸಭಾನಾಯಕರಾಗುವ ಅವ ಕಾಶ ಇತ್ತು. ಆದರೆ, ಅವರು ಶಾಸಕಾಂಗ ಪಕ್ಷದ ನಾಯಕರಾಗಿರುವ ಕಾರಣ ವಿ.ಎಸ್. ಆಚಾರ್ಯ ಅವರನ್ನೇ ಪರಿ ಷತ್ತಿನ ಸಭಾನಾಯಕರನ್ನಾಗಿ ಮುಂದು ವರಿಸಲು ಸರ್ಕಾರ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry